ಕೆ.ಆರ್.ಪುರ: ರಸ್ತೆ ಗುಂಡಿ ವಿರುದ್ಧ ರಸ್ತೆಗಿಳಿದ ಬಿಜೆಪಿ!

ಸ್ಥಳೀಯ ಸುದ್ದಿರಾಜಕೀಯ

ಧರ್ಮ ಬಸವನಪುರ.

9/24/20251 min read

ಕೆ.ಆರ್.ಪುರ: ರಾಜ್ಯದಾದ್ಯಂತ ರಸ್ತೆಗಳ ದುಃಸ್ಥಿತಿ ಮತ್ತು ಗುಂಡಿಗಳ ಸಮಸ್ಯೆ ಕುರಿತು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಗುರಿಯಾಗಿಟ್ಟುಕೊಂಡು ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಹದಗೆಟ್ಟಿರುವ ರಸ್ತೆ ಗುಂಡಿಗಳನ್ನು ಮುಚ್ಚುವ ಮೂಲಕ ಬಿಜೆಪಿ ವಿನೂತನವಾಗಿ ಪ್ರತಿಭಟನೆ ನಡೆಸಿ ಆಡಳಿತಾರೂಢ ಕಾಂಗ್ರೆಸ್‌‍ ಸರ್ಕಾರಕ್ಕೆ ಬಿಸಿಮುಟ್ಟಿಸಿದೆ.

ಇಂದು ಕೆ.ಆರ್.ಪು ಕ್ಷೇತ್ರದಲ್ಲಿ ಬಸವನಪುರ ವಾರ್ಡ್ ನ ಅಯ್ಯಪ್ಪನಗರದಲ್ಲಿ ಶಾಸಕ ಬೈರತಿ ಬಸವರಾಜ ಅವರ ಸೂಚನೆ ಮೇರೆಗೆ ಪಾಲಿಕೆ ಮಾಜಿ ಸದಸ್ಯ ಜಯಪ್ರಕಾಶ್ ನೇತೃತ್ವದಲ್ಲಿ ಕಾರ್ಯಕರ್ತರು, ಮುಖಂಡರು ರಸ್ತೆ ಗುಂಡಿಗಳನ್ನ ಮುಚ್ಚುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಬಸವನಪುರ ರಸ್ತೆ ಮತ್ತು ಅಯ್ಯಪ್ಪನಗರ ರಸ್ತೆ ಗುಂಡಿಗಳಿಗೆ ಜಲ್ಲಿ ಮಣ್ಣು ತುಂಬಿ ಸರಿಪಡಿಸುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆದಷ್ಟು ಬೇಗ ರಸ್ತೆ ಗುಂಡಿ ಮುಚ್ಚಬೇಕು. ಇಲ್ಲದಿದ್ದರೆ ಇನ್ನಷ್ಟು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆ ನೇತೃತ್ವ ವಹಿಸಿದ ಮಾಜಿ ಪಾಲಿಕೆ ಸದಸ್ಯ ಜಯಪ್ರಕಾಶ್ ಮಾತನಾಡಿ,ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕಾಟಾಚಾರಕ್ಕೆ, ಅವೈಜ್ಞಾನಿಕವಾಗಿ ಹಾಗೂ ಕಳಪೆ ಡಾಂಬರೀಕರಣ ಕೆಲಸ ಮಾಡಿದ್ದು, ಕ್ಷೇತ್ರದ ಎಲ್ಲಾ ರಸ್ತೆಗಳಲ್ಲೂ ಈಗಾಗಲೇ ಗುಂಡಿಗಳು ಬಿದ್ದಿದೆ ಎಂದು ಆರೋಪಿಸಿದರು.

ಗುಂಡಿಗಳಿಂದ ಸಾಕಷ್ಟು ರಸ್ತೆ ಅಪಘಾತಗಳು ಹಾಗೂ ಸಾವುಗಳು ಸಂಭವಿಸಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದು, ರಸ್ತೆ ತಡೆದು ಗುಂಡಿ ಮುಚ್ಚುವ ಹೋರಾಟ ನಡೆಸಲಾಯಿತು ಎಂದರು.

ಕೆಆರ್‌ಪುರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅನುದಾನ ನೀಡದೆ ರಾಜ್ಯ ಸರ್ಕಾರ ತಾರತಮ್ಯ ವೆಸಗುತ್ತಿದೆ. ಅನುದಾನವಿಲ್ಲದೆ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದಾರೆ ಎಂದರು.

ಕೆಆರ್‌ಪುರ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಲೋಕೇಶ್ ಮಾತನಾಡಿ, ಬೆಂಗಳೂರು ಅಭಿವೃದ್ಧಿ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಮಳೆ ಬಂದರೆ ಸಾಕು ಸಂಪೂರ್ಣ ಜಲಾವೃತವಾಗುತ್ತಿದೆ. ಗುಂಡಿಗಳು ಕಾಣದೆ ಅದೆಷ್ಟೋ ಮಂದಿ ತಮ್ಮ ಪ್ರಾಣವನ್ನೂ ಸಹ ಕಳೆದುಕೊಂಡಿದ್ದಾರೆ ಎಂದರು.

ಜನರ ವಿಶ್ವಾಸ ಗಳಿಸುವಲ್ಲಿ ವಿಫಲವಾಗಿರುವ ಸರ್ಕಾರಕ್ಕೆ ಜನರೇ ತಕ್ಕ ಪಾಠ ಕಲಿಸಿ ಸರ್ಕಾರ ಬದಲಾಗುತ್ತದೆ ಎಂದು ಭವಿಷ್ಯ ನುಡಿದರು.

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಮುನೇಗೌಡ, ಕಾರ್ಯದರ್ಶಿ ಪ್ರಧಾನ ಶ್ರೀರಾಮುಲು,ಮಹಿಳಾ ಅಧ್ಯಕ್ಷೆ ಗೌರಮ್ಮ, ಮುಖಂಡರಾದ ಪಟಾಕಿ ರವಿ, ಜಯಂತಿ, ಲಲಿತಮ್ಮ, ರಾಮಚಂದ್ರ, ಕೃಷ್ಣಮೂರ್ತಿ, ಓಂ ಮಹೇಶ್, ಸೋಮು, ಕೌಸಲ್ಯ ರಾಮ್ , ಆಂಜನಿ, ಪ್ರಕಾಶ್, ಗೋವಿಂದಸ್ವಾಮಿ, ಕೃಷ್ಣಪ್ಪ, ಲಕ್ಷ್ಮೀ, ಶೋಭಾ, ಕಲಾ ಮತ್ತಿತರರಿದ್ದರು.