ಕೆ.ಆರ್.ಪುರ: ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ 77ನೇ ಗಣರಾಜ್ಯೋತ್ಸವ, ಶಾಸಕ ಭೈರತಿ ಬಸವರಾಜರಿಂದ ಧ್ವಜಾರೋಹಣ

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

1/26/20261 min read

ಕೆ.ಆರ್.ಪುರ: ಕೆ.ಆರ್.ಪುರ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ 77ನೇ ಗಣರಾಜ್ಯೋತ್ಸವದ ಅಂಗವಾಗಿ ಶಾಸಕ ಬಿ.ಎ.ಬಸವರಾಜ ಅವರು ಧ್ವಜರೋಹನ ನೇರವೇರಿಸಿದರು.

ಧ್ವಜರೋಹನ ನೇರವೇರಿಸಿ ಮಾತನಾಡಿದ ಅವರು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟ, ಸಂವಿಧಾನಾತ್ಮಕ ಮೌಲ್ಯಗಳು ಹಾಗೂ ಪ್ರಜಾಸತ್ತಾತ್ಮಕ ಪರಂಪರೆಯನ್ನು ಸ್ಮರಿಸುವ ಅತ್ಯಂತ ಮಹತ್ವದ ದಿನವಾಗಿದೆ.

ಡಾ. ಬಿ.ಆರ್. ಅಂಬೇಡ್ಕರ್ ಅವರಿಂದ ರೂಪುಗೊಂಡಿರುವ ನಮ್ಮ ಸಂವಿಧಾನವು ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ತತ್ವಗಳ ಮೇಲೆ ನಿಂತಿದ್ದು, ಪ್ರತಿಯೊಬ್ಬ ನಾಗರಿಕನಿಗೂ ನ್ಯಾಯ ಮತ್ತು ಗೌರವ ಒದಗಿಸುವ ಶಾಶ್ವತ ದಾಖಲೆ ಎಂದು ಅಭಿಪ್ರಾಯಪಟ್ಟರು.

ನಮ್ಮ ದೈನಂದಿನ ಕರ್ತವ್ಯ ನಿರ್ವಹಣೆಯಲ್ಲಿ ಶಿಸ್ತು, ಪ್ರಾಮಾಣಿಕತೆ ಹಾಗೂ ಹೊಣೆಗಾರಿಕೆಯನ್ನು ಪಾಲಿಸುವುದೇ ನಿಜವಾದ ರಾಷ್ಟ್ರಭಕ್ತಿ, ಸಾರ್ವಜನಿಕ ಬದುಕಿನಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರೂ ಜನರ ನಂಬಿಕೆಗೆ ಪಾತ್ರರಾಗುವಂತೆ ಪಾರದರ್ಶಕತೆ ಮತ್ತು ಸೇವಾ ಭಾವನೆಯೊಂದಿಗೆ ಕೆಲಸ ಮಾಡಿ, ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕೆಂದರು.

ಯುವಜನರು ಸಂವಿಧಾನದ ಆಶಯಗಳನ್ನು ಅರಿತು ದೇಶದ ಅಭಿವೃದ್ಧಿಗೆ ಸಕಾರಾತ್ಮಕವಾಗಿ ಕೊಡುಗೆ ನೀಡಬೇಕು. ಸಾಮಾಜಿಕ ಏಕತೆ, ಸೌಹಾರ್ದತೆ ಹಾಗೂ ಪರಸ್ಪರ ಗೌರವದಿಂದ ಶಕ್ತಿಶಾಲಿ ಭಾರತ ನಿರ್ಮಾಣಕ್ಕೆ ಮುಂದಾಗೋಣ ಎಂದು ತಿಳಿಸಿದರು. ರಾಷ್ಟ್ರದ ಏಕತೆ ಮತ್ತು ಅಖಂಡತೆಯನ್ನು ಕಾಪಾಡುವ ಸಂಕಲ್ಪವನ್ನು ಈ ಗಣರಾಜ್ಯೋತ್ಸವದಂದು ಎಲ್ಲರೂ ದೃಢಪಡಿಸಬೇಕೆಂದರು.

ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ದುಡಿಯುತ್ತಿದ್ದೇನೆ. ಯಾವುದೇ ಅಡೆತಡೆ ಬಂದರೂ ಕ್ಷೇತ್ರದ ಅಭಿವೃದ್ಧಿ ಮಾತ್ರ ಹಿನ್ನಡೆಯಾಗುವುದಕ್ಕೆ ಬಿಡುವುದಿಲ್ಲ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ ಪ್ರತಿಯೊಬ್ಬರ ಮನೆ ಮೇಲೆ ಧ್ವಜ ಹಾರಿಸಲು ಮನವಿ ಮಾಡಿದರು.

ಈ ಸಂದರ್ಭದಲ್ಲಿ ವಿಶೇಷ ತಹಶಿಲ್ದಾರ್ ನರಸಿಂಹ ಮೂರ್ತಿ,ಬಿಇಒ ಗೋವಿಂದಪ್ಪ, ಮಂಡಲ ಅಧ್ಯಕ್ಷ ಮುನೇಗೌಡ, ಮಾಜಿ ಪಾಲಿಕೆ ಸದಸ್ಯರಾದ ಅಂತೋನಿಸ್ವಾಮಿ, ಶ್ರೀಕಾಂತ್, ಎಸ್.ಎಸ್.ಪ್ರಸಾದ್, ಸಿದ್ದಲಿಂಗಯ್ಯ, ಮುಖಂಡರಾದ ಶಿವಪ್ಪ,  ಕೆ.ಹೇಮಂತ್,ದುಶ್ಯಂತ್ ರಾಜ್,ಪ್ರಶಾಂತ್, ಭಟ್ಟರಹಳ್ಳಿ ರಾಕಿ,ಗಿರೀಶ್ ನಂಜಪ್ಪ,ಕೆಪಿ ಕೃಷ್ಣ,ರಮೇಶ್‌ ಗೌಡ,ಶಮಂತ್ ಇದ್ದರು.