ಕೆ.ಆರ್.ಪುರ: 79ನೇ ಸ್ವಾತಂತ್ರ್ಯೋತ್ಸವ ಆಚರಣೆ. ತ್ಯಾಗ, ಬಲಿದಾನಗಳ ಪ್ರತೀಕವೇ ಸ್ವಾತಂತ್ರ್ಯ:ಶಾಸಕ ಭೈರತಿ ಬಸವರಾಜ್
ಸ್ಥಳೀಯ ಸುದ್ದಿ


ಕೆ.ಆರ್.ಪುರ: ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಂತಹ ಅನೇಕ ಮಹಾನ್ ಹೋರಾಟಗಾರರ, ವೀರ ಯೋಧರ ಸ್ಮರಣೆ ಎಲ್ಲರ ಆದ್ಯ ಕರ್ತವ್ಯ. ಅವರ ತ್ಯಾಗ, ಬಲಿದಾನಗಳ ಪ್ರತೀಕವೇ ಸ್ವಾತಂತ್ರ್ಯ ಬಂದಿದೆ ಎಂದು ಶಾಸಕ ಭೈರತಿ ಬಸವರಾಜ್ ತಿಳಿಸಿದರು.
ಬೆಂಗಳೂರು ಪೂರ್ವ ತಾಲೂಕಿನ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಕೆ.ಆರ್.ಪುರದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣಾ ನೆರವೇರಿಸಿ, ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿ, ಬಳಿಕ ಮಾತನಾಡಿದ ಅವರು.
ದೇಶದ ಸ್ವತಂತ್ರ್ಯ ಕ್ಕಾಗಿ ತಮ್ಮ ಜೀವವನ್ನೇ ತ್ಯಾಗ ಮಾಡಿ ಹೋರಾಟಗಾರರು ದೇಶದ ಆಸ್ತಿಗಳಿದ್ದಂತೆ ಅವರ ಪರಿಶ್ರಮದಿಂದ ನಾವು ಸ್ವತಂತ್ರವಾಗಿದ್ದೇವೆ ಎಂದರು. ಹೋರಾಟಗಾರರಾದ ಮಹಾತ್ಮ ಗಾಂಧೀಜಿ, ನೆಹರು, ಸರ್ಧಾರ್ ವಲ್ಲಬಾಯಿ ಪಟೇಲ್, ಸುಭಾಷ್ ಚಂದ್ರ ಬೋಸ್, ಚಂದ್ರಶೇಖರ್ ಅಜಾದ್ ಸೇರಿದಂತೆ ಹಲವು ಮಹನೀಯರ ಪರಿಶ್ರಮದಿಂದ ಸ್ವತಂತ್ರ ಸಿಕ್ಕಿದೆ ಎಂದರು
ಸ್ವಾತಂತ್ರ್ಯ ವನ್ನು ಕೇವಲ ಸಂಭ್ರಮಿಸಿದರೆ ಸಾಲದು ದೇಶದ ಪ್ರಗತಿಗೆ ತನು, ಮನ, ಧನ, ಸಮರ್ಪಣ ಮನೋಭಾವದಿಂದ ದೇಶದ ರಕ್ಷಣೆಗೆ ಕಂಕಣ ಬದ್ದರಾಗಬೇಕಾಗಿದೆ. ದಾಸ್ಯ, ಮೌಢ್ಯವನ್ನು, ಅಳಿಸಿ ಹಾಕಿ ಆಧುನಿಕ ಭಾರತ, ವೈಜ್ಞಾನಿಕ ಭಾರತ, ಸಮೃದ್ದಿ ಭಾರತವನ್ನು ಕಟ್ಟಬೇಕಾಗಿದೆ ಎಂದು ಕರೆ ನೀಡಿದರು.
ನಮ್ಮ ದೇಶವು ವಿವಿಧತೆಯಲ್ಲಿ ಏಕತೆ ಹೊಂದಿದ ರಾಷ್ಟ್ರವಾಗಿದೆ. ದೇಶದಲ್ಲಿ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಭಾವನೆಗಳು ಇವೆ ಎಂದರೆ ಅದು ಸಂವಿಧಾನ ನಮಗೆ ನೀಡಿರುವ ಕೊಡುಗೆಯಾಗಿದೆ ಎಂದರು.
ಪ್ರಪಂಚದಲ್ಲಿಯೇ ಅತ್ಯಂತ ಜೀವಂತವೆನಿಸಿದ ಹಾಗೂ ಅತೀ ದೊಡ್ಡದಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ನಮ್ಮ ದೇಶವು ನಡೆಸಿಕೊಂಡು ಬಂದಿದೆ. ಇದಕ್ಕಾಗಿ ಭಾರತದ ಸಂವಿಧಾನ ಶಿಲ್ಪಿ, ಮಹಾನ್ ಮಾನವತಾವಾದಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸದಾ ಸ್ಮರಿಸಲೇಬೇಕು ಎಂದು ಅವರು ಹೇಳಿದರು.
ವಿವಿಧತೆಯೇ ಈ ನೆಲದ ವೈಶಿಷ್ಟ್ಯ. ಎಲ್ಲ ಜನಾಂಗ, ಧರ್ಮದವರು ಒಂದಾಗಿ ದೇಶದ ಘನತೆ ಎತ್ತಿ ಹಿಡಿಯಬೇಕು. ಬಾಲ್ಯದಿಂದಲೇ ನಮ್ಮ ಸಂಸ್ಕೃತಿ, ಪರಂಪರೆಗಳಲ್ಲಿನ ಮೌಲ್ಯಗಳನ್ನು ಗುರುತಿಸಿ ಅನುಸರಣೆ ಮಾಡಬೇಕು ಎಂದರು.
ತಹಶೀಲ್ದಾರ್ ರಾಜೀವ್ ಮಾತನಾಡಿ,ಪ್ರತಿಯೊಬ್ಬ ಭಾರತೀಯನಲ್ಲಿ ನನ್ನ ದೇಶ ಎಂಬ ದೇಶಾಭಿಮಾನ ಸೃಷ್ಟಿಯಾಗಬೇಕು. ಭಾರತವಿಂದು ವಿಶ್ವದ ಬಲಿಷ್ಠ ರಾಷ್ಟ್ರವಾಗಿ ಎಲ್ಲ ರಂಗದಲ್ಲೂ ಮುಂಚೂಣಿಯಲ್ಲಿದೆ. ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಾಣಕ್ಕೆ ಪ್ರಬಲ ಸಂವಿಧಾನವನ್ನು ನೀಡಿದ ಡಾ.ಅಂಬೇಡ್ಕರ್ ಅವರನ್ನು ಸ್ಮರಿಸಿಕೊಳ್ಳಬೇಕು ಎಂದರು.
ನಮ್ಮಲ್ಲಿನ ಯುವಶಕ್ತಿ ಬಳಸಿ ಇಡೀ ವಿಶ್ವದಲ್ಲೇ ಬಲಿಷ್ಠ ರಾಷ್ಟ್ರವಾಗಿ ಬೆಳೆಯಲು ಮೊದಲು ದೇಶಾಭಿಮಾನ ಬೆಳೆಸಬೇಕಿದೆ. ಈ ಕೆಲಸಕ್ಕೆ ಈ ಕಾರ್ಯ ಕ್ರಮ ಸೂಕ್ತ ವೇದಿಕೆಯಾಗಿದೆ. ಮುಂದಿನ ಪೀಳಿಗೆ ಮಕ್ಕಳಿಗೆ ಮೊದಲು ದೇಶದ ಬಗ್ಗೆ ಪ್ರೇಮ, ವಾತ್ಸಲ್ಯ, ಅಭಿಮಾನ ಬೆಳೆಸುವ ಕೆಲಸ ಮಾಡೋಣ ಎಂದು ಕರೆ ನೀಡಿದರು.
ಮೈದಾನದಲ್ಲಿ ಕೆ.ಆರ್.ಪುರದ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ನಡೆದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಕಣ್ಮನ ಸೆಳೆದವು. ಸಮಾಜದ ವಿವಿಧ ಕ್ಷೇತ್ರಗಳ ಸಾಧಕರುನ್ನು ಸತ್ಕರಿಸಲಾಯಿತು.
ಸಂದರ್ಭದಲ್ಲಿ ಬಿಇಒ ಗೋವಿಂದಪ್ಪ, ಇಒ ವಸಂತ್ ಕುಮಾರ್, ಪಾಲಿಕೆ ನಾಮನಿರ್ದೇಶಿತ ಮಾಜಿ ಸದಸ್ಯ ಅಂತೋಣಿ ಸ್ವಾಮಿ, ಗೌರಮ್ಮ, ಮುಖಂಡರಾದ ಶಿವಪ್ರಸಾದ್, ರವಿ, ಭಟ್ಟರಹಳ್ಳಿ ಮಂಜು, ಮತ್ತಿತರರಿದ್ದರು.