ಕೆ.ಆರ್.ಪುರ: ಲಂಚ ಕೇಳಿದ ಆರ್ ಓ ವಿರುದ್ಧ ಕ್ರಮಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚನೆ
ಸ್ಥಳೀಯ ಸುದ್ದಿ


ಕೆ.ಆರ್.ಪುರ: ಖಾತಾ ಮಾಡಿಸಲು 10-15 ಸಾವಿರ ಲಂಚ ಕೇಳುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಕೆ.ಆರ್. ಪುರಂ ಆರ್ ಓ ಬಸವರಾಜ್ ಅವರ ವಿರುದ್ಧ ಕ್ರಮ ಜರುಗಿಸುವಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರಿನ ಕೆ ಆರ್ ಪುರಂನ ಟಿ.ಸಿ.ಪಾಳ್ಯದ ವೆಂಗಯ್ಯ ಪಾರ್ಕ್ ನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಶನಿವಾರ ಬೆಂಗಳೂರು ನಡಿಗೆ ಅಭಿಯಾನ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಕಾರ್ಯಕ್ರಮದ ವೇಳೆ ಸುಲ್ತಾನ್ ಮಿರ್ಜಾ ಎಂಬುವವರು ಮಾತನಾಡಿ, "ಇಷ್ಟು ದಿನ ನಮ್ಮ ಆಸ್ತಿಯ ಖಾತೆ ಮಾಡಿಸಲು ಬಹಳಷ್ಟು ಕಷ್ಟಪಡಬೇಕಾಗಿತ್ತು. ಆದರೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಇದಕ್ಕಾಗಿ ಯೋಜನೆ ರೂಪಿಸಿ ಬಹಳ ಅನುಕೂಲ ಮಾಡಿಕೊಟ್ಟಿದ್ದಾರೆ. ಆದರೆ ಖಾತಾ ಮಾಡಿಸಲು ಕಂದಾಯ ಅಧಿಕಾರಿಗಳು ಹೆಚ್ಚು ಲಂಚ ಕೇಳುತ್ತಾರೆ. ಈ ವಿಚಾರವಾಗಿ ಬಿಬಿಎಂಪಿ ಕಮಿಷನರ್ ಬಳಿ ದೂರು ನೀಡಿದ್ದೇನೆ" ಎಂದರು.
ಈ ವೇಳೆ ಮಾತನಾಡಿದ ಶಿವಕುಮಾರ್ ಅವರು, "ಲಂಚ ಕೇಳುತ್ತಿರುವ ಅಧಿಕಾರಿಯ ಹೆಸರು ಹೇಳಿ, ನಾನು ಇಲ್ಲೇ ಆ ಅಧಿಕಾರಿಯನ್ನು ಅಮಾನತು ಮಾಡುತ್ತೇನೆ" ಎಂದರು.
ಆಗ ಸುಲ್ತಾನ್ ಮಿರ್ಜಾ ಅವರು, "ಆರ್ ಓ ಬಸವರಾಜ್, ವಿಜಿನಾಪುರ ಆರ್ ಐ ಅವರು ಲಂಚದ ಬೇಡಿಕೆ ಇಟ್ಟಿದ್ದಾರೆ. ನಾನು ಕಳೆದ ಎರಡು ತಿಂಗಳಿನಿಂದ ಅಲೆದಾಡುತ್ತಿದ್ದು, ಇವರು 10-15 ಸಾವಿರ ಲಂಚದ ಬೇಡಿಕೆ ಇಡುತ್ತಿದ್ದಾರೆ. ಆನ್ ಲೈನ್ ಮೂಲಕ ಅರ್ಜಿ ಹಾಕಿದರೂ ಅನುಮೋದನೆ ನೀಡುವುದಿಲ್ಲ. ಹೊರಮಾವು ಕಚೇರಿಗೆ ಹೋಗಿ ಎನ್ನುತ್ತಾರೆ. ಅಲ್ಲಿಗೆ ಹೋದರೆ ವಿಜಿನಾಪುರ ಬಿಬಿಎಂಪಿ ಕಚೇರಿಗೆ ಹೋಗಿ ಎನ್ನುತ್ತಾರೆ. ನನಗೆ ಮಾತ್ರ ತೊಂದರೆಯಾಗುತ್ತಿಲ್ಲ. ಹಿರಿಯ ನಾಗರಿಕರಿಗೂ ತೊಂದರೆಯಾಗುತ್ತಿದೆ ಎಂದು ಹೇಳಿದರು.
ಕಚೇರಿಯಲ್ಲಿ ಮಂಜು ಎನ್ನುವ ದಲ್ಲಾಳಿಯನ್ನು ಇಟ್ಟಿದ್ದಾರೆ. ಆತ ಪಾಲಿಕೆಯ ಸಿಬ್ಬಂದಿಯಲ್ಲ. ಆತ ಇದೆಲ್ಲವನ್ನು ನೋಡಿಕೊಳ್ಳುತ್ತಾನೆ" ಎಂದು ದೂರಿದರು.
ನಂತರ ಪ್ರತಿಕ್ರಿಯೆ ನೀಡಿದ ಡಿಸಿಎಂ ಶಿವಕುಮಾರ್ ಅವರು, ಲಂಚ ಬೇಡಿಕೆ ವಿಚಾರವಾಗಿ ಶೀಘ್ರ ಪರಿಶೀಲನೆ ನಡೆಸಿ ಶನಿವಾರ ಸಂಜೆಯೊಳಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಪಾಲಿಕೆ ಆಯುಕ್ತರಿಗೆ ಸೂಚಿಸಿದರು. ಇದರ ಜೊತೆಗೆ ಏಜೆಂಟ್ ವಿರುದ್ದ ಪೊಲೀಸ್ ಇಲಾಖೆ ಮತ್ತು ಪಾಲಿಕೆ ಕ್ರಮ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.