ಕೆ.ಆರ್.ಪುರ: ಬೆಂಗಳೂರು ನಡಿಗೆ ಜನರ ಸಮಸ್ಯೆಗಳಿಗೆ ಸ್ಪಂದಿಸಿದ ಡಿಸಿಎಂ
ಸ್ಥಳೀಯ ಸುದ್ದಿ


ಕೆ.ಆರ್.ಪುರ: ಜನರ ಸಮಸ್ಯೆಗಳ ಶೀಘ್ರ ನಿವಾರಣೆಗೆ ನಮ್ಮ ಸರ್ಕಾರ ಹೆಜ್ಜೆ ಇಟ್ಟಿದೆ. ಟೆಂಡರ್ ಇಲ್ಲದೇ ಪಾಲಿಕೆಯ ಕೌನ್ಸಿಲ್ 10 ಕೋಟಿ ಮೊತ್ತದ ಕಾಮಗಾರಿಗಳಿಗೆ ಹಾಗೂ ಪಾಲಿಕೆ ಆಯುಕ್ತರು 3 ಕೋಟಿ ರೂಪಾಯಿ ಖರ್ಚು ಮಾಡಲು ಅವಕಾಶ ನೀಡಲಾಗಿದೆ. ಬಿಬಿಎಂಪಿ ಇದ್ದಾಗ 10 ಕೋಟಿ ಖರ್ಚು ಮಾಡಬಹುದಾಗಿತ್ತು. ಈಗ ಆ ಹಣ 50 ಕೋಟಿಗೆ ಏರಿಕೆಯಾಗಿದೆ. ಬೆಂಗಳೂರಿನ ಅಭಿವೃದ್ಧಿಗೆ ಐದು ಪಟ್ಟು ಹೆಚ್ಚು ಅವಕಾಶ ದೊರೆತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ವಿವರಿಸಿದರು. ಡಿಸಿಎಂ.ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಬೆಂಗಳೂರು ನಡಿಗೆ ಕಾರ್ಯಕ್ರಮದಲ್ಲಿ ಕೆ.ಆರ್.ಪುರದ ವೆಂಗಯ್ಯ ಪಾರ್ಕ್ ಟಿಸಿ ಪಾಳ್ಯದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ಸ್ಪಂದಿಸಿದ ಬಳಿಕ ವಿವಿಧ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದರು.
ನೂತನ ಐದು ಪಾಲಿಕೆಗಳು ಬೆಂಗಳೂರಿನ ಅಭಿವೃದ್ಧಿಯಲ್ಲಿ ಇತಿಹಾಸ ಸೃಷ್ಟಿಸಲಿವೆ. ಬೆಂಗಳೂರು ನಗರದಿಂದ 6 ಸಾವಿರ ಕೋಟಿ ತೆರಿಗೆ ಸಂಗ್ರಹವಾಗುತ್ತಿದೆ. ಇದರಲ್ಲಿ ಬೆಂಗಳೂರು ನಗರ ಪೂರ್ವ ಪಾಲಿಕೆ 1600 ಕೋಟಿ ರೂಪಾಯಿ ಪಾಲು ಹೊಂದಿದೆ. ಈ ಮೊದಲು ಎಲ್ಲಾ ಭಾಗಗಳ ತೆರಿಗೆ ಹಂಚಿಕೆಯಾಗುತ್ತಾ ಇತ್ತು. ಈಗ ಆಯಾ ಪ್ರದೇಶಗಳ ತೆರಿಗೆ ಅಲ್ಲಿಯೇ ವಿನಿಯೋಗವಾಗಲಿದೆ ಎಂದು ತಿಳಿಸಿದರು.
ಪಾಲಿಕೆಗಳ ವಿಂಗಡಣೆಯಿಂದ ಅಭಿವೃದ್ಧಿಗೆ ಹೆಚ್ಚು ಸಹಕಾರಿಯಾಗಲಿದ್ದು ವಾರ್ಡಗಳ ಸಮಗ್ರ ಅಭಿವೃದ್ಧಿ ನಮ್ಮ ಗುರಿ ಎಂದು ತಿಳಿಸಿದರು.
ಉದ್ಯಾನ ನಡಿಗೆ ವೇಳೆ ಸಾರ್ವಜನಿಕರಿಂದ ಬಂದ ಅಹವಾಲುಗಳನ್ನ ಆಲಿಸಿದರು. ಈ ವೇಳೆ ಪಾರ್ಕ್ನಲ್ಲಿ ನಡೆಯುತ್ತಿರುವ ಅಸಭ್ಯ ವರ್ತನೆ ಬಗ್ಗೆ ಮಹಿಳೆಯೊಬ್ಬರು ದೂರು ನೀಡಿದರು. ಶರ್ಟ್ ಬಿಚ್ಚಿಕೊಂಡು ಮಲಗಿರುತ್ತಾರೆ. ಹೀಗಾಗಿ ಸಂಜೆ ವೇಳೆ ಪಾರ್ಕ್ನಲ್ಲಿ ಹೆಣ್ಮಕ್ಕಳು ಓಡಾಡೋದು, ವಾಕಿಂಗ್ ಮಾಡುವುದು ಕಷ್ಟವಾಗುತ್ತಿದೆ ಎಂದು ಹೇಳಿದ್ದಾರೆ.
ಈ ವೇಳೆ ಹಣ ಕಟ್ಟಿದರೂ ನೀರು ಬರುತ್ತಿಲ್ಲ ಅಂತಾ ಮತ್ತೊಬ್ಬರು ದೂರು ನೀಡಿದ್ದಾರೆ. BWSSB ಅಧಿಕಾರಿ ಯಾರಿದ್ದೀರಯ್ಯ ಎಂದ ಡಿಸಿಎಂ, ಅವರು ಕಂಪ್ಲೇಂಟ್ ಮಾಡುತ್ತಿದ್ದಾರೆ ಬರಕೊಳ್ಳಿ ಎಂದರು. ಸ್ಥಳೀಯ ನಿವಾಸಿ ರಮೇಶ್ ಬಾಬು ರೆಡ್ಡಿ ಎಂಬುವವರು ರಸ್ತೆಗಳು ಕಿತ್ತು ಹಾಳಾಗಿ ಹೋಗಿದೆ. ರಸ್ತೆಯಿಲ್ಲ, ಡ್ರೈನೇಜ್ ಇಲ್ಲ. ಮುಖ್ಯ ರಸ್ತೆಗೆ ಕಾಮಗಾರಿ ಮಾಡಲು ಮನವಿ ಮಾಡಿದರು.
ಈ ಕೆಆರ್ ಪುರಂ ಸುತ್ತಮುತ್ತ ದೇಹ ದಹನಕ್ಕೆ ವ್ಯವಸ್ಥೆ ಇಲ್ಲ. ಹೃದಯದ ಸಮಸ್ಯೆ ಆದಾಗ ಜಯದೇವ ಆಸ್ಪತ್ರೆ ಹೋಗಲು ಟ್ರಾಫಿಕ್ ಜಾಮ್ ಆಗುತ್ತೆ. ಕೆ.ಆರ್.ಪುರ ಭಾಗದಲ್ಲಿ ಒಂದು ಜಯದೇವ ಆಸ್ಪತ್ರೆ ನಿರ್ಮಾಣಕ್ಕೆ ಕೆಲ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಭಾಗದಲ್ಲಿ ಸಂಚಾರ ಸಮಸ್ಯೆ ಬಗ್ಗೆ ಮಾಹಿತಿಗಳನ್ನು ಕಲೆಹಾಕುತ್ತಿದ್ದು,ಹಂತಹಂತವಾಗಿ ಸಂಚಾರ ದಟ್ಟಣೆ ಸಮಸ್ಯೆ ಪರಿಹಾರ ಮಾಡುವ ಕಾರ್ಯ ಮಾಡಲಾಗುವುದು ಎಂದು ಹೇಳಿದರು.
ಆಸ್ಪತ್ರೆ, ಅಕ್ರಮ ಭೂ ಒತ್ತುವರಿ, ಸಂತೆಯ ಸ್ಥಳಾಂತರ, ಸಂಚಾರ ದಟ್ಟಣೆ ನಿವಾರಣೆಗೆ ಮೇಲ್ಸೇತುವೆ, ಪಾದಚಾರಿ ಮೇಲ್ಸೇತುವೆ, ಸಿಸಿಟಿವಿ ಅಳವಡಿಕೆ ವಿಚಾರವಾಗಿ ಸಾರ್ವಜನಿಕರು ಬೇಡಿಕೆ ಇಟ್ಟಿದ್ದಾರೆ. ಈ ಎಲ್ಲಾ ವಿಚಾರಗಳಿಗೂ ನಾವು ಶೀಘ್ರ ಸ್ಪಂದಿಸಲಿದ್ದೇವೆ. ಪಾದಚಾರಿ ಮಾರ್ಗ ಒತ್ತುವರಿ ತಪ್ಪಿಸಲು ರಸ್ತೆ ಬದಿ ವ್ಯಾಪಾರಿಗಳಿಗೆ ತಳ್ಳುವ ಗಾಡಿ ನೀಡಲಾಗಿದೆ. ಶೇ.10-30 ರಷ್ಟು ಹಣ ಪಾವತಿಸಿದರೆ ವಾಹನ ನೀಡುವ ವ್ಯವಸ್ಥೆ ಪಾಲಿಕೆಯಲ್ಲಿದೆ. ನಗರದಲ್ಲಿ ಸುಮಾರು 30 ಸಾವಿರ ರಸ್ತೆ ವ್ಯಾಪಾರಿಗಳಿದ್ದಾರೆ. ಎಲ್ಲೆಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ನಾಗರಿಕರೊಬ್ಬರು ಮನವಿ ನೀಡಿದ್ದಾರೆ. ಇವೆಲ್ಲದಕ್ಕೂ ಪ್ರಮುಖ ಆದ್ಯತೆ ನೀಡಿ ಆದಷ್ಟು ಬೇಗ ಬಗೆಹರಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಬೈರತಿ ಬಸವರಾಜ್, ಎಂಎಲ್ಸಿ ಶ್ರೀನಿವಾಸ್ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್,ಬೆಂ ಪೂರ್ವ ಜಿಲ್ಲಾ ಅಧ್ಯಕ್ಷ ಡಿಕೆ ಮೋಹನ್ ಬಾಬು,ಪ್ರೊ. ರಾಜೀವ್ ಗೌಡ, ಬಿಬಿಎಂಪಿ ಮುಖ್ಯ ಆಯುಕ್ತ ಡಾ. ಮಹೇಶ್ವರರಾವ್ ತಹಶಿಲ್ದಾರ್ ರಾಜೀವ್ ಮತ್ತಿತರರು ಇದ್ದರು.