ಕೆ.ಆರ್.ಪುರ: ವೇಣುಗೋಪಾಲ ಸ್ವಾಮಿ ಸನ್ನಿಧಿಯಲ್ಲಿ ಸಂಭ್ರಮದ ಕೃಷ್ಣಜನ್ಮಾಷ್ಟಮಿ
ಸ್ಥಳೀಯ ಸುದ್ದಿ


ಕೆ.ಆರ್ ಪುರ: ನಾಡಿನೆಲ್ಲೆಡೆ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ಮನೆಮಾಡಿದ್ದು, ಕೆ.ಆರ್.ಪುರ ಕ್ಷೇತ್ರದ ದೇವಸಂದ್ರ ಗ್ರಾಮದ ಪುರಾತನ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯಲ್ಲಿ ವಿಶೇಷ ಪೂಜೆ ಹಾಗೂ ಅಲಂಕಾರ ಮಾಡಲಾಗಿತ್ತು.
ದೇವಸಂದ್ರ ಗ್ರಾಮದಲ್ಲಿ ಅನಾದಿಕಾಲದಿಂದಲೂ ನೆಲೆಸಿರುವ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯದಲ್ಲಿ ಇಂದು ಭಕ್ತಿ ಭಾವ ಹಾಗೂ ಸಡಗರದಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡಲಾಗುತ್ತಿದೆ.
ದಿವಾಂಗತ ಎ.ಕೃಷ್ಣಪ್ಪ ಅವರ ಕುಟುಂಬ ಮತ್ತು ಸಮುದಾಯದ ಮುಖಂಡರು ಸೇರಿ ದೇವಾಲಯದಲ್ಲಿ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣನಿಗೆ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ಮುಂಜಾನೆಯಿಂದಲೇ ವಿಶೇಷ ಪೂಜೆ ಹಾಗೂ ಅಭಿಷೇಕ ನೆರವೇರಿಸಲಾಗಿದೆ. ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸಾವಿರಾರು ಜನರು ಸರತಿ ಸಾಲಿನಲ್ಲಿ ಆಗಮಿಸಿ ದೇವರ ದರ್ಶನ ಪಡೆದು ತಮ್ಮ ಇಷ್ಟಾರ್ಥಗಳಿಗಾಗಿ ಪೂಜೆ ಸಲ್ಲಿಸಿದರು. ದೇವಾಲಯಕ್ಕೆ ಬರುವ ಎಲ್ಲಾ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.
ಅಭಿಜಿತ್ ಮುಹೂರ್ತ ದಲ್ಲಿ ಮಧ್ಯಾಹ್ನ 11.55 ಕ್ಕೆ ಮಹಾ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ಮಾಡಲಾಯಿತು.
ಮಾಜಿ ಶಾಸಕರಾದ ಪೂರ್ಣಿಮಾ ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ್ ಕುಟುಂಬ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಡಿ.ಕೆ.ಮೋಹನ್ ಡಿಕೆ ಮೋಹನ್ ಬಾಬು,ಮುಖಂಡರಾದ ಡಿಕೆ ದೇವೇಂದ್ರ,ಡಿಕೆ ರಮೇಶ್ ಅವರು ಕುಟುಂಬದ ಸಮೇತರಾಗಿ ಆಗಮಿಸಿ ದೇವರಿಗೆ ವಿಶೇಷ ಸೇವೆ ಸಲ್ಲಿಸಿದರು.
ಬಳಿಕ ಮಾತನಾಡಿದ ಪೂರ್ಣಿಮಾ ಶ್ರೀನಿವಾಸ್, ಪ್ರತೀ ವರ್ಷ ಶ್ರೀಕೃಷ್ಣ ಜನ್ಮಾಷ್ಟಮಿ ಯನ್ನು ಅದ್ದೂರಿಯಾಗಿ ಆಚರಿಸಿ ಭಕ್ತಾದಿಗಳಿಗೆ ಸಾರ್ವಜನಿಕರಿಗೆ ಅನ್ನದಾನ ಏರ್ಪಡಿಸುತ್ತಾ ಬಂದಿದ್ದೇವೆ, ಕಾರ್ಯಕ್ರಮದಲ್ಲಿ ಕುಟುಂಬದ ಆಪ್ತರು ರಾಜಕೀಯ ಗಣ್ಯರು, ಹಿತೈಷಿಗಳು ಬಂದು ಭಾಗವಹಿಸಿದ್ದು ಸಂತಸ ತಂದಿದೆ ಎಂದರು.
ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬ ಬಂದರೆ ನಮ್ಮ ದೇವಸಂದ್ರ ಗ್ರಾಮದಲ್ಲಿ ಹಬ್ಬದ ವಾತಾವರಣ ಇರುತ್ತದೆ. ರಾತ್ರಿ ಗ್ರಾಮದ ಎಲ್ಲಾ ದೇವತೆಗಳ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಈ ಪಲ್ಲಕ್ಕಿಯಲ್ಲಿ ನೂರಕ್ಕೂ ಹೆಚ್ಚು ಗ್ರಾಮದೇವತೆಗಳ ಮೆರವಣಿಗೆ ಮಾಡಲಾಗುತ್ತದೆ ಎಂದರು.ನಮ್ಮ ಗ್ರಾಮವೇ ಅಲ್ಲದೆ ಸುತ್ತ ಮುತ್ತಲಿನ ಗ್ರಾಮಸ್ಥರು ಕೂಡ ಈ ದೈವಕಾರ್ಯದಲ್ಲಿ ಭಾಗಿಯಾಗಿರುವುದು ಸಂತೋಷ ತಂದಿದೆ ಎಂದರು.
ದೇವಾಲಯದಲ್ಲಿ ನಡೆದಿರುವ ಎಲ್ಲಾ ಕಾರ್ಯಕ್ರಮಗಳಲ್ಲಿ ಅಂದರೆ ಮಹಾ ಮಂಗಳಾರತಿ, ಪಂಚಾಮೃತ ಅಭಿಷೇಕ, ಮೆರವಣಿಗೆ, ಪ್ರಸಾಧ ವಿನಿಯೋಗದಲ್ಲಿ ಕೈಜೋಡಿಸಿ ಸಹಕಾರ ನೀಡಿದ್ದಾರೆ. ಭಗವಾನ್ ಶ್ರೀಕೃಷ್ಣ ಪರಮಾತ್ಮನ ಬಾಲಲೀಲೆಗಳನ್ನು ಗ್ರಾಮಸ್ಥರು ಕೂಡಿ ಆಡುವ ಮೂಲಕ ದೇವರಿಗೆ ಪ್ರಿಯರಾಗುವ ಕ್ರಮ ನಿಜಕ್ಕೂ ಮನಸ್ಸಂತೋಷಗೊಳಿಸಲಿದೆ. ಭಗವಂತನ ಶ್ರೀರಕ್ಷೆ ಎಲ್ಲಾ ಜೀವಸಂಕುಲದ ಮೇಲಿರಲಿ, ಮಳೆ ಬೆಳೆ ಚೆನ್ನಾಗಿ ಬಂದು ಸುಖ ಸಮೃದ್ಧಿ ನೆಲೆಸಲಿ ಎಂದು ಆಶಿಸಿದರು.
ಪ್ರತಿಯೊಬ್ಬರೂ ಭಗವದ್ಗೀತೆಯನ್ನು ಅಧ್ಯಯನ ಮಾಡಿದ್ದಲ್ಲಿ ಶ್ರೀಕೃಷ್ಣನ ಮಹತ್ವದ ಬಗ್ಗೆ ಅರಿವಾಗುತ್ತದೆ. ಕೃಷ್ಣ ವಿಶ್ವದ ಬೆಳಕು ಎಂದರೆ ಅತಿಶಯೋಕ್ತಿಯಲ್ಲ ಎಂದರು.
ಯಾವುದೇ ಫಲಾಪೇಕ್ಷೆ ಇಲ್ಲದೆ ನೀಡಿದ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸಿ ಬದುಕನ್ನು ಉತ್ತಮ ಪಡಿಸಿಕೊಳ್ಳಬೇಕು ಎಂಬ ಸಂದೇಶವನ್ನು ಶ್ರೀಕೃಷ್ಣ ಸಾರಿದ್ದಾರೆ. ಹಾಗಾಗಿಯೇ ಅವರ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು
ಚಿಕ್ಕ ದೇವಸಂದ್ರ, ಕೆ.ಆರ್.ಪುರ,ಅಯ್ಯಪ್ಪನಗರ, ಬಸವನಪುರ, ಗಾಯತ್ರಿ ಬಡಾವಣೆ, ರಾಮಮೂರ್ತಿನಗರ, , ಹೂಡಿ, ಭಟ್ಟರಹಳ್ಳಿ, ಮೇಡಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತಾದಿಗಳು ಬಂದು ದೇವರ ಕೃಪೆಗೆ ಪಾತ್ರರಾದರು.