ಕೆ.ಆರ್.ಪುರ ಶಾಸಕ ಬೈರತಿ ಬಸವರಾಜ್ ಅರೆಸ್ಟ್.
ಸ್ಥಳೀಯ ಸುದ್ದಿ


ಬೆಂಗಳೂರು : ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಬೈರತಿ ಬಸವರಾಜ್ ಅವರನ್ನು ಸಿಐಡಿ ಪೊಲೀಸರು ಇಲ್ಲಿನ ದೇವನಹಳ್ಳಿ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಸಂಜೆ ವಶಕ್ಕೆ ಪಡೆದಿದ್ದಾರೆ.
ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಐದನೇ ಆರೋಪಿಯಾಗಿರುವ ಶಾಸಕ ಬೈರತಿ ಬಸವರಾಜ್ ಅವರಿಗೆ ಸುಪ್ರೀಂ ಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.
ಸುಪ್ರೀಂ ಕೋರ್ಟ್‍ನಲ್ಲಿ ಜಾಮೀನು ಅರ್ಜಿ ವಜಾಗೊಂಡ ನಂತರ ಬಂಧನದ ಭೀತಿಯಿಂದ ಬೈರತಿ ಬಸವರಾಜ್ ಅವರು ಗುಜರಾತ್‍ನ ಅಹಮದಾಬಾದ್‍ನಲ್ಲಿ ತಲೆಮರೆಸಿಕೊಂಡಿದ್ದರು. ಅವರು ಅಹಮದಾಬಾದ್‍ನಿಂದ ಇಂಡಿಗೋ ವಿಮಾನದ ಮೂಲಕ ಬೆಂಗಳೂರಿಗೆ ಬರುತ್ತಿರುವ ಖಚಿತ ಮಾಹಿತಿ ಪಡೆದ ಸಿಐಡಿ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಬೀಡು ಬಿಟ್ಟಿದ್ದರು.
ಅಹಮದಾಬಾದ್ನಿಂದ ಇಂಡಿಗೋ 6E683 ವಿಮಾನದಲ್ಲಿ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಶಾಸಕ ಬೈರತಿ ಬಸವರಾಜ್ ಅವರನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಏರ್ಪೋರ್ಟ್ನಲ್ಲಿ ಸಿಐಡಿ ಅಧಿಕಾರಿಗಳಿಗೆ ಒಳಗೆ ಪ್ರವೇಶ ಇಲ್ಲದ ಕಾರಣ ಏರ್ಪೋರ್ಟ್ ಒಳಭಾಗಕ್ಕೆ ದೇವನಹಳ್ಳಿ ಎಸಿಪಿ ಹರ್ಷ ಅವರು ಶಾಸಕ ಬೈರತಿ ಬಸವರಾಜ್ ಅವರನ್ನು ವಶಕ್ಕೆ ಪಡೆದಿದ್ದಾರೆ.
ಅಹಮದಾಬಾದ್ನಿಂದ ಫ್ಲೈಟ್ ಇಳಿದು ಹೊರ ಬರ್ತಿದ್ದಂತೆ ಶಾಸಕ ಬೈರತಿ ಬಸವರಾಜ್ ಅವರನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಬೆಂಗಳೂರಿಗೆ ಕರೆ ತರಲಿದ್ದಾರೆ. ಬೆಂಗಳೂರಿಗೆ ಬಂದ ಕೂಡಲೇ ಮಾಜಿ ಸಚಿವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ಬೌರಿಂಗ್ ಅಥವಾ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ವೈದ್ಯಕೀಯ ಪರೀಕ್ಷೆ ಬಳಿಕ ಸಿಐಡಿ ಕಚೇರಿಗೆ ಬೈರತಿ ಬಸವರಾಜು ಅವರನ್ನು ಕರೆತರುವ ಸಾಧ್ಯತೆ. ಇದೆ. ಇನ್ನು ಅಧಿಕಾರಿಗಳು ವಶಕ್ಕೆ ಪಡೆದ ಬಗ್ಗೆ ಶಾಸಕ ಬೈರತಿ ಬಸವರಾಜ್ಗೆ ಮಾಹಿತಿ ನೀಡಿದ್ದಾರೆ. ನಿಮ್ಮನ್ನ ವಶಕ್ಕೆ ಪಡೆಯಲಾಗುವುದು ಎಂದು ಸಿಐಡಿ ಅಧಿಕಾರಿಗಳು ಮಾಹಿತಿ ನೀಡಿ ಬೈರತಿ ಬಸವರಾಜ್ರನ್ನು ವಶಕ್ಕೆ ಪಡೆದಿದ್ದಾರೆ.