ಕೆ.ಆರ್.ಪುರ: ಬೆಂಗಳೂರು ಪೂರ್ವ ತಾಲ್ಲೂಕು ಕಛೇರಿಯಲ್ಲಿ ವಿಶ್ವಕರ್ಮ ಜಯಂತಿ ಆಚರಣೆ.

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

9/18/20251 min read

ಕೆ.ಆರ್.ಪುರ: ಬೆಂಗಳೂರು ಪೂರ್ವ ತಾಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಹರ್ಷಿ ವಿಶ್ವಕರ್ಮ ಭಾವಚಿತ್ರಕ್ಕೆ ಶಾಸಕ ಭೈರತಿ ಬಸವರಾಜ್ ಪುಷ್ಪ ಸಮರ್ಪಿಸಿ ಗೌರವ ಸಲ್ಲಿಸಿದರು.

ನಂತರ ಮಾತನಾಡಿದ ಶಾಸಕ ಭೈರತಿ ಬಸವರಾಜ್ ಅವರು ವಿಶ್ವಕರ್ಮ ಸಮಾಜದವರು ಅವರದೇ ಆದ ವಿಶಿಷ್ಟವಾದ ಕಲೆಯನ್ನು ಕರಗತ ಮಾಡಿಕೊಂಡವರು. ದೊಡ್ಡ ಬಂಡೆಕಲ್ಲುಗಳನ್ನು ಶಿಲೆಯನ್ನಾಗಿಸಬಲ್ಲರು. ದೊಡ್ಡ ದೊಡ್ಡ ಮರದ ತೊಲೆಗಳನ್ನು ಕೆತ್ತನೆ ಮಾಡುವ ಮೂಲಕ ಮೂರ್ತಿಯ ಸ್ವರೂಪ ನೀಡಬಲ್ಲರು. ಅವರ ಕಲೆ ನಿಜಕ್ಕೂ ವಿಶೇಷವಾದದ್ದು ಎಂದರು.

ಮಹರ್ಷಿ ವಿಶ್ವಕರ್ಮರು ಮಹಾನ್ ಮೇಧಾವಿಗಳು, ವಿಶ್ವ ಕರ್ಮ ಜನಾಂಗದಲ್ಲಿ ಜನಿವಾರ ಬಳಕೆ ಮಾಡುವುದರಿಂದ ಮುಂದುವರೆದ ಸಮಾಜ ಎಂಬ ಭಾವನೆ ಎಲ್ಲರಲ್ಲಿದೆ ಆದರೆ ಆ ಜನಾಂಗದಲ್ಲಿಯೂ ಆರ್ಥಿಕವಾಗಿ ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿಯೂ ಹಿಂದುಳಿದವರಿದ್ದಾರೆ, ನಾವು ವಿಶ್ವಕರ್ಮ ಜನಾಂಗಕ್ಕೆ ಅವಶ್ಯವಾದ ಎಲ್ಲಾ ಸಹಕಾರ ನೀಡಲಿದ್ದೇನೆ ಎಂದರು.

ವಿಶ್ವದ ಶಿಲ್ಪಕಲೆಯ ಪ್ರಥಮ ಗುರುಗಳು ಎಂದರೆ ವಿಶ್ವಕರ್ಮರು. ಇತ್ತೀಚೆಗೆ ವೈವಿಧ್ಯಮಯವಾದ ವಾಸ್ತುಶಿಲ್ಪಗಳು, ತಂತ್ರಜ್ಞಾನಗಳು ಬಂದಿರಬಹುದು. ವಿಶ್ವಕರ್ಮರು ಹಾಗೂ ಅವರ ಶಿಲ್ಪಕಲೆಯನ್ನು ಮರೆಯಲು ಸಾಧ್ಯವಿಲ್ಲ. ಮಹತ್ತರ ನಗರಗಳನ್ನು, ಪುಷ್ಪಕ ವಿಮಾನಗಳನ್ನ ಸೃಷ್ಟಿಸಿ ಕೊಟ್ಟಿದ್ದಾರೆ. ಅವರು ಸಮಾಜಕ್ಕೆ ನೀಡಿರುವ ಕೊಡುಗೆ ವರ್ಣನೆಗೂ ಮೀರಿದ್ದು ಎಂದು ಬಣ್ಣಿಸಿದರು.

ಸರ್ಕಾರದಿಂದ ಯಾವುದೇ ಸಮುದಾಯಗಳಿಗೆ ಸಮುದಾಯ ಭವನಗಳಿಗೆ ಸರ್ಕಾರಿ ಭೂಮಿಯನ್ನು ಮಂಜೂರು ಮಾಡುತ್ತಿಲ್ಲ. ಭವನ ನಿರ್ಮಾಣಕ್ಕೆ ಜಾಗ ನೀಡಿ ತಾನೇ ಸ್ವಂತ ಹಣದಿಂದ ಭವನವನ್ನ ನಿರ್ಮಾಣ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.

ವಿಶ್ವಕರ್ಮ ಜನಾಂಗಕ್ಕೆ ಸ್ಮಶಾನ ಸಮಸ್ಯೆ ಇದೆ ಎಂದು ಬೇಡಿಕೆ ಇಟ್ಟಾಗ ದೇವಸಂದ್ರ ಸ್ಮಶಾನದಲ್ಲಿ 8 ಕೋಟಿ ರೂಪಾಯಿ ವೆಚ್ಚದಲ್ಲಿ ವಿದ್ಯುತ್ ಶವ ದಹನ ಯಂತ್ರವನ್ನು ನಿರ್ಮಾಣ ಕಾರ್ಯ ನಡೆಯುತ್ತಿದೆ ಆದಷ್ಟು ಬೇಗ ಕಾರ್ಯರೂಪಕ್ಕ ಬರಲಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಮುದಾಯದ ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ತಹಶಿಲ್ದಾರ್ ನರಸಿಂಹಮೂರ್ತಿ ಅವರನ್ನು ಸಮಾಜದ ಮುಖಂಡರಾದ ಈಶ್ವರಚಾರಿ, ಮೋಹನ್ ಕುಮಾರ್ ಆಚರ್ ಅವರು ಸನ್ಮಾನಿಸಿದರು.