ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ.

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

3/11/20261 min read

ಮಹದೇವಪುರ: ಕ್ಷೇತ್ರದ ವಿವಿಧ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವಾರು ಕಾಮಗಾರಿಗಳಿಗೆ ಚಾಲನೆ ಹಾಗೂ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸವನ್ನು ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಅವರು ನೆರವೇರಿಸಿದರು.

ಅಂಬಳೀಪುರದಲ್ಲಿ ಸಣ್ಣ ಕೆರೆಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು. ಹರಳೂರು ಗ್ರಾಮದಲ್ಲಿ ನೀರು ಸರಬರಾಜು ವ್ಯವಸ್ಥೆಯನ್ನು ಸುಧಾರಿಸಲು 200 ಮಿ.ಮೀ ಮತ್ತು 150 ಮಿ.ಮೀ ಡಿಐ ಪೈಪ್‌ಲೈನ್ ಅಳವಡಿಸುವ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ಜೊತೆಗೆ ಹಳೆಯ ಪೈಪ್‌ಲೈನ್‌ಗಳನ್ನು ಬದಲಾಯಿಸಿ ಹೊಸ ಸ್ಯಾನಿಟರಿ ಪೈಪ್‌ಲೈನ್ ಅಳವಡಿಸುವ ಯೋಜನೆಯೂ ಕೈಗೆತ್ತಿಕೊಳ್ಳಲಾಗಿದೆ.

ಕೈಕೊಂಡ್ರಹಳ್ಳಿಯಲ್ಲಿ ವಿವಿಧ ಕೆರೆಗಳಿಗೆ ಸಂಪರ್ಕ ಹೊಂದುವಂತೆ ರಿಟೈನಿಂಗ್ ವಾಲ್ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ಕೊಡತಿ ಗೇಟ್ ಹಾಗೂ ಚಿಕ್ಕಬೆಳಂದೂರು ಪ್ರದೇಶಗಳಲ್ಲಿ ಮಳೆನೀರು ಸರಿಯಾಗಿ ಹರಿಯುವಂತೆ ಆರ್‌ಸಿಸಿ ಡ್ರೇನ್ ನಿರ್ಮಾಣ ಕಾಮಗಾರಿಗಳನ್ನು ಆರಂಭಿಸಲಾಯಿತು.

ಗುಂಜೂರು ಪಾಲ್ಯ ಮತ್ತು ವರ್ತೂರು ಪ್ರದೇಶದಲ್ಲಿ ಕೆರೆಗಳ ಅಭಿವೃದ್ಧಿ ಹಾಗೂ ಯು-ಶೇಪ್ ಡ್ರೇನ್ ನಿರ್ಮಾಣದ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು ಎಂದರು.

ಗುಂಜೂರುಪಾಳ್ಯ ಕೆರೆಯಿಂದ ವರ್ತೂರು ಕೆರೆವರೆಗೆ ರಿಟೈನಿಂಗ್ ವಾಲ್ ನಿರ್ಮಾಣ ಮತ್ತು ವಿವಿಧ ಪ್ರದೇಶಗಳಲ್ಲಿ ಯು-ಶೇಪ್ ಡ್ರೇನ್ ನಿರ್ಮಿಸುವ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.

ಈ ಯೋಜನೆಗಳಿಂದ ಮಹದೇವಪುರ ಕ್ಷೇತ್ರದ ವಿವಿಧ ಪ್ರದೇಶಗಳಲ್ಲಿ ನೀರು ಸರಬರಾಜು, ಮಳೆನೀರು ನಿರ್ವಹಣೆ ಹಾಗೂ ಕೆರೆಗಳ ಸಂರಕ್ಷಣೆ ಉತ್ತಮವಾಗಲಿದೆ ಎಂದು ಶಾಸಕಿ ತಿಳಿಸಿದರು.

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಶ್ರೀಧರ್ ರೆಡ್ಡಿ, ಮಾಜಿ ಅಧ್ಯಕ್ಷ ಮನೋಹರರೆಡ್ಡಿ,ಮುಖಂಡರಾದ ಮಹೇಂದ್ರ ಮೋದಿ,ವರ್ತೂರು ಶ್ರೀಧರ್,ವಿ.ಪಿ.ರಕ್ಷೀತ್,ಚಿಕ್ಕಣ್ಣ, ರಾಜೇಶ್ಇದ್ದರು.