ಹಿಂದೂ ಸಮಾಜದ ಮೇಲಿನ ಆಕ್ರಮಣ ನಿಲ್ಲಲಿ.

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

1/29/20261 min read

ಕೆ.ಆರ್.ಪುರ: ಭಾರತ ಸಾವಿರಾರು ವರ್ಷಗಳ ಅತ್ಯಂತ ಪ್ರಾಚೀನತೆಯ ಶ್ರೇಷ್ಠವಾದ ಸಂಸ್ಕೃತಿ ಹೊಂದಿದ ದೇಶ. ಮಾನವನು ಸುಖ, ಶಾಂತಿ, ನೆಮ್ಮದಿಯಿಂದ ಬದುಕಲು ಬೇಕಾದ ಎಲ್ಲ ರೀತಿಯ ವ್ಯವಸ್ಥೆ ಹೊಂದಿದ ದೇಶ. ಹಿಂದೂ ಸಮಾಜದ ಮೇಲೆ ಆಗುತ್ತಿರುವ ಅಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಹಿಂದೂಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ಉದ್ಧೇಶದಿಂದ ಹಿಂದೂ ಸಮಾಜೋತ್ಸವ ಆಯೋಜಿಸಲಾಗುತ್ತಿದೆ ಎಂದು ಪಾಲಿಕೆ ಮಾಜಿ ಸದಸ್ಯ ಜಯಪ್ರಕಾಶ್ ಹೇಳಿದರು.

ಕೆ.ಆರ್.ಪುರದ ಬಸವನಪುರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ನೂರು ವರ್ಷ ಪೂರೈಸಿರುವ ಅಂಗವಾಗಿ ಹಿಂದೂ ವಿರಾಟ್ ಸಮಾಜೋತ್ಸವ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜೀವನಕ್ಕೆ ಬೇಕಾಗುವ ದೃಷ್ಠ, ದಾರಿ ತೋರಿಸುವ ಶ್ರೇಷ್ಠ ಧರ್ಮ ಹಿಂದೂ ಧರ್ಮ. ಹಿಂದೂ, ಹಿಂದೂವಾಗಿ ಒಟ್ಟಿಗೆ ಬರಬೇಕು. ನಾವೆಲ್ಲಾ ಒಂದು ನಾವೆಲ್ಲ ಹಿಂದೂ ಎಂಬ ಭಾವನೆ ಬೆಳೆಯಬೇಕು. ಹಿಂದೂಗಳು ಒಗ್ಗಾಟ್ಟಾಗಿ ನಿಂತರೆ ಎಲ್ಲವನ್ನೂ ಸಾಧಿಸಲು ಸಾಧ್ಯ. ಇದಕ್ಕೆ ಭವ್ಯ ರಾಮ ಮಂದಿರವೇ ಸಾಕ್ಷಿ ಎಂದರು.

ಬ್ರಾಹ್ಮಣ ಮಂಡಳಿ ಮಾಜಿ ಅಧ್ಯಕ್ಷ ಸಚ್ಚಿದಾನಂದಮೂರ್ತಿ ಮಾತನಾಡಿ, ಹಿಂದೂ ಸಮಾಜಕ್ಕೆ ಗಂಡಾಂತರ ಎದುರಾದಾಗ ಸೆಟೆದೆಳುವ ಮೂಲಕ ಸಮಾಜದ ರಕ್ಷಣೆ ಮಾಡಬೇಕಿದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಸನಾತನ ಹಿಂದೂ ಧರ್ಮ ನಾಶಕ್ಕೆ ಕೆಲವು ದುಷ್ಟಶಕ್ತಿಗಳು ಮುಂದಾಗಿವೆ. ಈ ವಿಚಾರದಲ್ಲಿ ಹಿಂದೂಗಳು ಸದಾ ಜಾಗೃತರಾಗಬೇಕು ಎಂದರು.

ಸದಾಕಾಲ ಧರ್ಮದಿಂದ ನ್ಯಾಯಸಮ್ಮತವಾಗಿ ಜೀವನ ನಡೆಸಬೇಕು. ಎಲ್ಲಿ ಧರ್ಮವಿರುತ್ತದೆಯೋ ಅಲ್ಲಿ ಜಯ ನಿಶ್ಚಿತ. ಮಕ್ಕಳಿಗೆ ಕಲಿಕೆಯ ಹಂತದಲ್ಲಿ ಧರ್ಮ, ದೇವಾಲಯಗಳ ಬಗ್ಗೆ ಶ್ರದ್ಧೆ ಮತ್ತು ಭಕ್ತಿಯನ್ನು ಬೆಳೆಸಬೇಕು. ಇದಕ್ಕೆ ಪೂರಕವಾದ ವಾತಾವರಣವನ್ನು ಪಾಲಕರು ಸೃಷ್ಟಿಸಬೇಕು. ಭಾರತ ಜಗತ್ತಿನ ಕಲ್ಯಾಣ ಬಯಸುವ ದೇಶವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗೋವಿಂದ ಮಾಡಿದರು. ಮಹಿಳಾ ಆಟೋ ಚಾಲಕಿಯರು ಹಾಗೂ ನಿವೃತ್ತ ಸೈನಿಕರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕ್ಷೇತ್ರ ಪ್ರ.ಕಾರ್ಯದರ್ಶಿ ಶ್ರೀರಾಮುಲು, ವಾರ್ಡ್ ಅಧ್ಯಕ್ಷ ಶಿವಕುಮಾರ್, ಮುಖಂಡರಾದ ದೇವಸಂದ್ರ ಡಿ.ಎ.ಶ್ರೀನಿವಾಸ್, ಮುನಿ ಸ್ವಾಮಿ, ರಾಮಕೃಷ್ಣ, ಬಸವನಪುರ ವೆಂಕಟೇಶ್, ಗೋವಿಂದಸ್ವಾಮಿ, ರಾಮಚಂದ್ರ, ತಿರುಮಲರೆಡ್ಡಿ, ಪಟಾಕಿ ರವಿ ಮತ್ತಿತರರು ಇದ್ದರು.