ಅಂಬೇಡ್ಕರ್ ಸಂದೇಶಗಳನ್ನು ಪಾಲಿಸಿದರೆ ಬದುಕು ಕುಗ್ಗದು: ಸಂತೋಷ್ ಹೆಗ್ಡೆ.


ಮಹದೇವಪುರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರು ನೀಡಿದ ಅದ್ಭುತ ಸಂದೇಶಗಳು, ಇಂದಿಗೂ ಸಹ ಜನಜನಿತವಾಗಿದ್ದು, ಸಂದೇಶಗಳನ್ನು ಪಾಲಿಸುವ ಪ್ರತಿ ಪ್ರಜೆಯೂ ಜೀವನದಲ್ಲಿ ಎಂದೂ ಕುಗ್ಗಲಾರ ಎಂದು ಸುಪ್ರಿಂ ಕೋರ್ಟ್ ನ ಮಾಜಿ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ತಿಳಿಸಿದರು.
ಕ್ಷೇತ್ರದ ಹೂಡಿಯಲ್ಲಿ ಭಾರತೀಯರ ಸೇವಾ ಸಮಿತಿ ಆಯೋಜಿಸಿದ್ದ ಡಾ.ಬಿ.ಆರ್ ಅಂಬೇಡ್ಕರ್ ರವರ 134ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು, ಡಾ.ಬಿ.ಆರ್ ಅಂಬೇಡ್ಕರ್ ರವರು ನೀಡಿರುವ ಸಂದೇಶಗಳು ಇಂದಿಗೂ ಜನಜನಿತವಾಗಿದ್ದು, ಅವುಗಳನ್ನು ಪಾಲಿಸಿದರೇ ಯಾವುದೇ ವ್ಯಕ್ತಿ ಕೂಡಾ ಕುಗ್ಗಲಾರ ಎಂದರು.
ಇಂದಿನ ಪ್ರಜೆಗಳು ಅಕ್ಷರಸ್ಥರೇ ಆಗಿರಲಿ, ಅಕ್ಷರಸ್ಥರೇ ಆಗಿರಲಿ ಎಲ್ಲರೂ ತಿಳಿದು, ಆಲೋಚಿಸಬೇಕಾದ ಅಂಬೇಡ್ಕರ್ ರವರ ಒಂದು ಸೂಕ್ಷ್ಮ ಸಂದೇಶ ವೆಂದರೆ ಕಾನೂನು ಮತ್ತು ಸುವ್ಯವಸ್ಥೆ ರಾಜಕೀಯ ದೇಹಕ್ಕೆ ಔಷಧಿ ಇದ್ದಂತೆ. ರಾಜಕೀಯ ದೇಹ ಅನಾರೋಗ್ಯಕ್ಕೊಳಗಾದರೆ ಖಂಡಿತವಾಗಿಯೂ ಔಷಧಿ ನೀಡಬೇಕಾಗುತ್ತದೆ. ಎಂಬುದು. ಇದನ್ನು ಪ್ರತಿ ಪ್ರಜೆಯೂ ತನ್ನ ಈಗಿನ ಸ್ವಾರ್ಥಕ್ಕೆ ಮಾತ್ರ ಆಲೋಚಿಸಿ ಬಳಸಿಕೊಳ್ಳದೇ ಮುಂದಿನ ತನ್ನ ಪೀಳಿಗೆಯ ಪ್ರಜೆಗಳ ಭವಿಷ್ಯಕ್ಕೂ ಆರೋಗ್ಯಕರವಾದ ಅನುಕೂಲಕ್ಕಾಗಿ ಬಳಸಿಕೊಂಡು, ಮುನ್ನೆಡೆಯಬೇಕಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭಾರತೀಯ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಹೂಡಿ ರಾಮಚಂದ್ರ(ಚಿನ್ನಿ), ಸಮಾಜ ಸೇವಕ ತಿಪ್ಪಸಂದ್ರ ಗಜೇಂದ್ರ, ಮುಖಂಡರಾದ ಮುನಿಮಾರಪ್ಪ, ಅಂಜಿನಪ್ಪ ಯಾದವ್, ಮುನಿರಾಜ್, ವಿವಿಧ ಧರ್ಮಗಳ ದರ್ಮಗುರುಗಳು ಸೇರಿದಂತೆ ಹಲವಾರು ಹಾಜರಿದ್ದರು.