ಮಹದೇವಪುರ: ಪಣತ್ತೂರು ರಸ್ತೆ ಅಗಲೀಕರಣ,ಭೂ ಮಾಲೀಕರಿಗೆ ಪರಿಹಾರ ಚೆಕ್‌ಗಳ ವಿತರಣೆ
ಸ್ಥಳೀಯ ಸುದ್ದಿ


ಮಹದೇವಪುರ: ಕ್ಷೇತ್ರದ ಪ್ರಮುಖ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಲ್ಲೊಂದಾದ ಪಣತ್ತೂರು ಎಸ್-ಕ್ರಾಸ್ ಅಗಲೀಕರಣ ಕಾಮಗಾರಿಗೆ ಮತ್ತೊಂದು ಹಂತ ಸೇರಿದ್ದು ಕಾಮಗಾರಿಯ ಪ್ರಗತಿ ಪರಿಶೀಲನೆ ಹಾಗೂ ಭೂಸ್ವಾಧೀನಕ್ಕಾಗಿ ನಗದು ಪರಿಹಾರವನ್ನು ಆಸ್ತಿ ಮಾಲೀಕರಿಗೆ ಚೆಕ್ ಗಳನ್ನು ಶಾಸಕಿ ಮಂಜುಳ ಅರವಿಂದ ಲಿಂಬಾವಳಿಯವರು ವಿತರಣೆ ಮಾಡಿದರು
ಈ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ಉಪಸ್ಥಿತಿಯಲ್ಲಿ, ಅಧಿಕಾರಿಗಳೊಂದಿಗೆ ಕಾಮಗಾರಿಯ ಮುಂದಿನ ಹಂತಗಳ ಕುರಿತು ಸಮಾಲೋಚನೆ ನಡೆಸಿದರು.
ಚೆಕ್ ವಿತರಣೆ ಮಾಡಿದ ನಂತರ ಮಾತನಾಡಿದ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ಪಣತ್ತೂರು ಎಸ್-ಕ್ರಾಸ್ ಅಗಲೀಕರಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ತಾಂತ್ರಿಕ ಹಾಗೂ ಕಾನೂನುಬದ್ದವಾಗಿ ಸವಾಲಿನ ಪ್ರಕ್ರಿಯೆಯಾಗಿತ್ತು. ಆದರೆ ಸಾರ್ವಜನಿಕರ ಹಿತದೃಷ್ಟಿಯಿಂದ ಆಸ್ತಿ ಮಾಲೀಕರೊಂದಿಗೆ ನಿರಂತರವಾಗಿ ಚರ್ಚೆಗಳು ನಡೆಸಿ, ಕಾನೂನಿನ ವತಿಯಿಂದ ನೀಡಲಾದ ಅವಧಿಯನ್ನು ಕಾಯದೆ ಕಟ್ಟಡಗಳನ್ನು ಸಾಧ್ಯವಾದಷ್ಟು ಶೀಘ್ರದಲ್ಲಿ ಹಸ್ತಾಂತರಿಸುವಂತೆ ಬಾಕಿಯಿರುವ ಭೂ ಮಾಲಿಕರಿಗೆ ಮನವಿ ಮಾಡಲಾಗಿದೆ ಎಂದರು.
ಈ ಯೋಜನೆಗೆ ಸೆಪ್ಟೆಂಬರ್ 2022ರಲ್ಲಿ ಕರ್ನಾಟಕ ಸರ್ಕಾರದಿಂದ ನಗದು ಪರಿಹಾರದ ಆಧಾರದ ಮೇಲೆ ಭೂಸ್ವಾಧೀನಕ್ಕೆ ಅನುಮೋದನೆ ದೊರೆತಿದ್ದು, ಸಂಬಂಧಿಸಿದ ಅಧಿಸೂಚನೆ ಪ್ರಕ್ರಿಯೆ 2023ರ ಆರಂಭದಲ್ಲೇ ಆರಂಭಗೊಂಡಿತ್ತು. ಈಗ ಪರಿಹಾರ ವಿತರಣೆಯೊಂದಿಗೆ ಭೂಸ್ವಾಧೀನ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ (ಭೂಸ್ವಾಧೀನ) ವಸಂತ ಕುಮಾರಿ, ಮುಖ್ಯರಸ್ತೆ ಕಾರ್ಯಪಾಲಕ ಅಭಿಯಂತರರು ಉದಯ್ ಚೌಗುಲೆ, ಬಿಬಿಎಂಪಿ ಅದಿಕಾರಿ ಕೋದಂಡ ರೆಡ್ಡಿ, ನಗರ ಮಂಡಲ ಅಧ್ಯಕ್ಷ ಶ್ರೀಧರ್ ರೆಡ್ಡಿ, ಮುಖಂಡರು ಎಲ್.ರಾಜೇಶ್, ಮನೋಹರ್ ರೆಡ್ಡಿ, ರಾಜಾರೆಡ್ಡಿ, ವೆಂಕಟಸ್ವಾಮಿ ರೆಡ್ಡಿ, ನಾಗೇಶ್ ರೆಡ್ಡಿ, ರಾಜೇಶ್, ಕಾರ್ಯಕರ್ತರು ಉಪಸ್ಥಿತರಿದ್ದರು.