ಸ್ವ-ಸಹಾಯ ಗುಂಪುಗಳ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಉದ್ಘಾಟಿಸಿದ ಸಚಿವ ಕೆ.ಹೆಚ್ ಮುನಿಯಪ್ಪ

ಸ್ಥಳೀಯ ಸುದ್ದಿಜಿಲ್ಲಾ ಸುದ್ದಿ

ಧರ್ಮ ಬಸವನಪುರ.

1/9/20261 min read

ಬೆಂ.ಗ್ರಾ.ಜಿಲ್ಲೆ: ಸಂಜೀವಿನಿ ಎನ್.ಆರ್.ಎಲ್.ಎಂ ಯೋಜನೆಯಡಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸ್ವಸಹಾಯ ಗುಂಪುಗಳ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಉದ್ಘಾಟಿಸಿದರು.

ಸಂಕ್ರಾಂತಿ ಹಬ್ಬದ ಪ್ರಯುಕ್ತ ಸ್ವಸಹಾಯ ಗುಂಪುಗಳ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಕಲ್ಪಿಸುವುದು, ಗ್ರಾಮೀಣ ಮಹಿಳಾ ಉದ್ದಿಮೆದಾರರು ಉತ್ಪಾದಿಸಿದ ಉತ್ಪನ್ನಗಳನ್ನು ಖರೀದಿಸಿ, ಮಹಿಳಾ ಉದ್ದಿಮೆದಾರರನ್ನು ಪ್ರೋತ್ಸಾಹಿಸುವುದು, ಮಹಿಳೆಯರು ಸ್ವಾವಲಂಬಿಯಾಗಿ ದುಡಿದು ಆರ್ಥಿಕವಾಗಿ ಸಧೃಡರಾಗಬೇಕು ಎನ್ನುವ ಉದ್ದೇಶದಿಂದ ಜಿಲ್ಲಾ ಪಂಚಾಯಿತ್, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಸಹಯೋಗದೊಂದಿಗೆ ಸ್ವಸಹಾಯ ಗುಂಪುಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದೆ.

ವಿವಿಧ ಸ್ವ-ಸಹಾಯ ಗುಂಪುಗಳು ಉತ್ಪಾದಿಸಿರುವ ಕರಕುಶಲ ವಸ್ತುಗಳು, ತಿಂಡಿ ತಿನಿಸುಗಳು, ಮಣ್ಣಿನಿಂದ ತಯಾರಿಸಿದ ವಸ್ತುಗಳು, ಕರ ಕುಶಲತೆಯಿಂದ ತಯಾರಿಸಿದ ವೈರ್ ಬ್ಯಾಗ್, ಜ್ಯೂಟ್ ಬ್ಯಾಗ್, ಅಲಂಕಾರಿಕ ವಸ್ತುಗಳು, ಹಪ್ಪಳ, ಉಪ್ಪಿನಕಾಯಿ, ಖಾರದ ಪುಡಿ ಹಾಗೂ ದೇಶಿಯವಾಗಿ ತಯಾರಿಸಿದ ಆಹಾರ ಪದಾರ್ಥಗಳು ಸೇರಿದಂತೆ ವಿವಿಧ ಬಗೆಯ ಉತ್ಪನ್ನಗಳನ್ನು ಸಚಿವರು ಖುದ್ದಾಗಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ರಾಜಣ್ಣ, ಜಿಲ್ಲಾಧಿಕಾರಿ ಎಬಿ ಬಸವರಾಜು, ಸಿಇಒ ಡಾ.ಕೆ.ಎನ್ ಅನುರಾಧ, ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಶಿವಕುಮಾರ್, ಯೋಜನಾ ನಿರ್ದೇಶಕರಾದ ವಿಠಲ್ ಕಾವ್ಳೆ, ಮುಖ್ಯ ಯೋಜನಾಧಿಕಾರಿ ರಾಮಕೃಷ್ಣಯ್ಯ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು, ಸ್ವ-ಸಹಾಯ ಗುಂಪುಗಳ ಸದಸ್ಯರು ಉಪಸ್ಥಿತರಿದ್ದರು.