ಕೋಗಿಲು ಅನಧಿಕೃತ ಮನೆಗಳ ತೆರವು ಸ್ಥಳಕ್ಕೆ ಸಚಿವ ಜಮೀರ್ ಭೇಟಿ: ಹೊಸ ಮನೆ ನೀಡಲು ತೀರ್ಮಾನ

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

12/28/20251 min read

ಬೆಂಗಳೂರು : ಕೋಗಿಲು ಸಮೀಪ ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ ಮನೆಗಳನ್ನು ತೆರವು ಮಾಡಿರುವುದರಿಂದ ನಿರಾಶ್ರಿತರಾಗಿರುವ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸೋಮವಾರ(ಡಿ.29) ಬೆಳಗ್ಗೆ 11 ಗಂಟೆಗೆ ಸಭೆ ಕರೆಯಲಾಗಿದ್ದು, ಮಧ್ಯಾಹ್ನದ ವೇಳೆಗೆ ಸಿಹಿ ಸುದ್ದಿ ನೀಡುತ್ತೇವೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ತಿಳಿಸಿದರು.

ಕೋಗಿಲು ಬಳಿಯ ಫಕೀರ್ ಲೇಔಟ್ ಹಾಗೂ ವಸೀಮ್ ಲೇಔಟ್ ಪ್ರದೇಶಕ್ಕೆ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಅವರೊಂದಿಗೆ ಭೇಟಿ ನೀಡಿ ಪರಿಶೀಲಿಸಿ, ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ನಮ್ಮದು ಬಡವರ ಪರ ಸರಕಾರ. ಇಲ್ಲಿನ ಬಡವರಿಗೆ ಯಾವ ರೀತಿ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂಬುದರ ಕುರಿತು ಮುಖ್ಯಮಂತ್ರಿ ತೀರ್ಮಾನ ಮಾಡುತ್ತಾರೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೊರಗೆ ಹೋಗಿದ್ದಾರೆ. ಪ್ರತಿದಿನ ನನ್ನನ್ನು ಸಂಪರ್ಕಿಸಿ ಪರಿಸ್ಥಿತಿಯ ಕುರಿತು ಮಾಹಿತಿ ಪಡೆಯುತ್ತಿದ್ದಾರೆ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

ಬಹಳ ವರ್ಷಗಳಿಂದ ಈ ಕುಟುಂಬಗಳು ಇಲ್ಲಿ ಕಾನೂನು ಬಾಹಿರವಾಗಿ ವಾಸ ಮಾಡುತ್ತಿವೆ. ಮರ‍್ನಾಲ್ಕು ಬಾರಿ ಇವರಿಗೆ ಮನೆಗಳನ್ನು ಖಾಲಿ ಮಾಡುವಂತೆ ನೋಟಿಸ್‌ಗಳನ್ನು ನೀಡಲಾಗಿತ್ತು ಎಂದು ಅವರು ತಿಳಿಸಿದರು.

180 ಮನೆ ನೀಡಲು ಒಪ್ಪಿಗೆ:

ಬೈಯಪ್ಪನಹಳ್ಳಿ ಬಳಿ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ 1200 ಮನೆಗಳನ್ನು ನಿರ್ಮಾಣ ಮಾಡಲಾಗಿದ್ದು, ಆ ಮನೆಗಳಲ್ಲಿ ಇಲ್ಲಿರುವ ನಿವಾಸಿಗಳಿಗೆ ಮನೆಗಳನ್ನು ನೀಡಲು ಸರ್ಕಾರ ತಿರ್ಮಾನಿಸಿದೆ. ಹೋರಾಟಗಾರರು 250 ಮನೆಗಳನ್ನು ಕೇಳಿದ್ದರು. ಆದರೆ ವಸತಿ ಇಲಾಖೆಯಿಂದ 180 ಮನೆ ನೀಡಲು ಒಪ್ಪಿಗೆ ನೀಡಲಾಗಿದ್ದು, ರಿಜಿಸ್ಟರ್ ಮಾಡಿಕೊಡುವುದಾಗಿಯೂ ಭರವಸೆ ನೀಡಲಾಗಿದೆ.