Mumbai Taj Hotel: ದೆಹಲಿ ಕೋರ್ಟ್ ಗೆ 26/11 ದಾಳಿಯ ವಿಚಾರಣಾ ದಾಖಲೆ ಸಲ್ಲಿಕೆ
ದೇಶ/ವಿದೇಶ


ನವದೆಹಲಿ: 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಎಂದು ಹೇಳಲಾದ ತಹವ್ವೂರ್ ಹುಸೇನ್ ರಾಣಾನನ್ನು ಅಮೆರಿಕದಿಂದ ಭಾರತಕ್ಕೆ ಗಡಿಪಾರು ಮಾಡಲಾಗಿದ್ದು, ದೆಹಲಿ ನ್ಯಾಯಾಲಯಕ್ಕೆ ವಿಚಾರಣೆಯ ದಾಖಲೆಗಳು ಬಂದಿವೆ ಎಂದು ನ್ಯಾಯಾಲಯದ ಮೂಲಗಳು ತಿಳಿಸಿವೆ.
2008 ರ ಮುಂಬೈ ದಾಳಿಯ ಪ್ರಮುಖ ಆರೋಪಿ ರಾಣಾ ಅರ್ಜಿಯನ್ನು ಅಮೆರಿಕದ ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದರಿಂದ ಗಡಿಪಾರುನಿಂದ ತಪ್ಪಿಸಿಕೊಳ್ಳುವ ಕೊನೆಯ ಯತ್ನ ವಿಫಲವಾದ ನಂತರ ಗುರುವಾರ ವಿಶೇಷ ವಿಮಾನದಲ್ಲಿ ಭಾರತಕ್ಕೆ ಕರೆತರಲಾಗುತ್ತಿದೆ.
ದಾಖಲೆಗಳನ್ನು ಕಳುಹಿಸಲು ಮುಂಬೈ ನ್ಯಾಯಾಲಯದ ಸಿಬ್ಬಂದಿಗೆ ಜನವರಿ 28 ರಂದು ನಿರ್ದೇಶನ ನೀಡಿದ್ದ ಜಿಲ್ಲಾ ನ್ಯಾಯಾಧೀಶ ವಿಮಲ್ ಕುಮಾರ್ ಯಾದವ್ ಅವರು ಇತ್ತೀಚೆಗೆ ದಾಖಲೆಗಳನ್ನು ಸ್ವೀಕರಿಸಿದ್ದಾರೆ. ಮುಂಬೈನಿಂದ ದಾಖಲೆಗಳನ್ನು ಹಿಂಪಡೆಯುವಂತೆ ಕೋರಿ ರಾಷ್ಟ್ರೀಯ ತನಿಖಾ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ಮೇರೆಗೆ ನ್ಯಾಯಾಧೀಶರು, ದಾಖಲೆಗಳನ್ನು ಕಳುಹಿಸಲು ಮುಂಬೈ ಕೋರ್ಟ್ ಸಿಬ್ಬಂದಿಗೆ ಸೂಚಿಸಿದ್ದರು.
26/11 ದಾಳಿಗೆ ಸಂಬಂಧಿಸಿದ ಹಲವಾರು ಪ್ರಕರಣಗಳು ಎರಡೂ ನಗರಗಳಲ್ಲಿ ಇರುವುದರಿಂದ ವಿಚಾರಣಾ ನ್ಯಾಯಾಲಯದ ದಾಖಲೆಗಳನ್ನು ಈ ಹಿಂದೆ ಮುಂಬೈಗೆ ಕಳುಹಿಸಲಾಗಿತ್ತು.
64 ವರ್ಷದ ರಾಣಾ, ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬರಾದ ಡೇವಿಡ್ ಕೋಲ್ಮನ್ ಹೆಡ್ಲಿ ಅಲಿಯಾಸ್ ದಾವೂದ್ ಗಿಲಾನಿಯ ನಿಕಟವರ್ತಿ ಎನ್ನಲಾಗಿದೆ.
ನವೆಂಬರ್ 26, 2008 ರಂದು, 10 ಪಾಕಿಸ್ತಾನಿ ಭಯೋತ್ಪಾದಕರು ಸಮುದ್ರದ ಮೂಲಕ ಭಾರತದ ಆರ್ಥಿಕ ರಾಜಧಾನಿಗೆ ನುಸುಳಿ, ರೈಲ್ವೆ ನಿಲ್ದಾಣ, ಎರಡು ಐಷಾರಾಮಿ ಹೋಟೆಲ್‌ಗಳ ಮೇಲೆ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 166 ಜನರು ಸಾವನ್ನಪ್ಪಿದರು ಮತ್ತು ಅನೇಕರು ಗಂಭೀರವಾಗಿ ಗಾಯಗೊಂಡಿದ್ದರು.