ಕೋಗಿಲು ಬಡಾವಣೆ ಸಂತ್ರಸ್ತರಿಗೆ ಬೈಯ್ಯಪ್ಪನಹಳ್ಳಿಯಲ್ಲಿ ಹೊಸ ಸೂರು: ಸಿಎಂ ಸಿದ್ದರಾಮಯ್ಯ

ಸ್ಥಳೀಯ ಸುದ್ದಿರಾಜಕೀಯ

ಧರ್ಮ ಬಸವನಪುರ.

12/29/20251 min read

ಬೆಂಗಳೂರು : ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಸೂರು ಕಳೆದುಕೊಂಡವರಿಗೆ ಬೈಯ್ಯಪ್ಪನಹಳ್ಳಿಯಲ್ಲಿ ಪರ್ಯಾಯ ಮನೆ ಹಂಚಿಕೆ ಮಾಡಲು ಸಿಎಂ ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ.

ಇತ್ತೀಚೆಗೆ ಬೆಂಗಳೂರಿನ ಕೋಗಿಲು ಲೇಔಟ್‌ನಲ್ಲಿ ಅಕ್ರಮ ಮನೆಗಳು ನೆಲಸಮ ಮಾಡಲಾಗಿತ್ತು. ಇದು ಕೇರಳ ಸಿಎಂ ವರೆಗೂ ತಲುಪಿ ಅವರು ಈ ಕೃತ್ಯವನ್ನುಬುಲ್ಡೋಜರ್‌ ರಾಜ್‌ ಎಂದು ಟ್ವೀಟ್‌ ಮೂಲಕ ಕುಟುಕಿದ್ದರು.

ಬಳಿಕ ಈ ವಿಷಯ ಕಾಂಗ್ರೆಸ್‌ ಹೈಕಮಾಂಡ್‌ ಅಂಗಳಕ್ಕೂ ತಲುಪಿತ್ತು. ಇದೀಗ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಸಭೆ ನಡೆಸಿದ್ದು, ಕೋಗಿಲು ಬಡಾವಣೆಯ ಅರ್ಹರಿಗೆ 7 ಕಿ.ಮೀ ವ್ಯಾಪ್ತಿಯಲ್ಲೇ ಬದಲೀ ಮನೆ ಕೊಡಲು ತೀರ್ಮಾನ ಮಾಡಿದ್ದಾರೆ.

ಡಿಸೆಂಬರ್ 20ರಂದು ಸುಮಾರು 167 ಅಕ್ರಮ ಶೆಡ್‌ಗಳನ್ನು ತೆರವುಗೊಳಿಸಲಾಗಿದ್ದು, ಈ ಕುರಿತು ಮುಂಚಿತವಾಗಿಯೇ ನೋಟಿಸ್ ನೀಡಲಾಗಿತ್ತು ಎಂದರು. ಕೋಗಿಲುದಿಂದ ಕೇವಲ 7 ಕಿ.ಮೀ ದೂರದಲ್ಲಿರುವ ಬೈಯ್ಯಪ್ಪನಹಳ್ಳಿ ಸರ್ವೇ ನಂ.23 ರ ಬಹುಮಹಡಿ ಕಟ್ಟಡಗಳಲ್ಲಿ ಲಭ್ಯವಿರುವ ಮನೆಗಳನ್ನು ಅರ್ಹ ಸಂತ್ರಸ್ತರಿಗೆ ಹಂಚಿಕೆ ಮಾಡಲಾಗುವುದು. ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಅಧಿಕಾರಿಗಳು ಮುಂದಿನ ಎರಡು ದಿನಗಳಲ್ಲಿ ಅರ್ಹರನ್ನು ಗುರುತಿಸಿ ಪಟ್ಟಿ ಸಲ್ಲಿಸಲಿದ್ದು, ಜನವರಿ 1ರ ಹೊಸವರ್ಷದಂದೇ ಸಂತ್ರಸ್ತರಿಗೆ ವಾಸಕ್ಕೆ ಮನೆ ಒದಗಿಸುವ ಜವಾಬ್ದಾರಿಯನ್ನು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ವಹಿಸಲಾಗಿದೆ.

ಇನ್ನು ಮುಂದೆ ಯಾವುದೇ ಕಾರಣಕ್ಕೂ ಸರ್ಕಾರಿ ಜಮೀನಿನ ಅಕ್ರಮ ಒತ್ತುವರಿಗೆ ಅವಕಾಶ ನೀಡಬಾರದು ಎಂದು ಮುಖ್ಯಮಂತ್ರಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅಕ್ರಮ ಶೆಡ್‌ಗಳ ನಿರ್ಮಾಣಕ್ಕೆ ಅವಕಾಶ ಕೊಟ್ಟ ಕಂದಾಯ ಹಾಗೂ ನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಈ ಪ್ರಕರಣದಲ್ಲಿ ಮಾತ್ರ ಮಾನವೀಯತೆ ದೃಷ್ಟಿಯಿಂದ ಪರ್ಯಾಯ ವ್ಯವಸ್ಥೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಅಕ್ರಮವಾಗಿ ಮನೆ ಕಟ್ಟಿದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಜವಾಬ್ದಾರಿ ಮಾಡಲಾಗುತ್ತದೆ ಎಂದು ಸಿಎಂ ಸ್ಪಷ್ಟಪಡಿಸಿದರು.