ಗುಣಮಟ್ಟದ ಕಾಮಗಾರಿಯಿಂದ ಮಾತ್ರ ಕ್ಷೇತ್ರದಲ್ಲಿ ಹೆಸರು ಉಳಿಯಲು ಸಾಧ್ಯ: ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

8/31/20251 min read

ಮಹದೇವಪುರ: ಗುಣಮಟ್ಟದ ಕಾಮಗಾರಿಯಿಂದ ಮಾತ್ರ ಕ್ಷೇತ್ರದಲ್ಲಿ ಹೆಸರು ಉಳಿಯಲು ಸಾಧ್ಯ. ಆ ನಿಟ್ಟಿನಲ್ಲಿ ವಿವಿಧ ಕಾಮಗಾರಿ ಭೂಮಿ ಪೂಜೆಯನ್ನು ನೆರವೇರಿಸಲಾಗಿದೆ ಎಂದು ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿಯವರು ತಿಳಿಸಿದರು.

ಕ್ಷೇತ್ರದ ಹಾಲನಾಯಕನಹಳ್ಳಿ ಮತ್ತು ಕೊಡತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ರಸ್ತೆ, ಶಾಲಾ ಕಟ್ಟಡ, ಅಂಗನವಾಡಿ ಕಟ್ಟಡ, ಅಂಬೇಡ್ಕರ್ ಭವನ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು.

ಹಾಲನಾಯಕನಹಳ್ಳಿ ಗ್ರಾಮದ ಕೋದಂಡರಾಮನಗರದಲ್ಲಿ ಅಂಬೇಡ್ಕರ್ ಭವನ, ಸರ್ಕಾರಿ ಶಾಲಾ ಕೊಠಡಿ ನಿರ್ಮಾಣ, ಸರ್ಜಾಪುರ ಮುಖ್ಯ ರಸ್ತೆಯ ದೊಡ್ಡಕನ್ನೆಲ್ಲಿಯಿಂದ ಚಿಕ್ಕನಾಯಕನಹಳ್ಳಿಯ ದಿಣ್ಣೆವರೆಗೂ ರಸ್ತೆ ಡಾಂಬರೀಕರಣ ಕಾಮಗಾರಿ ನಡೆಯುತ್ತಿದೆ. ಕೊಡತಿ- ಹುಸ್ಕೂರು ಮುಖ್ಯರಸ್ತೆಯಿಂದ ಕೊಡತಿ- ಚಿಕ್ಕನಾಯಕನಹಳ್ಳಿ ಮುಖ್ಯರಸ್ತೆ ಸೇರುವ ರಸ್ತೆ, ಸರ್ಜಾಪುರ ರಸ್ತೆಯಿಂದ ಹಾಡೋಸಿದ್ದಾಪುರ ಮಾರ್ಗವಾಗಿ ಕೊಡತಿ ರೈಲ್ವೆ ಗೇಟ್ ಸಮೀಪ ಇರುವ ಮನ ಅಪಾರ್ಟ್‌ಮೆಂಟ್ ವರೆಗೆ ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದೆ. ಕೊಡತಿ ಕಾಲೋನಿ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲಾಗುತ್ತಿದೆ. ಸೂಲಿಕುಂಟೆಯಿಂದ ದೊಮ್ಮಸಂದ್ರ- ಚಂದಾಪುರ ಮುಖ್ಯರಸ್ತೆ ಅಭಿವೃದ್ಧಿ, ಮುಳ್ಳೂರು ಗ್ರಾಮದಲ್ಲಿ ಸ್ತ್ರೀಶಕ್ತಿ ಭವನ ಕಟ್ಟಡ, ಸರ್ಕಾರಿ ಶಾಲಾ ಕೊಠಡಿಗಳ ನಿರ್ಮಾಣ, ಕಾಚಮಾರನಹಳ್ಳಿ ಗ್ರಾಮದಲ್ಲಿ ಸ್ತ್ರೀಶಕ್ತಿ ಭವನ ಕಟ್ಟಡ, ಸಮುದಾಯ ಭವನ ಕಟ್ಟಡ ನಿರ್ಮಾಣ ಸೇರಿ ಹಲವು ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕಿಯವರು ಹೇಳಿದರು.

ನಿಗದಿತ ಅವಧಿಯೊಳಗೆ ಗುಣಮಟ್ಟದ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಕೊಡಬೇಕು. ಅಧಿಕಾರಿಗಳು‌ ಗುಣಮಟ್ಟದಲ್ಲಿ‌ ರಾಜಿ ಇಲ್ಲದಂತೆ ಕೆಲಸ ಪಡೆಯಬೇಕು. ಗ್ರಾಮಸ್ಥರೂ ಹಾಗೂ ಮುಖಂಡರು ಕಾಮಗಾರಿ ಬಗ್ಗೆ ನಿಗಾ ವಹಿಸಬೇಕು ಎಂದು ಕಿವಿಮಾತು ಹೇಳಿದರು.

ಕ್ಷೇತ್ರದಲ್ಲಿ ಸಾರ್ವಜನಿಕರ ಅವಶ್ಯಕತೆಗೆ ಅನುಗುಣವಾಗಿ ಪ್ರತಿ ಗ್ರಾಮದಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಒಮ್ಮೆ ಮಾಡಿದ ಕೆಲಸಗಳು ಶಾಶ್ವತವಾಗಿ ಉಳಿಯಬೇಕು. ಆಗ ಸಾರ್ವಜನಿಕ ಕ್ಷೇತ್ರದಲ್ಲಿ ಉತ್ತಮ ಗೌರವ ಸಿಗುತ್ತದೆ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ನಗರ ಮಂಡಲದ ಅಧ್ಯಕ್ಷ ಎನ್. ಆರ್. ಶ್ರೀಧರ್ ರೆಡ್ಡಿ, ಭೂ ನ್ಯಾಯ ಮಂಡಲಿ ಮಾಜಿ ಸದಸ್ಯ ಬಾಬುರೆಡ್ಡಿ, ಕೊಡತಿ ವಾರ್ಡ್ ಅಧ್ಯಕ್ಷ ಸತೀಶ್ ರೆಡ್ಡಿ, ವಾರ್ಡ್ ಉಸ್ತುವಾರಿ ಚಿಕ್ಕಣ್ಣ, ಗ್ರಾಮಪಂಚಾಯಿತಿ ಸದ್ಯರಾದ ಮುಳ್ಳೂರು ನವೀನ್, ವಾಲೇಪುರ ಸೋಮಶೇಖ‌ರ್ ರೆಡ್ಡಿ ಮುಖಂಡರಾದ ಬಸನಗೌಡ ಪಾಟೀಲ್, ಲಕ್ಷ್ಮಣ್, ರಘು, ಅಶೋಕ್, ಮುರಳಿ ಇತರರು ಇದ್ದರು.