ವಿಮಾನ ದುರಂತ: ಕನಸ್ಸುಗಳನ್ನ ಹೊತ್ತುಕೊಂಡು ಹೊದ ಜೀವಗಳು ಕೆಲವೇ ನಿಮಿಷಗಳಲ್ಲಿ ದಾರುಣವಾಗಿ ಅಂತ್ಯ...!

ಜಿಲ್ಲಾ ಸುದ್ದಿಕ್ರೈಮ್ದೇಶ/ವಿದೇಶ

ಧರ್ಮ ಬಸವನಪುರ

6/13/20251 min read

ಗುಜರಾತ್: ಹತ್ತಾರು ಕನಸುಗಳನ್ನು ಕಾಣುತ್ತಾ ಗುಜರಾತ್‌ ನ ಅಹಮದಾಬಾದ್‌ ನಿಂತ ಹೊರಟ ಜೀವಗಳು ಕೆಲವೇ ನಿಮಿಷಗಳಲ್ಲಿ ಬೆಂಕಿಯ ಕೆನ್ನಾಲೆ ಬೆಂದು ಅಂತ್ಯ ಕಂಡಿದ್ದಾರೆ.

ಸ್ವಂತ ಮನೆ ಹೊಂದುವ ಕನಸನ್ನು ಕಂಡಿದ್ದ ಕೇರಳದ ದಾದಿಯ ಕರಾಳ ಸಾವು:

ವಿಮಾನ ದುರಂತದಲ್ಲಿ ಕೇರಳದ ಪುಲ್ಲಾಡ್​ ಮೂಲದ ರಂಜಿತಾ ಗೋಪಕುಮಾರ್​ ಸಾವನ್ನಪ್ಪಿದ್ದಾರೆ. ರಂಜಿತಾ ಪತ್ತನಂತಿಟ್ಟ ಜಿಲ್ಲೆಯಲ್ಲೇ ಸರ್ಕಾರಿ ಉದ್ಯೋಗದಲ್ಲಿದ್ದರು. ಆದರೆ ತಮ್ಮ ಸ್ವಂತ ಮನೆ ಹೊಂದುವ ಕನಸನ್ನು ನನಸಾಗಿಸಿಕೊಳ್ಳಲು, ವಿದೇಶದಲ್ಲಿ ಕೆಲಸ ಮಾಡುತ್ತಿದ್ದರು. ರಜೆ ಪಡೆದು ಮಕ್ಕಳನ್ನು ನೋಡಲು ಬಂದಿದ್ದರು. ಈ ಹಿಂದೆ ಓಮನ್​ನ ಸಲಾಲ್​ನಲ್ಲಿ ಕೆಲಸ ಮಾಡಿದ್ದ ರಂಜಿತಾ, ಇದೀಗ ಲಂಡನ್​ನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದರು.

ಮೃತರು ಪತಿ ವಿನೀಶ್, ಶಾಲೆಗೆ ಹೋಗುವ ಇಬ್ಬರು ಮಕ್ಕಳು ಮತ್ತು ತಾಯಿ ತುಳಸಿ ಅವರನ್ನು ಅಗಲಿದ್ದಾರೆ. ಅವರ ಹೊಸ ಮನೆಯ ನಿರ್ಮಾಣ ಕಾರ್ಯ ಮುಕ್ಕಾಲು ಭಾಗದಷ್ಟು ಪೂರ್ಣಗೊಂಡಿದೆ. ಅಮ್ಮ ಲಂಡನ್​ ತಲುಪುತ್ತಾರೆ, ಓಣಂಗೆ ಮರಳಿ ಬರಲಿದ್ದಾರೆ ಎಂದು ಮಕ್ಕಳು ನಂಬಿದ್ದರು. ಆದರೆ ಅವರ ಸಾವಿನ ಸುದ್ದಿ ಕೇಳಿದಾಗ ಆಘಾತಕ್ಕೊಳಗಾದ ಮನೆಯವರ ರೋದನ ಮುಗಿಲು ಮುಟ್ಟಿದೆ.

ಕರ್ನಾಟಕದ ಕೋ ಪೈಲಟ್ ಕ್ಲೈವ್ ಕುಂದರ್ ಸಾವು:

ಕರ್ನಾಟಕದ ಕರಾವಳಿ ಮೂಲಕ ಕ್ಲೈವ್ ಕುಂದರ್ ಎಂಬುವರೂ ಕೋ ಪೈಲಟ್ ಆಗಿದ್ದರು. ಅವರು ಕೂಡ ವಿಮಾನ ದುರಂತದ ಬಳಿಕ ದುರ್ಮರಣಕ್ಕೆ ಈಡಾಗಿರುವುದಾಗಿ ತಿಳಿದು ಬಂದಿದೆ.

ಕರ್ನಾಟಕದ ಕರಾವಳಿ ಮೂಲದವಾರದ ಕ್ಲೈವ್‌ ಕುಂದರ್‌ ಅವರು ಮುಂಬೈನಲ್ಲಿ ವಾಸವಾಗಿದ್ದರು. ಕ್ಲೈವ್ ಕುಂದರ್ ಫಸ್ಟ್ ಆಫೀಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕ್ಲೈವ್ ಕುಂದರ್‌ ಅವರಿಗೆ 1100 ಗಂಟೆ ವಿಮಾನ ಹಾರಾಟ ನಡೆಸಿದ ಅನುಭವವಿತ್ತು. ಕ್ಲೈವ್‌ ಕುಂದರ್‌ ಅವರು ಪತನಗೊಂಡ ಏರ್ ಇಂಡಿಯಾದ AI-171 ವಿಮಾನದ ಕೋ ಪೈಲಟ್ ಆಗಿದ್ದರು.

ಮದುವೆಯಾಗಿ ಮೊದಲ ಬಾರಿಗೆ ಪತಿಯನ್ನು ಭೇಟಿಯಾಗಲು ಹೊರಟ ಮಹಿಳೆ ದುರಂತ ಸಾವು:

230 ಪ್ರಯಾಣಿಕರ ಪೈಕಿ ಮದುವೆಯಾಗಿ ಮೊದಲ ಬಾರಿಗೆ ಪತಿಯನ್ನು ಭೇಟಿಯಾಗಲು ತೆರಳುತ್ತಿದ್ದ ಖುಷ್ಬೂ ರಾಜಪುರೋಹಿತ್ ಎನ್ನುವ ಮಹಿಳೆಯೂ ಇದ್ದರು ಎಂದು ವರದಿಯಾಗಿದೆ.

ಖುಷ್ಬೂ ರಾಜಸ್ಥಾನದ ಬಲೋತಾರಾ ಜಿಲ್ಲೆಯ ಅರಬಾ ಗ್ರಾಮದ ನಿವಾಸಿಯಾಗಿದ್ದು, ಮದನ್ ಸಿಂಗ್ ರಾಜ್‌ಪುರೋಹಿತ್ ಅವರ ಪುತ್ರಿ. ಖುಷ್ಬೂ ಈ ವರ್ಷದ ಜನವರಿಯಲ್ಲಿ ಮನ್ಫೂಲ್ ಸಿಂಗ್ ಅವರನ್ನು ವಿವಾಹವಾಗಿದ್ದರು. ಮನ್ಫೂಲ್ ಸಿಂಗ್ ಅವರು ಲಂಡನ್‌ನಲ್ಲಿ ವಿದ್ಯಾರ್ಥಿಯಾಗಿದ್ದು, ಮದುವೆಯಾದ ಬಳಿಕ ಮೊದಲ ಬಾರಿಗೆ ಪತಿಯನ್ನು ಭೇಟಿಯಾಗಲು ಖುಷ್ಬೂ ತೆರಳುತ್ತಿದ್ದರು. ಆದರೆ ದುರದೃಷ್ಟವಶಾತ್ ವಿಮಾನ ಪತನದಲ್ಲಿ ಅವರು ಪ್ರಾಣ ಕಳೆದುಕೊಂಡಿದ್ದಾರೆ.

ಉದಯಪುರದ ಅಣ್ಣ-ತಂಗಿಯ ದುರಂತ ಸಾವು:

ಉದಯಪುರದ ಅಮೃತಶಿಲೆಯ ಉದ್ಯಮಿ ಪಿಂಕು ಮೋದಿ ಅವರ ಮಕ್ಕಳಾದ ಶುಭ್ ಮೋದಿ (24 ವರ್ಷ) ಮತ್ತು ಶಗುನ್ ಮೋದಿ (22 ವರ್ಷ) ಈ ವಿಮಾನದಲ್ಲಿದ್ದರು. ಇಬ್ಬರೂ ಎಂಬಿಎ ಪದವೀಧರರಾಗಿದ್ದು, ತಮ್ಮ ತಂದೆಯ ವ್ಯವಹಾರವನ್ನು ನಿರ್ವಹಿಸಲು ಸಹಾಯ ಮಾಡುತ್ತಿದ್ದರು. ಪ್ರಯಾಣಿಕರ ಪಟ್ಟಿಯಲ್ಲಿ ಶುಭ್ (98ನೇ ಸೀಟ್) ಮತ್ತು ಶಗುನ್ (99ನೇ ಸೀಟ್) ಲಂಡನ್‌ಗೆ ಪ್ರವಾಸಕ್ಕಾಗಿ ತೆರಳುತ್ತಿದ್ದರು, ಅಲ್ಲಿ ಅವರು ಸ್ನೇಹಿತರೊಂದಿಗೆ ಇರಲು ಯೋಜಿಸಿದ್ದರು. ಅಪಘಾತದ ಸುದ್ದಿ ತಿಳಿದ ತಕ್ಷಣ ಪಿಂಕು ಮೋದಿ ಕುಟುಂಬವು ಅಹಮದಾಬಾದ್‌ಗೆ ಧಾವಿಸಿತು. ಸ್ಥಳೀಯ ಜನರು ಪಿಂಕು ಮೋದಿ ಮನೆಯಲ್ಲಿ ಸೇರಿ ಸಾಂತ್ವನ ಹೇಳುತ್ತಿದ್ದಾರೆ.

ಉದಯಪುರ ಜಿಲ್ಲೆಯ ರುಂಡೆಡಾ ಗ್ರಾಮದ ನಿವಾಸಿಗಳಾದ ವರ್ದಿ ಚಂದ್ ಮೆನಾರಿಯಾ ಮತ್ತು ಪ್ರಕಾಶ್ ಮೆನಾರಿಯಾ ಕೂಡ ವಿಮಾನದಲ್ಲಿದ್ದರು. ಇಬ್ಬರೂ ಲಂಡನ್‌ನಲ್ಲಿ ಶೆಫ್ ಆಗಿ ಕೆಲಸ ಮಾಡುತ್ತಿದ್ದು, ಕೆಲಸಕ್ಕಾಗಿ ಹಿಂತಿರುಗುತ್ತಿದ್ದರು. ಪ್ರಯಾಣಿಕರ ಪಟ್ಟಿಯಲ್ಲಿ ಅವರ ಹೆಸರುಗಳು 90 ಮತ್ತು 91ನೇ ಸೀಟ್‌ನಲ್ಲಿದ್ದವು. ಈ ದುರಂತದಿಂದ ರುಂಡೆಡಾ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ಮುದ್ದಾದ ಕುಟುಂಬದೊಂದಿಗೆ ಲಂಡನ್ ನಲ್ಲಿ ಜೀವನ ಕಟ್ಟುವ ಕನಸು ಕಂಡ ಸಾಫ್ಟ್‌ವೇರ್ ಪ್ರತೀಕ್ ಜೋಶಿ:

ಸಾಫ್ಟ್‌ವೇರ್ ವೃತ್ತಿಪರರಾಗಿದ್ದ ರಾಜಸ್ಥಾನದ ಬನ್ಸ್ವಾರಾ ಮೂಲದ ಪ್ರತೀಕ್ ಜೋಶಿ ಎಂವವರು ತನ್ನ ಪತ್ನಿ ಮತ್ತು ಮೂವರು ಮುದ್ದಾದ ಮಕ್ಕಳೊಂದಿಗೆ ಲಂಡನ್ ನಲ್ಲಿ ಜೀವನ ಕಟ್ಟುವ ಕನಸು ಕಂಡು ತನ್ನ ಮೂಲ ಕುಟುಂಬಕ್ಕೆ ಯಾತ್ರೆಯ ವಿದಾಯ ಹೇಳಿ ಭವಿಷ್ಯವು ಕೈಗೆಟುಕುವ ದೂರದಲ್ಲಿದೆ ಎಂದು ಪ್ರಯಾಣ ಆರಂಭಿಸಿದ್ದರು. ಅವಳಿ ಹೆಣ್ಣು ಮಕ್ಕಳು ಸೇರಿ ಉತ್ಸಾಹದಿಂದ ತುಂಬಿದ ಐವರ ಕುಟುಂಬವು ಲಂಡನ್‌ಗೆ ಪ್ರಯಾಣಿಸಲು ಏರ್ ಇಂಡಿಯಾ ವಿಮಾನ 171 ಅನ್ನು ಹತ್ತಿತ್ತು. ಸೀಟುಗಳಲ್ಲಿ ಕುಳಿತ ಬಳಿಕ ಸೆಲ್ಫೀ ಕ್ಲಿಕ್ಕಿಸಿ ಸಂಬಂಧಿಕರಿಗೆ ಕಳುಹಿಸಿದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಹೊಸ ಜೀವನಕ್ಕೆ ಏಕಮುಖ ಪ್ರಯಾಣ ಎಂದಿಗೂ ಸಾಧ್ಯವಾಗಲಿಲ್ಲ. ವಿಮಾನ‌ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ, ಕಂಡ ಕನಸುಗಳೆಲ್ಲ ಸುಟ್ಟು ಬೂದಿಯಾಯಿತು. ಮುದ್ದಾದ ಕುಟುಂಬದಲ್ಲಿ ಯಾರೂ ಬದುಕುಳಿಯಲಿಲ್ಲ. ಕುಟುಂಬವು ಸೀಟುಗಳಲ್ಲಿ ಕುಳಿತ ಬಳಿಕ ತೆಗೆದ ಸೆಲ್ಫೀ ಚಿತ್ರಗಳು ಬಾರೀ ವೈರಲ್ ಅಗಿದೆ.! ನಗುತ್ತಿರುವ ಕುಟುಂಬ ಇನ್ನೆಂದೂ ಬಾರದ ಲೋಕಕ್ಕೆ ಪಯಣವನ್ನು ಬೆಳೆಸಿದೆ..ಉಳಿದದ್ದು ಖಾಲಿ ನೆನಪುಗಳು ಮಾತ್ರ

ಭಾರತದಲ್ಲಿದು ನಮ್ಮ ಕೊನೆಯ ರಾತ್ರಿ ಎಂದವರ ಜೀವನವೇ ಕೊನೆಯಾಯ್ತು.

ಗುರುವಾರ ಅಹಮದಾಬಾದ್‌ನಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಸಿಲುಕಿದ ಲಂಡನ್‌ನ ಪ್ರಜೆಗಳಿಬ್ಬರು ಭಾರತ ಬಿಟ್ಟು ಹೊರಡುವ ಮುಂಚೆ ಮಾಡಿದ ವಿಡಿಯೋ ಲಭ್ಯವಾಗಿದೆ.

ಲಂಡನ್ ಮೂಲದ ಯೋಗಾಭ್ಯಾಸಿ ಜೇಮಿ ಮೀಕ್ ಮತ್ತು ಅವರ ಸ್ನೇಹಿತ ಫಿಯೊಂಗಲ್ ಗ್ರೀನ್‌ಲಾ ಗುಜರಾತ್ ಭೇಟಿ ಮುಗಿಸಿ ಲಂಡನ್‌ಗೆ ತೆರಳುವ ಮುಂಚೆ ವಿಡಿಯೋ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಇದು ಭಾರತದಲ್ಲಿ ನಮ್ಮ ಕೊನೆಯ ರಾತ್ರಿ. ಭಾರತದಲ್ಲಿ ನಮಗೆ ನಿಜವಾಗಿಯೂ ಮಾಂತ್ರಿಕ ಅನುಭವವಾಯಿತು. ಮನಸ್ಸಿಗೆ ಮುದ ನೀಡುವ ಅನೇಕ ಕ್ಷಣಗಳು ಘಟಿಸಿದವು. ಇವನ್ನೆಲ್ಲ ವ್ಲಾಗ್‌ನಲ್ಲಿ ಹಂಚಿಕೊಳ್ಳುತ್ತೇವೆ' ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಆದರೆ ದುರದೃಷ್ಟವೆಂಬಂತೆ ಅದು ಅವರ ಜೀವನದ ಕೊನೆಯ ದಿನವಾಗಿಯೂ ಹೊರಹೊಮ್ಮಿದೆ.

ಏರ್ ಇಂಡಿಯಾನ ಅಧಿಕೃತ ಮಾಹಿತಿಯ ಪ್ರಕಾರ, ವಿಮಾನದಲ್ಲಿ 169 ಭಾರತೀಯರು, 53 ಇಂಗ್ಲೆಂಡ್‌ನವರು, 7 ಪೋರ್ಚುಗಲ್‌ನವರು, ಮತ್ತು 1 ಕೆನಡಾದ ಪ್ರಜೆ ಇದ್ದರು. ಈ ದುರಂತವು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಘಾತವನ್ನುಂಟುಮಾಡಿದೆ.