PM Modi in Srilanka:ಶ್ರೀಲಂಕಾದಲ್ಲಿ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ದೇಶ/ವಿದೇಶ


ಕೊಲಂಬೊ: ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ ನಡುವಿನ ಮಾತುಕತೆಯ ನಂತರ, ಭಾರತ ಮತ್ತು ಶ್ರೀಲಂಕಾ ಶನಿವಾರ ಮೊದಲ ಬಾರಿಗೆ ಮಹತ್ವಾಕಾಂಕ್ಷೆಯ ರಕ್ಷಣಾ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದವು.
ತ್ರಿಕೋನಮಿಯನ್ನು ಇಂಧನ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಒಪ್ಪಂದಕ್ಕೂ ಉಭಯ ದೇಶಗಳು ಸಹಿ ಹಾಕಿವೆ. ಶ್ರೀಲಂಕಾದ ಪೂರ್ವ ಭಾಗಕ್ಕೆ ಭಾರತದ ಬಹು-ವಲಯ ಅನುದಾನ ಸಹಾಯವನ್ನು ಸುಗಮಗೊಳಿಸಲು ಮತ್ತೊಂದು ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಪ್ರಧಾನಿ ಮೋದಿ ಮತ್ತು ಶ್ರೀಲಂಕಾ ಅಧ್ಯಕ್ಷ ದಿಸಾನಾಯಕೆ ಕೂಡ ಸಂಪೂರ್ ಸೌರಶಕ್ತಿ ಯೋಜನೆಯನ್ನು ವರ್ಚುವಲ್ ಮೂಲಕ ಉದ್ಘಾಟಿಸಿದರು. ಉಭಯ ನಾಯಕರ ನಡುವಿನ ಮಾತುಕತೆಯ ನಂತರ ಎರಡೂ ಕಡೆಯವರ ನಡುವೆ ಹಲವಾರು ಒಪ್ಪಂದಗಳು ದೃಢಪಟ್ಟವು.
ನಿನ್ನೆ ಬ್ಯಾಂಕಾಕ್ ಪ್ರವಾಸವನ್ನು ಮುಗಿಸಿದ ನಂತರ ಶ್ರೀಲಂಕಾ ರಾಜಧಾನಿ ಕೊಲಂಬೊಗೆ ಆಗಮಿಸಿದ ಪ್ರಧಾನಿ ಮೋದಿಯವರು ಅಧ್ಯಕ್ಷರ ಜೊತೆ ಮಾತುಕತೆ ನಡೆಯಿತು, ಥೈಲ್ಯಾಂಡ್ ನಲ್ಲಿ ಅವರು BIMSTEC (ಬಹು-ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಬಂಗಾಳ ಕೊಲ್ಲಿ ಉಪಕ್ರಮ) ಶೃಂಗಸಭೆಯಲ್ಲಿ ಭಾಗವಹಿಸಿದರು.
ಮೋದಿಗೆ ಅಭೂತಪೂರ್ವ ಸ್ವಾಗತ
ಶ್ರೀಲಂಕಾ ರಾಜಧಾನಿಯ ಹೃದಯಭಾಗದಲ್ಲಿರುವ ಐತಿಹಾಸಿಕ ಸ್ವಾತಂತ್ರ್ಯ ಚೌಕದಲ್ಲಿ ಪ್ರಧಾನಿ ಮೋದಿಯವರಿಗೆ ವಿದ್ಯುಕ್ತ ಸ್ವಾಗತ ನೀಡಲಾಯಿತು, ಅಧ್ಯಕ್ಷ ದಿಸಾನಾಯಕೆ ಅವರು ಪ್ರಧಾನ ಮಂತ್ರಿಯನ್ನು ಚೌಕದಲ್ಲಿ ಬರಮಾಡಿಕೊಂಡರು - ಇದು ರಾಷ್ಟ್ರೀಯ ದಿನಾಚರಣೆಯ ಸ್ಥಳವಾಗಿದ್ದು, 1948 ರಲ್ಲಿ ಬ್ರಿಟಿಷ್ ಆಳ್ವಿಕೆಯಿಂದ ಶ್ರೀಲಂಕಾ ಸ್ವಾತಂತ್ರ್ಯ ಪಡೆದ ಸ್ಮರಣಾರ್ಥವಾಗಿ ನಿರ್ಮಿಸಲಾದ ಸ್ವಾತಂತ್ರ್ಯ ಸ್ಮಾರಕ ಸಭಾಂಗಣದಿಂದ ಈ ಹೆಸರು ಬಂದಿದೆ.