ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ದ ನಾಳೆ ಬೃಹತ್ ಪ್ರತಿಭಟನೆ-ಮಾಜಿ ಶಾಸಕ ಟಿ.ವೆಂಕಟರಮಣಯ್ಯ

ಸ್ಥಳೀಯ ಸುದ್ದಿ

ರಾಘವೇಂದ್ರ ಹೆಚ್.ಎ

4/16/20251 min read

ದೊಡ್ಡಬಳ್ಳಾಪುರ: ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ನಡೆ ಖಂಡಿಸಿ ಜನಾಕ್ರೋಶ ಪ್ರತಿಭಟನೆಯನ್ನು ನಾಳೆ ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಹಾಗು ಕೆಪಿಸಿಸಿ ಉಪಾಧ್ಯಕ್ಷ ಟಿ.ವೆಂಕಟರಮಣಯ್ಯ ತಿಳಿಸಿದರು.

ನಗರದ ಕಾಂಗ್ರೆಸ್​ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಅಭಿವೃದ್ದಿ ಹೆಸರಿನಲ್ಲಿ ಯೋಜನೆಗಳನ್ನು ಜಾರಿ ಮಾಡಿ ಜನಮಣ್ಣನೆ ಗಳಿಸಲು ಸಾಧ್ಯವಾಗುತ್ತಿಲ್ಲ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡುವ ಮೂಲಕ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವಂತೆ ಮಾಡಿ ಜನರು ನೆಮ್ಮದಿಯ ಜೀವನ ನಡೆಸಲಾಗದಂತೆ ಸಂಕಷ್ಟಕ್ಕೆ ದೂಡಿದ್ದಾರೆ. ಇವೆಲ್ಲವುದರ ವಿರುದ್ದವಾಗಿ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೇಂದ್ರದ ಮುಖಂಡರು, ರಾಜ್ಯ ಉಸ್ತುವಾರಿಗಳು ಆಗಿರುವ ಸುರ್ಜೇವಾಲ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್​ ಅವರ ಸೂಚನೆಯಂತೆ ನಾಳೆ 12 ಗಂಟೆಗೆ ನಗರದ ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.

ನಾಳೆ ಸುಮಾರು 60 ರಿಂದ 80 ಬಸ್​ಗಳಷ್ಟು ಜನರು ಜನಾಕ್ರೋಶ ವಿರುದ್ದದ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಈ ಹಿನ್ನೆಲೆ ತಾಲ್ಲೂಕಿನ ಕಾಂಗ್ರೆಸ್​ ಕಾರ್ಯಕರ್ತರು, ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜನರಲ್ಲಿ ಮಾಧ್ಯಮಗಳ ಮೂಲಕ ಮನವಿ ಮಾಡಿಕೊಂಡರು.

ಶಾಸಕರ ಆರೋಪಕ್ಕೆ ಕಿಡಿ​:

ದೊಡ್ಡಬಳ್ಳಾಪುರ ತಾಲ್ಲೂಕಿನ ಈಗಿನ ಜನಪ್ರತಿನಿಧಿ ನಮಗೆ ಅನುದಾನ ನೀಡುತ್ತಿಲ್ಲ ಎಂದು ಜನರ ಮುಂದೆ ಆರೋಪ ಮಾಡುತ್ತಿದ್ದು ಇದು ಸರಿಯಲ್ಲ, ತಾಲೂಕಿಗೆ ಅನುದಾನದ ತಾರತಮ್ಯ ಮಾಡಿದ್ದು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದ 2008 ರಿಂದ 2013 ಮತ್ತು 2018 ರಿಂದ 2023 ರ ಅವಧಿಯಲ್ಲಿ, ಈ ವೇಳೆ ಅವರು ಯಾವುದೇ ವಿರೋಧ ಪಕ್ಷಗಳಿಗೆ ಅನುದಾನಗಳನ್ನು ಬಿಡುಗಡೆ ಮಾಡಲಿಲ್ಲ, ಆದರೇ ಈಗಿನ ಸಿದ್ದರಾಮಯ್ಯ ಸರ್ಕಾರ ಅವೆಲ್ಲವನ್ನು ಮನಸಿನಲ್ಲಿಟ್ಟುಕೊಳ್ಳದೇ ಯಾವುದೇ ತಾರತಮ್ಯ ಮಾಡದೇ ಎಲ್ಲರಿಗೂ ಅನುದಾನವನ್ನು ಬಿಡುಗಡೆ ಮಾಡುತ್ತಿದ್ದಾರೆ ಎಂದು ಹಾಲಿ ಶಾಸಕ ಧೀರಜ್​ ಮುನಿರಾಜ್ ಅವರ ಹೆಸರೇಳದೇ ಅವರ ಆರೋಪಕ್ಕೆ ಟಾಂಗ್​ ಕೊಟ್ಟರು.

ಏಪ್ರಿಲ್​ 28ಕ್ಕೆ ಸಾಧನ ಸಮಾವೇಶ:

ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಏಪ್ರಿಲ್​ 28ಕ್ಕೆ ಸಾಧನ ಸಮಾವೇಶ ಏರ್ಪಡಿಸಲಾಗಿದೆ. ಇದಕ್ಕೆ ಪೂರ್ವಭಾವಿಯಾಗಿ ಒಂದು ಸಭೆಯನ್ನು ಹಮ್ಮಿಕೊಳ್ಳಲಾಗುವುದು. ಈ ಸಭೆಯಲ್ಲಿ ತಾಲ್ಲೂಕಿನ ಅಭಿವೃದ್ದಿಗಳು ಮತ್ತು ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚೆ ನಡೆಸಲಾಗುವುದು ಎಂದರು.

ಈ ಪತ್ರಿಕಾಗೋಷ್ಟಿಯಲ್ಲಿ ನಗರ ಬ್ಲಾಕ್​ ಅಧ್ಯಕ್ಷ ಜಗನ್ನಾಥ್​, ಗ್ರಾಮಾಂತರ ಬ್ಲಾಕ್​ ಅಧ್ಯಕ್ಷ ಭೈರೇಗೌಡ, ಭೂ ನ್ಯಾಯ ಮಂಡಳಿ ಸದಸ್ಯ ಆದಿತ್ಯ ನಾಗೇಶ್​, ಅಂಜನಮೂರ್ತಿ, ಚುಂಚೇಗೌಡ, ಅಪ್ಪಿ ವೆಂಕಟೇಶ್​, ಟಿ.ಮಂಜುನಾಥ್​, ಸೇರಿದಂತೆ ಕಾಂಗ್ರೆಸ್​ ಮುಖಂಡರು ಉಪಸ್ಥಿತರಿದ್ದರು.