Protest : ಭೂ ಸ್ವಾಧೀನಕ್ಕೆ ವಿರೋಧ: ಉಗ್ರ ಸ್ವರೂಪ ತಾಳಿದ ರೈತರ ಹೋರಾಟ

ಸ್ಥಳೀಯ ಸುದ್ದಿ

ರಾಘವೇಂದ್ರ ಹೆಚ್​​.ಎ

4/11/20251 min read

ದೇವನಹಳ್ಳಿ: ಸಾವಿರ ದಿನಗಳಿಂದ ಶಾಂತಿಯುತವಾಗಿ ನಡೆಯುತ್ತಿದ್ದ ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟ ಗುರುವಾರ ವಿಕೋಪಕ್ಕೆ ತಿರುಗಿತು.

ಸರ್ಕಾರದ ನಿರ್ಧಾರದಿಂದ ಬೇಸತ್ತ ರೈತ ವೆಂಕಟೇಶ್, ಪ್ರತಿಭಟನ ಸ್ಥಳದಲ್ಲಿ ತಯಾರಿಸಿದ್ದ ಅನ್ನಕ್ಕೆ ವಿಷ ಬೆರೆಸಿ ಸೇವಿಸಿ ಅಸ್ವಸ್ಥಗೊಂಡರು. ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚೇತರಿಸಿಕೊಂಡಿದ್ದಾರೆ.

ಚನ್ನರಾಯಪಟ್ಟಣದಲ್ಲಿ ಭೂ ಸ್ವಾಧೀನ ನಿರ್ಧಾರಕ್ಕೆ ಸಂಬಂಧಿಸಿದಂತೆ ವಾರದೊಳಗೆ ರೈತರಿಗೆ ಪೂರಕವಾದ ನಿರ್ಧಾರ ಪ್ರಕಟಿಸುವುದಾಗಿ ಭರವಸೆ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೋರಾಟ ಕೈ ಬಿಡುವಂತೆ ರೈತರಿಗೆ ಮನವಿ ಮಾಡಿದ್ದರು.

ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಹೊರಡಿಸಿದ್ದ ಭೂಸ್ವಾಧೀನ ಶಿಫಾರಸು ಪತ್ರ ರೈತರಲ್ಲಿ ಆತಂಕ ಮೂಡಿಸಿತ್ತು. ಬೇಸತ್ತ ರೈತರು ಏ.10ರಂದು ಸಚಿವ ಮುನಿಯಪ್ಪ ಅವರ ಮನೆಗೆ ತೆರಳಿ ಚರ್ಚಿಸಲು ನಿರ್ಧರಿಸಿದ್ದರು. ಗುರುವಾರ ಬೆಳಗ್ಗೆ ಚನ್ನರಾಯಪಟ್ಟಣ ಹೋಬಳಿ ರೈತರು ಮತ್ತು ಹೋರಾಟಗಾರರು ಸಚಿವರ ಭೇಟಿಗೆ ಬೆಂಗಳೂರಿನತ್ತ ಹೊರಟಿದ್ದರು. ಪೊಲೀಸರು ಅವರನ್ನು ತಡೆದರು. ಇಬ್ಬರ ಮಧ್ಯೆ ಶುರುವಾದ ಮಾತು, ವಾಗ್ವಾದಕ್ಕೆ ತಿರುಗಿತು. ರೈತರು ಸ್ಥಳದಲ್ಲೇ ಪ್ರತಿಭಟನೆ ಆರಂಭಿಸಿದರು.

ಗುರುವಾರ ಬೆಳಗ್ಗೆ ಚನ್ನರಾಯಪಟ್ಟಣ ಹೋಬಳಿ ರೈತರು ಮತ್ತು ಹೋರಾಟಗಾರರು ಸಚಿವರ ಭೇಟಿಗೆ ಬೆಂಗಳೂರಿನತ್ತ ಹೊರಟಿದ್ದರು. ಪೊಲೀಸರು ಅವರನ್ನು ತಡೆದರು. ಇಬ್ಬರ ಮಧ್ಯೆ ಶುರುವಾದ ಮಾತು, ವಾಗ್ವಾದಕ್ಕೆ ತಿರುಗಿತು. ರೈತರು ಸ್ಥಳದಲ್ಲೇ ಪ್ರತಿಭಟನೆ ಆರಂಭಿಸಿದರು.

ಸಚಿವರ ಭೇಟಿಗೆ ಹೊರಟಿದ್ದ ರೈತರನ್ನು ತಡೆದು ಪೊಲೀಸರು ದರ್ಪ ತೋರುತ್ತಿದ್ದಾರೆ. ಕೆಲ ಮುಖಂಡರನ್ನು ಗೃಹ ಬಂಧನದಲ್ಲಿಟ್ಟು ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ ಎಂದು ಹರಿಹಾಯ್ದರು.

ಧರಣಿ ಸ್ಥಳದಲ್ಲೇ ಅನ್ನ ತಯಾರಿಸಿ ಅದರಲ್ಲಿ‌ ವಿಷ ಬೆರೆಸಿ ಸೇವಿಸಲು ಮುಂದಾದರು. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು ಅನ್ನದ ಪಾತ್ರೆ ಕಿತ್ತು ಬಿಸಾಡಿದರು. ಆಗ ರೈತರು ಮತ್ತು ಪೊಲೀಸರ ನಡುವೆ ತಳ್ಳಾಟ ನಡೆಯಿತು.

ಗಲಾಟೆ ಮಧ್ಯೆಯೇ ವೆಂಕಟೇಶ ಎಂಬ ರೈತ ವಿಷ ಬೆರೆಸಿದ್ದ ಅನ್ನ ಸೇವಿಸಿದರು. ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಪೊಲೀಸರು ಹೋರಾಟಗಾರರನ್ನು ತಡೆದು ನಿಲ್ಲಿಸಿದ ಚನ್ನರಾಯಪಟ್ಟಣ ಮುಖ್ಯರಸ್ತೆಯಲ್ಲಿಯೇ ರೈತರು ಆಹೋರಾತ್ರಿ ಧರಣಿ ಆರಂಭಿಸಿದ್ದಾರೆ.


ಈ ಬೆಳವಣಿಗೆಯೊಂದಿಗೆ, ಶಾಂತಿಯುತ ಭೂಸ್ವಾಧೀನ ವಿರೋಧಿ ಹೋರಾಟ ಹಿಂಸೆಗೆ ತಿರುಗಿದೆ. ಚನ್ನರಾಯಪಟ್ಟಣದ 13 ಹಳ್ಳಿಗಳಲ್ಲಿ 1,777 ಎಕರೆ ಕೃಷಿ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕೆ ಕೆಐಎಡಿಬಿ ಸ್ವಾಧೀನ ಪಡಿಸಿಕೊಳ್ಳುವುದನ್ನು ವಿರೋಧಿಸಿ 1,103 ದಿನಗಳಿಂದ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.