ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ:ಬೈಕ್ ಜಾಥಾ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ!


ಕೆ.ಆರ್.ಪುರ: ಬೆಂಗಳೂರು ಪೂರ್ವ ನಗರ ಪಾಲಿಕೆಯಾದ್ಯಾಂತ ಡಿ.21ರಿಂದ 24 ರವರೆಗೆ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯಲಿದೆ. ಲಸಿಕಾ ಕೇಂದ್ರಗಳಲ್ಲಿ ಬೆಳಗ್ಗೆ 8ರಿಂದ ಸಂಜೆ 5ರ ವರೆಗೆ 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಲಸಿಕೆ ನೀಡುತ್ತಿದ್ದು, ಪೋಷಕರು ತಪ್ಪದೆ ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಬೇಕೆಂದು ಬೆಂಗಳೂರು ಪೂರ್ವ ನಗರಪಾಲಿಕೆ ಅಪರ ಆಯುಕ್ತ ಲೋಖಂಡೆ ಸ್ನೇಹಲ್ ಸುಧಾಕರ್ ತಿಳಿಸಿದರು.
ಕೆ.ಆರ್.ಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಬೈಕ್ ಜಾಥ ಹಮ್ಮಿಕೊಂಡಿದ್ದು ಬೆಂಗಳೂರು ಪೂರ್ವ ನಗರಪಾಲಿಕೆ ಅಪರ ಆಯುಕ್ತ ಲೋಖಂಡೆ ಸ್ನೇಹಲ್ ಅವರು ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಡಿ 21 ರಿಂದ ಡಿ.24 ರ ವರೆಗೆ ಲಸಿಕಾ ಕಾರ್ಯಕ್ರಮ ನಡೆಯಲಿದ್ದು,ಮಕ್ಕಳಿಗೆ ಲಸಿಕೆ ಹಾಕಿಸುವಂತೆ ಬೈಕ್ ಸವಾರರು ಅರಿವು ಮೂಡಿಸುವ ಕಾರ್ಯವನ್ನು ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿಗಳು ಮಾಡುತ್ತಿರುವುದು ಉತ್ತಮ ಕೆಲಸ ಎಂದರು.
ಪೂರ್ವ ಪಾಲಿಕೆಯಲ್ಲಿ ಸಂಪೂರ್ಣವಾಗಿ ಪೋಲಿಯೊ ಲಸಿಕೆ ಆಗಬೇಕು ಎಂಬುದು ನಮ್ಮ ಉದ್ದೇಶವಾಗಿದ್ದು,ಐದು ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿಸಬೇಕು,ಆ ಮೂಲಕ ಮಕ್ಕಳ ಆರೋಗ್ಯ ರಕ್ಷಣೆಗೆ ಸಹಕಾರಿಯಾಗಬೇಕು ಎಂದು ಮನವಿ ಮಾಡಿದರು.
ಮೂರು ದಿನಗಳ ಕಾಲ ಮನೆ ಮನೆಗೆ ಭೇಟಿ ಕಾರ್ಯಕ್ರಮ ನಡೆಯಲಿದ್ದು, ವಲಸೆ ಮಕ್ಕಳು, ಸ್ಲಂಗಳಲ್ಲಿರುವ ಮಕ್ಕಳಿಗೆ ಆದ್ಯತೆ ನೀಡಿ ಅವರ ಬಾಯಿಯ ಮೂಲಕ ಎರಡು ಹನಿ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗಿದೆ.ಲಸಿಕಾ ದಿನದಂದು ಲಸಿಕೆಯಿಂದ ಹೊರಗುಳಿದ ಮಕ್ಕಳಿಗೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ನರ್ಸಿಂಗ್ ವಿದ್ಯಾರ್ಥಿಗಳು ಮನೆ-ಮನೆಗೆ ತೆರಳಿ ಲಸಿಕೆ ಹಾಕಲಿದ್ದಾರೆ ಎಂದರು.
ಬೆಂಗಳೂರು ಪೂರ್ವ ನಗರ ಪಾಲಿಆಯುಕ್ತರಾದ ಡಿ.ಎಸ್. ರಮೇಶ್ ಅವರು ಮಾತನಾಡಿ, ಪೂರ್ವ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ 425 ಬೂತ್ ಗಳನ್ನ ರಚನೆ ಮಾಡಲಾಗಿದ್ದು 5 ವರ್ಷ ವಯಸ್ಸಿನೊಳಗಿನ ಒಟ್ಟು 133534 ಮಕ್ಕಳನ್ನು ಈಗಾಗಲೇ ಲಸಿಕೆ ನೀಡಲು ಗುರುತಿಸಲಾಗಿದೆ.ಮಕ್ಕಳಿಗೆ ಲಸಿಕೆ ನೀಡಲು ಲಸಿಕಾ ಕೇಂದ್ರಗಳ ಜೊತೆಯಲ್ಲಿ 64 ಟ್ರಾನ್ಸಿಟ್ ಬೂತ್‌ಗಳು 64 ಮೊಬೈಲ್ ತಂಡಗಳಿದ್ದು, ಪ್ರತಿ ಬೂತ್ ಗೆ ನಾಲ್ಕು ಸಿಬ್ಬಂದಿಗಳಂತೆ ಸೂಮಾರು 1956 ಮಂದಿ ಕಾರ್ಯ ನಿರ್ವಾಹಿಸುತ್ತಿದ್ದಾರೆ.ಇವರ ಮೇಲ್ವಿಚಾರಣೆ ಮಾಡಲು 103 ಮೇಲ್ವಿಚಾರಕರನ್ನ ಗುರ್ತಿಸಲಾಗಿದೆ. ಇನ್ನೂ ವಿಶೇಷವಾಗಿ ಕೆ.ಆರ್.ಪುರ ರೈಲ್ವೆ ಸ್ಟೇಷನ್ ನಲ್ಲಿ ಒಂದು ವಿಶೇಷ ತಂಡ ರಚನೆ ಮಾಡಿ ಕೆ.ಆರ್.ಪುರದಿಂದ ಮೆಜೆಸ್ಟಿಕ್ ರೈಲ್ವೆ ಸ್ಟೇಷನ್ ನವರೆಗೆ ಸಂಚರಿಸಿ ಪ್ರತಿ ಬೋಗಿಗಳಿ ಭೇಟಿ ನೀಡಿ ಮಕ್ಕಳು ಇದ್ದರೆ ಅವರಿಗೆ ಲಸಿಕೆ ನೀಡುವ ಕಾರ್ಯವನ್ನ ಮಾಡಲಾಗುತ್ತಿದೆ ಎಂದರು.
ಜಂಟಿ ಆಯುಕ್ತರಾದ ಡಾ. ಸುಧಾ ಅವರು ಮಾತನಾಡಿ ಆರೋಗ್ಯ ಸೇವೆಗಳು ದೇಶದ ಕಟ್ಟ ಕಡೆಯ ನಾಗರೀಕರಿಗೂ ತಲುಪುವಂತೆ ಕರ್ತವ್ಯ ನಿರ್ವಹಿಸಬೇಕೆಂದು ಕರೆ ನೀಡಿದರು.
ಎಲ್ಲಾ ಸರ್ಕಾರಿ ಆಸ್ಪತ್ರೆಗಳು, ಶಾಲೆ, ಬಸ್, ರೈಲ್ವೆ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಆರೋಗ್ಯ ಕಾರ್ಯಕರ್ತರು ಪೊಲಿಯೋ ಲಸಿಕೆ ಹಾಕಲಿದ್ದಾರೆ. ಪೋಷಕರು ತಪ್ಪದೆ ತಮ್ಮ ಐದು ವರ್ಷದೊಳಗಿನ ಮಕ್ಕಳಿಗೆ ಹಿಂದೆ ಎಷ್ಟೇ ಬಾರಿ ಪೋಲಿಯೋ ಹನಿ ಹಾಕಿಸಿದ್ದರೂ ಮತ್ತೆ ಲಸಿಕೆ ಹಾಕಿಸುವಂತೆ ಮನವಿ ಮಾಡಿದರು.
ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮ ಯಶಸ್ವಿ ಆಗಲು ನಮ್ಮ ಜೊತೆ ಕೈ ಜೋಡಿಸಿರುವ ಹಾಗೂ ಸಹಕಾರ ನೀಡಿತ್ತಿರುವ ಎಲ್ಲಾ ಸಂಘಸಂಸ್ಥೆಗಳಿಗೆ ಕೃತಜ್ಞತೆಗಳನ್ನ ತಿಳಿಸಿದರು.
ಇದೇ ಸಂದರ್ಭ ಪಲ್ಸ್ ಪೊಲಿಯೋ ಕಾರ್ಯಕ್ರಮದ ಕುರಿತು ಭಿತ್ತಿಪತ್ರ ಬಿಡುಗಡೆಗೊಳಿಸಲಾಯಿತು.ಬೆಂಗಳೂರು ಪೂರ್ವ ನಗರ ಪಾಲಿಕೆ ಆರೋಗ್ಯ ಅಧಿಕಾರಿಗಳಾದ ಡಾ. ಸವಿತಾ, ಡಾ. ಶಿವಪ್ಪ,ಡಾ. ವಿಶ್ವೇಶ್ವರಯ್ಯ ಡಾ. ಲೀಲಾ ಡಾ. ನಿಸರ್ಗ, ಹ್ಯುಮಾನಿಟಿ ಕಾಲ್ಸ್ ಬೈಕ್ ರೈಡರ್ ನ ಮುಖಂಡರಾದ ಮನು,ಆರೋಗ್ಯ ಮೇಲ್ವಿಚಾರಕರುಗಳಾದ ರಾಘವೇಂದ್ರ, ಹನುಮಂತಪ್ಪ, ಶ್ರೀ ಸಂಜಯ್,ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಗುರುರಾಜ್ ಇದ್ದರು.

