RCB ಕಪ್ ಗೆದ್ದ ಜೋಶ್​: ಕರ್ನಾಟಕದಲ್ಲಿ ಕೋಟಿ ಕೋಟಿ ಮೌಲ್ಯದ ಮದ್ಯ ಸೇಲ್..! ಕುಡಿದು-ಕುಣಿದು ಕುಪ್ಪಳಿಸಿದ ಮಂದಿ

ದೇಶ/ವಿದೇಶ

ರಾಘವೇಂದ್ರ ಹೆಚ್.ಎ

6/4/20251 min read

ಬೆಂಗಳೂರು: 18 ವರ್ಷಗಳ ಬಳಿಕ ಕೊನೆಗೂ ಕಪ್‌ ಗೆದ್ದ ಸಂಭ್ರಮದಲ್ಲಿ ನಿನ್ನೆ ಒಂದೇ ದಿನ ದಾಖಲೆ ಮಟ್ಟದಲ್ಲಿ ಮದ್ಯ ಮಾರಾಟವಾಗಿದೆ ಎಂದು ತಿಳಿದು ಬಂದಿದೆ.

ನೆಚ್ಚಿನ ತಂಡ ಆರ್​​ಸಿಬಿ ಕಪ್ ಗೆದ್ದ ಜೋಶ್​ನಲ್ಲಿ ಅಭಿಮಾನಿಗಳು ಕೋಟ್ಯಂತರ ರೂ ಬಿಯರ್ (Beer) ಮತ್ತು ಲಿಕ್ಕರ್​​ ಕುಡಿದು ಕುಪ್ಪಳಿಸಿದ್ದಾರೆ. ನಿನ್ನೆ ಒಂದೇ ದಿನ ಒಟ್ಟು ಅಬಕಾರಿ ಇಲಾಖೆಗೆ 157.94 ಕೋಟಿ ರೂ ಆದಾಯ ಹರಿದುಬಂದಿದೆ. ಆರ್‌ಸಿಬಿ ಗೆಲವು ಸಾಧಿಸುತ್ತಿದ್ದಂತೆ ಮತ್ತೆ ಹುಚ್ಚೆದ್ದು ಕುಣಿದ ಅಭಿಮಾನಿಗಳು ಬಾರ್‌ಗಳಿಗೆ ನುಗ್ಗಿ ಕಂಠಪೂರ್ತಿ ಬಿಯರ್‌, ಮದ್ಯ ಸೇವನೆ ಮಾಡಿ ಸಂಭ್ರಮಾಚರಣೆ ನಡೆಸಿದ್ದಾರೆ.

ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್​ನಲ್ಲಿ ಫ್ಯಾನ್ಸ್ ಆರ್​ಸಿಬಿ ಪರ ಜಯಘೋಷ ಕೂಗುತ್ತಾ ಕುಣಿದು ಕುಪ್ಪಳಿಸಿದ್ದರು. ಮಧ್ಯರಾತ್ರಿ ಆದರೂ ಅಭಿಮಾನಿಗಳ ಸಾಗರವೇ ರಸ್ತೆ ರಸ್ತೆಯಲ್ಲೂ ತುಂಬಿ ಹೋಗಿತ್ತು. ಸಿಲಿಕಾನ್​ ಸಿಟಿಯ ಪಬ್​ ಮತ್ತು ಬಾರ್​ಗಳು ಫುಲ್​ ಆಗಿದ್ದವು.​ ಆರ್​ಸಿಬಿ ಅಭಿಮಾನಿಗಳ ಪಾಲಿಗೆ ದೀಪಾವಳಿ, ಯುಗಾದಿ, ಸಂಕ್ರಾಂತಿ ಎಲ್ಲಾ ಹಬ್ಬ ಒಟ್ಟೊಟ್ಟಿಗೆ ಬಂದಂತಾಗಿತ್ತು.

ನಿನ್ನೆ ರಾತ್ರಿ ಒಂದೇ ದಿನ ಕರ್ನಾಟಕದಲ್ಲಿ 127 ಕೋಟಿ 88 ಲಕ್ಷ ರೂ ಮೌಲ್ಯದ 1.28 ಲಕ್ಷ ಬಾಕ್ಸ್ ಲಿಕ್ಕರ್ ಮಾರಾಟವಾದರೆ, 30 ಕೋಟಿ 66 ಲಕ್ಷ ರೂ ಬೆಲೆಯ 1.48 ಲಕ್ಷ ಬಾಕ್ಸ್ ಬಿಯರ್ ಬಾಟಲ್​ ಮಾರಾಟವಾಗಿದೆ. ಆ ಮೂಲಕ ಒಟ್ಟಾರೆ ಒಂದೇ ದಿನಕ್ಕೆ 157.94 ಕೋಟಿ ರೂ ಆದಾಯ ಅಬಕಾರಿ ಇಲಾಖೆ ಗಳಿಸಿದೆ. ಇದುವರೆಗೂ ಒಂದೇ ರಾತ್ರಿಯಲ್ಲಿ ಈ ಪ್ರಮಾಣದ ಬಿಯರ್‌ ಮಾರಾಟವಾಗಿರಲಿಲ್ಲ ಎನ್ನುವುದನ್ನು ವ್ಯಾಪಾರಿಗಳು ಖಚಿತಪಡಿಸಿದ್ದಾರೆ.