ಆರ್‌ಸಿಬಿ ಅಭಿಮಾನಿ ಮೈ ಮರೆತು ಸಂಭ್ರಮಿಸುವಾಗಲೇ ಹೃದಯಾಘಾತ
ಜಿಲ್ಲಾ ಸುದ್ದಿ


ಮೊದಲ ಬಾರಿಗೆ ಐಪಿಎಲ್ 18ನೇ ಆವೃತ್ತಿಯ ಚಾಂಪಿಯನ್ಸ್ ಆಗಿ ಆರ್ಸಿಬಿ ಹೊರಹೊಮ್ಮಿದ್ದು, ಆರ್ಸಿಬಿ ಫ್ಯಾನ್ಸ್ ಸಂಭ್ರಮ ಮುಗಿಲು ಮುಟ್ಟಿದೆ. ಇದೀಗ ಈ ಸಂಭ್ರಮಾಚರಣೆ ನಡುವೆಯೇ ಬೆಳಗಾವಿಯಲ್ಲಿ ಭಾರೀ ದುರಂತವೊಂದು ಸಂಭವಿಸಿದೆ. ಬೆಳಗಾವಿಯಲ್ಲಿ ಸಂಭ್ರಮಾಚರಣೆಯ ವೇಳೆ ಆರ್ಸಿಬಿಯ ಕಟ್ಟಾ ಅಭಿಮಾನಿ ಡ್ಯಾನ್ಸ್ ಮಾಡುತ್ತಲೇ, ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.
ಮಂಜುನಾಥ್ ಕುಂಬಾರ್ (25) ಹೃದಯಾಘಾತದಿಂದ ಸಾವನ್ನಪ್ಪಿದ ಯುವಕನಾಗಿದ್ದಾನೆ. ಮಂಗಳವಾರ ಅಹಮದಾಬಾದ್ನಲ್ಲಿ ಐಪಿಎಲ್ ಫೈನಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವು ಸಾಧಿಸಿದ ಹಿನ್ನೆಲೆ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಈ ವೇಳೆ ಹಾಡು ಹಾಕಿ ಕುಣಿಯುತ್ತಿದ್ದಾಗ ಮಂಜುನಾಥ್ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಮಾರ್ಗ ಮಧ್ಯೆ ಮಂಜುನಾಥ್ ಸಾವನ್ನಪ್ಪಿದ್ದಾರೆ.
ಮಂಜುನಾಥ್ಗೆ ಕ್ರಿಕೆಟ್ ಎಂದರೆ ಅಭಿಮಾನ. ಆರ್ಸಿಬಿ ತಂಡವೆಂದರೆ ಹುಚ್ಚು ಅಭಿಮಾನ. ಫೈನಲ್ ಪಂದ್ಯ ವೀಕ್ಷಣೆಗೆ ಮಂಗಳವಾರ ಬೃಹತ್ ಎಲ್ಇಡಿ ಪರದೆಯ ವ್ಯವಸ್ಥೆಯನ್ನು ಅವರೇ ಮಾಡಿದ್ದರು. ಇದಕ್ಕಾಗಿ ನಾಲ್ಕು ದಿನಗಳಿಂದ ಊಟ, ನಿದ್ದೆ ಬಿಟ್ಟು ಓಡಾಡಿದ್ದರು. ಪಟಾಕಿ, ಗುಲಾಲು ಎಲ್ಲವನ್ನು ಖರೀದಿಸಿ ತಂದಿದ್ದರು.
ಗ್ರಾಮದಲ್ಲಿ 'ಅವರಾದಿ ವಾರಿಯರ್ಸ್' ಎಂಬ ತಂಡ ಕಟ್ಟಿಕೊಂಡು ಟೂರ್ನಿಗಳಲ್ಲಿ ಭಾಗವಹಿಸುತ್ತಿದ್ದರು. ನೆಚ್ಚಿನ ತಂಡ ಕಪ್ ಗೆದ್ದಿದ್ದನ್ನು ಕಂಡು ಯುವಕರು ಹುಚ್ಚೆದ್ದು ಕುಣಿದಾಡಿದರು. ಮಂಜುನಾಥ ಕೂಡ ಮೈ ಮರೆತು ಸಂಭ್ರಮಿಸುವಾಗಲೇ ಹೃದಯ ಸ್ತಂಭನವಾಗಿದೆ.v