ಎಸಿ ರೈಲು ಬೋಗಿಗಳಲ್ಲಿ ಶ್ರೀಮಂತರನ್ನೇ ಟಾರ್ಗೆಟ್ ಮಾಡಿ ಕಳ್ಳತನ: 7 ವರ್ಷಗಳ ಬಳಿಕ ಅಂತಾರಾಜ್ಯ ಕಳ್ಳನ ಬಂಧನ.
ಕ್ರೈಮ್ಜಿಲ್ಲಾ ಸುದ್ದಿ


ಹಾಸನ: ರೈಲುಗಳ ಎಸಿ ಬೋಗಿಗಳಲ್ಲಿ ಪ್ರಯಾಣಿಕರ ಚಿನ್ನಾಭರಣ, ನಗದು ಕಳವು ಮಾಡುತ್ತಿದ್ದ ಖತರ್ನಾಕ್ ಅಂತಾರಾಜ್ಯ ಕಳ್ಳನನ್ನು ಬಂಧಿಸಿರುವ ಅರಸೀಕೆರೆ ರೈಲ್ವೆ ಪೊಲೀಸರು, ಆರೋಪಿಯಿಂದ 22.75 ಲಕ್ಷ ಮೌಲ್ಯದ 218 ಗ್ರಾಂ. ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ಉತ್ತರಾಖಂಡದ ನೈನಿತಾಲ್ ಜಿಲ್ಲೆಯ ಜಿತೇಂದ್ರಕುಮಾರ ಚಾವ್ಲಾ (37) ಬಂಧಿತ ಆರೋಪಿ. ಈತನ ಮೇಲೆ ಮಹಾರಾಷ್ಟ್ರ, ತಮಿಳುನಾಡು ಹಾಗೂ ಉತ್ತರಾಖಂಡ ರೈಲ್ವೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಸುಮಾರು 13 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಆರೋಪಿಯು ಪೊಲೀಸ್ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ. ಎಸಿ ಕೋಚ್‌ಗಳಲ್ಲಿ ಪ್ರಯಾಣ ಮಾಡುತ್ತಿದ್ದ ಆರೋಪಿ ಶ್ರೀಮಂತ ವ್ಯಕ್ತಿಗಳನ್ನೇ ಟಾರ್ಗೆಟ್ ಮಾಡಿ ಕಳವು ಮಾಡುತ್ತಿದ್ದ ಎಂದು ರೈಲ್ವೆ ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.
7 ವರ್ಷಗಳ ಬಳಿಕ ಸೆರೆಸಿಕ್ಕ ಖದೀಮ: ಹಾಸನ ಜಿಲ್ಲೆಯ ಅರಸೀಕೆರೆಯ ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿ ಅವರ ಚಿನ್ನಾಭರಣ ಕಳ್ಳತನವಾಗಿತ್ತು. ಇದೇ ಆರೋಪಿ ಸ್ವಾಮೀಜಿಯ ಚಿನ್ನಾಭರಣ, ನಗದು ಕಳವು ಮಾಡಿದ್ದ. ಸದ್ಯ ಏಳು ವರ್ಷಗಳ ಬಳಿಕ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
ಆರೋಪಿ 2018ರಲ್ಲಿ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿ ಬಾಗಲಕೋಟೆಯಿಂದ ಅರಸೀಕೆರೆಗೆ ರೈಲಿನ ಎಸಿ ಕೋಚ್‌ನಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಲೆದರ್ ಬ್ಯಾಗ್‌ನಲ್ಲಿ ಚಿನ್ನದ ಆಭರಣ ಹಾಗೂ ನಗದು ಹಣವನ್ನು ಇಟ್ಟು ಸ್ವಾಮೀಜಿ ನಿದ್ದೆಗೆ ಜಾರಿದ್ದರು. ತಡರಾತ್ರಿ ಎಚ್ಚರಗೊಂಡು ನೋಡಿದ ವೇಳೆ ಬ್ಯಾಗ್‌ನಲ್ಲಿದ್ದ ಚಿನ್ನಾಭರಣ, ನಗದು ಕಳ್ಳತನವಾಗಿತ್ತು.
250 ಗ್ರಾಂ ಚಿನ್ನದ ಸರ, 50 ಗ್ರಾಂನ ಎರಡು ಚಿನ್ನದ ಉಂಗುರಗಳು, ಗೌರಿಶಂಕರ ರುದ್ರಾಕ್ಷಿ ಪದಕ ಹಾಗೂ 1.62 ಲಕ್ಷ ನಗದು ಕಳ್ಳತನವಾಗಿತ್ತು. ಈ ಬಗ್ಗೆ ಅರಸೀಕೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಕೋಠಿಮಠದ ಶ್ರೀಗಳು ದೂರು ದಾಖಲಿಸಿದ್ದರು. ತನಿಖೆ ನಡೆಸಿದ್ದ ಪೊಲೀಸರು, ಏಳು ವರ್ಷಗಳ ನಂತರ ಆರೋಪಿ ಜಿತೇಂದ್ರ ಕುಮಾರ್ ಚಾವ್ಲಾನನ್ನು ಬಂಧನ ಮಾಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ, ಕಳೆದ ಫೆಬ್ರುವರಿಯಲ್ಲಿ ಪಂಚಗಂಗಾ ಎಕ್ಸ್ಪ್ರೆಸ್ ರೈಲಿನಲ್ಲಿದ್ದ ಪ್ರಯಾಣಿಕರ ನಗದು ಹಾಗೂ ಚಿನ್ನಾಭರಣ ಸೇರಿ 65 ಸಾವಿರ ಮೌಲ್ಯದ ವಸ್ತುಗಳು ಕಳವಾಗಿದ್ದವು. ರೈಲ್ವೆ ಪೊಲೀಸ್ ಅಧೀಕ್ಷಕಿ ಡಾ. ಸೌಮ್ಯಲತಾ ಎಸ್.ಕೆ. ಮತ್ತು ಡಿವೈಎಸ್ಪಿ ಸತೀಶ್ ಕುಮಾರ್ ನೇತೃತ್ವದಲ್ಲಿ ತನಿಖೆ ಆರಂಭಿಸಿದ ಮೈಸೂರಿನ ರೈಲ್ವೆ ಸಿಪಿಐ ಚೇತನ್ ವಿ., ಅರಸೀಕೆರೆ ಪಿಎಸ್‌ಐ ಮಹೇಶ್ ಸಿ.ಜಿ., ಎಎಸ್ಐಗಳಾದ ಫಯಾಜ್ ಖಾನ್, ನವೀನ್‌ಕುಮಾರ್ ಹಾಗ ಸಿಬ್ಬಂದಿ, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿತ ನೀಡಿದ ಮಾಹಿತಿ ಮೇರೆಗೆ ಆತನಿಂದ 18.20 ಲಕ್ಷ ಮೌಲ್ಯದ 200 ಗ್ರಾಂ ಚಿನ್ನದ ಗಟ್ಟಿ, 40 ಸಾವಿರ ಮೌಲ್ಯದ 6 ಗ್ರಾಂ ಚಿನ್ನದ ಕಿವಿ ಓಲೆ, 65 ಸಾವಿರ ಮೌಲ್ಯದ 15 ಗ್ರಾಂ. ತೂಕದ ಚಿನ್ನದ ಗಟ್ಟಿ ಹಾಗೂ 2 ಲಕ್ಷ ಮೌಲ್ಯದ 40 ಗ್ರಾಂ ಚಿನ್ನದ ಗಟ್ಟಿ, 15 ಸಾವಿರ ಮೌಲ್ಯದ 20 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಸೇರಿ ಒಟ್ಟು 281 ಗ್ರಾಂ ತೂಕದ 22,75,000 ರೂ. ಚಿನ್ನದ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.