ರೌಡಿ ಶೀಟರ್ ಮರ್ಡರ್ ಕೇಸ್: ನಾನೊಬ್ಬ ಪ್ರಾಮಾಣಿಕ ರಾಜಕಾರಣಿ,ನನ್ನ ವಿರುದ್ಧದ ಆರೋಪ ದುರುದ್ದೇಶಪೂರಿತ: ಬೈರತಿ ಬಸವರಾಜ್.
ಸ್ಥಳೀಯ ಸುದ್ದಿಕ್ರೈಮ್


ಬೆಂಗಳೂರು: ರೌಡಿಶೀಟರ್ ಶಿವಪ್ರಕಾಶ್ ಆಲಿಯಾಸ್ ಬಿಕ್ಲು ಶಿವ ಹತ್ಯೆ ಆರೋಪ ಪ್ರಕರಣದ ಐದನೇ ಆರೋಪಿಯಾಗಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರು ಎರಡನೇ ಬಾರಿಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದರು.
ಪ್ರಕರಣದ ತನಿಖಾಧಿಕಾರಿ ಪ್ರಕಾಶ್ ರಾಥೋಡ್ ಅವರ ಮುಂದೆ ಶಾಸಕರು ಹಾಜರಾಗಿ ಸುಮಾರು 3 ಗಂಟೆಗಳ ಕಾಲ ವಿಚಾರಣೆ ಎದುರಿಸಿದರು. ಮತ್ತೊಂದೆಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೋರ್ವ ಆರೋಪಿಯನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ನೆರವು ನೀಡಿದ ಆರೋಪದಡಿ ಆಟೋ ಚಾಲಕ ಶಿವು ಎಂಬಾತನನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ. ಪ್ರಕರಣದಲ್ಲಿ ಇದುವರೆಗೂ ಪ್ರಕರಣದಲ್ಲಿ ಒಟ್ಟು 12 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿಚಾರಣೆ ಮುಗಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಬೈರತಿ ಬಸವರಾಜ್, ತನಿಖಾಧಿಕಾರಿಗಳ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಮತ್ತೊಮ್ಮೆ ವಿಚಾರಣೆಗೆ ಬರುವಂತೆ ದಿನಾಂಕ ನಿಗದಿಪಡಿಸದೆ ನೋಟಿಸ್ ಜಾರಿ ಮಾಡಿದ್ದಾರೆ. ವಿಚಾರಣೆ ಹಾಜರಾಗಿ ತನಿಖೆಗೆ ಸಹಕರಿಸುತ್ತೇನೆ ಎಂದರು.
ತನಿಖಾಧಿಕಾರಿಗಳ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ. ಮತ್ತೊಮ್ಮೆ ವಿಚಾರಣೆಗೆ ಬರುವಂತೆಯೂ ಸೂಚಿಸಿದ್ದಾರೆ. ಆಗಲೂ ವಿಚಾರಣೆಗೆ ಹಾಜರಾಗಿ ತನಿಖೆಗೆ ಸಹಕರಿಸುತ್ತೇನೆ' ಎಂದು . ಪ್ರತಿಕ್ರಿಯಿಸಿದರು.
ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ಯಾರು ಎಂಬುದೇ ಗೊತ್ತಿಲ್ಲ. ಸಾಕಷ್ಟು ಜನರು ಬಂದು ನನ್ನ ಜತೆಗೆ ಫೋಟೊ ತೆಗೆಸಿಕೊಳ್ಳುತ್ತಾರೆ. ಕೊಲೆಯಾದ ಶಿವಪ್ರಕಾಶ್ ಆಗಲಿ ಜಮೀನು ವಿಚಾರಗಳಾಗಲಿ ನನಗೆ ಗೊತ್ತಿಲ್ಲ. ನಾನೊಬ್ಬ ಪ್ರಾಮಾಣಿಕ ರಾಜಕಾರಣಿ. ನನ್ನ ಮೇಲಿನ ಆರೋಪಗಳು ರಾಜಕೀಯ ಪ್ರೇರಿತವಾಗಿವೆ. ದುರುದ್ದೇಶಪೂರ್ವಕವಾಗಿ ನನ್ನನ್ನು ಸಿಲುಕಿಸುವ ಯತ್ನ ಮಾಡಿದ್ದಾರೆ ಎಂದು ಹೇಳಿದರು.
ನನ್ನಿಂದಲೇ ಬಿ ಫಾರ್ಮ್ ಪಡೆದವರು ಇಂದು ನನ್ನ ವಿರುದ್ಧವೇ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ವಿರುದ್ಧ ಯಾವುದೇ ಸಂಚು ಅಥವಾ ಷಡ್ಯಂತ್ರ ರೂಪಿಸಿದರೂ ಎಲ್ಲವನ್ನೂ ಎದುರಿಸುವ ಶಕ್ತಿ ಈ ಬೈರತಿ ಬಸವರಾಜ ಗೆ ಇದೆ. ಹೀಗಾಗಿ ಪೊಲೀಸರು ನೋಟೀಸ್ ಕೊಟ್ಟಾಗ ನಾನು ವಿಚಾರಣೆಗೆ ಹಾಜರಾಗಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.ಈ ಮುನ್ನ ಇದೇ ತಿಂಗಳ 21 ರಂದು ಬೈರತಿ ಬಸವರಾಜ್ ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೊದಲ ವಿಚಾರಣೆಗೆ ಹಾಜರಾಗಿದ್ದರು.