ಕೆ.ಆರ್ ಪುರದಲ್ಲಿ ಪುಡಿ ರೌಡಿಗಳ ಅಟ್ಟಹಾಸ; ಜಗಳ ಬಿಡಿಸಲು ಹೋದವನ ಮೇಲೆಯೇ ಮಾರಕಾಸ್ತ್ರಗಳಿಂದ ಅಟ್ಯಾಕ್

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

2/4/20261 min read

ಕೆ.ಆರ್.ಪುರ : ನಗರದಲ್ಲಿ ಪುಡಿ ರೌಡಿಗಳ ಅಟ್ಟಹಾಸ ದಿನೇದಿನೇ ಹೆಚ್ಚಾಗುತ್ತಿದ್ದು, ಜಗಳವನ್ನು ತಡೆಯಲು ಹೋದ ಆಟೋ ಚಾಲಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಭೀಕರ ಘಟನೆ ಕೆಆರ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಘಟನೆ ಸಾರ್ವಜನಿಕರಲ್ಲಿ ಭೀತಿಗೆ ಕಾರಣವಾಗಿದೆ.

ಕೆಆರ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯ ದೇವಸಂದ್ರ ಸಮೀಪದ ಮದೀನಾ ಮಸೀದಿ ರಸ್ತೆಯಲ್ಲಿ ಫೆಬ್ರವರಿ 1ರ ರಾತ್ರಿ ಸುಮಾರು 8.15ರ ವೇಳೆಗೆ ಈ ಘಟನೆ ನಡೆದಿದೆ.

ಆಟೋ ಚಾಲಕ ರೋಷನ್ ತನ್ನ ಗೆಳೆಯ ಶೋಯಬ್ ಜೊತೆ ರಸ್ತೆಯಲ್ಲಿ ಮಾತನಾಡುತ್ತಿದ್ದ ವೇಳೆ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ. ಜಗಳವನ್ನು ತಡೆಯಲು ಮುಂದಾದ ರೋಷನ್ ಮೇಲೆ ಪುಂಡರ ಗುಂಪು ಏಕಾಏಕಿ ಚಾಕುವಿನಿಂದ ದಾಳಿ ನಡೆಸಿದೆ.

ವಾಸಿಂ, ಯಾಸಿಫ್, ಖಲೀಮ್ ಸೇರಿದಂತೆ ಇನ್ನೊಬ್ಬ ವ್ಯಕ್ತಿ ಸೇರಿ ರೋಷನ್ ಅವರ ಕುತ್ತಿಗೆಗೆ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾರೆ ಎನ್ನಲಾಗಿದೆ. ರಕ್ತಸ್ರಾವದಿಂದ ರೋಷನ್‌ ರಸ್ತೆಯಲ್ಲೇ ಕುಸಿದುಬಿದ್ದಿದ್ದಾನೆ. ಘಟನೆ ನಡೆದ ಜಾಗದಲ್ಲಿ ಸ್ಥಳೀಯರು ಜಮಾಯಿಸತೊಡಗಿದಾಗ ದಾಳಿ ನಡೆಸಿದ ಪುಂಡರ ಗ್ಯಾಂಗ್ ಸ್ಥಳದಿಂದ ಪರಾರಿಯಾಗಿದೆ.

ಗಂಭೀರ ಸ್ಥಿತಿಯಲ್ಲಿದ್ದ ಆಟೋ ಚಾಲಕ ರೋಷನ್ ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಸಂಪೂರ್ಣ ದೃಶ್ಯಾವಳಿ ಸಮೀಪದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅದರ ಆಧಾರದ ಮೇಲೆ ತನಿಖೆ ಮುಂದುವರಿದಿದೆ.

ಈ ಸಂಬಂಧ ಕೆಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ. ನಗರದಲ್ಲಿ ಹೆಚ್ಚುತ್ತಿರುವ ಇಂತಹ ಪುಂಡಾಟದ ಘಟನೆಗಳು ಸಾರ್ವಜನಿಕರಲ್ಲಿ ಭಯ ಹುಟ್ಟಿಸುವಂತಾಗಿವೆ.