ಸರ್ಕಾರಿ ಶಾಲೆ ಸ್ವತ್ತು ಹೊತ್ತೊಯ್ದ ಗುತ್ತಿಗೆದಾರ: ಕುಕ್ಕಲಹಳ್ಳಿ ಗ್ರಾಮಸ್ಥರ ಆರೋಪ

ಸ್ಥಳೀಯ ಸುದ್ದಿ

1/21/20261 min read

ದೊಡ್ಡಬಳ್ಳಾಪುರ: ತಾಲ್ಲೂಕಿನ ಸರ್ಕಾರಿ ಶಾಲೆಗೆ ಸೇರಿದ ಕಲ್ಲು ಚಪ್ಪಡಿಗಳನ್ನು ಗುತ್ತಿಗೆದಾರರೊಬ್ಬರು ಯಾವುದೇ ಮಾಹಿತಿ ನೀಡದೆ ತೆಗೆದುಕೊಂಡು ಹೋಗಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸಾಸಲು ಹೋಬಳಿ ಕುಕ್ಕಲಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಸೇರಿದ ಚಪ್ಪಡಿ ಕಲ್ಲುಗಳನ್ನು ಗುತ್ತಿಗೆದಾರರು ತೆಗೆದುಕೊಂಡು ಹೋಗಿ ತಮ್ಮ ಸ್ವಂತ ಕೆಲಸಗಳಿಗೆ ಬಳಸಿಕೊಂಡಿದ್ದಾರೆ. ಸದ್ಯ ಸರ್ಕಾರಿ ಶಾಲೆಯ ಸುತ್ತ ನರೇಗ ಯೋಜನೆಯಡಿ ಕಾಂಪೌಂಡ್ ನಿರ್ಮಾಣ ಮಾಡಲಾಗುತ್ತಿದೆ. ಹೀಗಾಗಿ ಹಳೆಯ ಚಪ್ಪಡಿಕಲ್ಲುಗಳನ್ನು ತೆರವುಗೊಳಿಸಿ ಒಂದೆಡೆ ಶೇಖರಿಸಿಡಲಾಗಿತ್ತು. ಈ ನಡುವೆ ಗುತ್ತಿಗೆದಾರರೊಬ್ಬರು ಶಾಲೆಗೆ ಸೇರಿದ ಸ್ವತ್ತನ್ನು ಶಾಲಾ ಕಮಿಟಿ ಯವರನ್ನಾಗಲಿ, ಶಾಲಾ ಮುಖ್ಯಶಿಕ್ಷಕರನ್ನಾಗಲಿ ಅಥವಾ ಯಾವೊಬ್ಬ ಗ್ರಾಮಸ್ಥರನ್ನಾಗಲಿ ಕೇಳದೆ ತೆಗೆದುಕೊಂಡು ಹೋಗಿದ್ದು ಇದುವರೆಗೆ ಹಿಂತಿರುಗಿಸಿರುವುದಿಲ್ಲ ಎಂದು ಗ್ರಾಮಸ್ಥರಾದ ಪ್ರಕಾಶ್ ಮತ್ತಿತರರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಈ ವಿಚಾರವಾಗಿ ಹಲವು ಬಾರಿ ಕೇಳಿದ್ದರು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ, ಮತ್ತು ಈ ಸಂಬಂಧ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಮತ್ತು ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳಿಗೂ ಪತ್ರ ಸಹ ಬರೆಯಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಈ ಕೂಡಲೆ ಸರ್ಕಾರಿ ಶಾಲೆ ಸ್ವತ್ತನ್ನು ಹಿಂತಿರುಗಿಸಬೇಕು ಮತ್ತು ಅವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಹ ಮಾಧ್ಯಮಗಳ ಮೂಲಕ ಅಧಿಕಾರಿಗಳನ್ನು ಕೇಳಿಕೊಂಡಿದ್ದಾರೆ.