ಕಾಂಗ್ರೆಸ್ ನ‌ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಇನ್ನಿಲ್ಲ

ಸ್ಥಳೀಯ ಸುದ್ದಿಜಿಲ್ಲಾ ಸುದ್ದಿ

ಧರ್ಮ ಬಸವನಪುರ.

12/14/20251 min read

ಬೆಂಗಳೂರು: ದೇಶದ ಅತಿ ಹಿರಿಯ ಶಾಸಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ವಯೋಸಹಜ ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. ಇವರಿಗೆ 95 ವರ್ಷ ವಯಸ್ಸಾಗಿತ್ತು.

ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆಯನ್ನು ನಾಳೆ ಲಿಂಗಾಯತ ಸಂಪ್ರದಾಯದಂತೆ ದಾವಣಗೆರೆಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ನಿರ್ಧರಿಸಲಾಗಿದೆ.

ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದರು. ಬೆಂಗಳೂರಿನ ಸ್ಪರ್ಶ ಆಸ್ಪತ್ರೆಗೆ ದಾಖಲಿಸಿ, ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಶಾಮನೂರು ಶಿವಶಂಕರಪ್ಪ ನಿಧನರಾಗಿದ್ದಾರೆ. ಅವರ ನಿಧನದ ಬಗ್ಗೆ ಆಸ್ಪತ್ರೆಯಿಂದ ಅಧಿಕೃತ ಮಾಹಿತಿ ಹೊರಬಿದ್ದಿದೆ.

ಶಾಮನೂರು ಶಿವಶಂಕರಪ್ಪನವರಿಗೆ ಒಟ್ಟು 7 ಜನ ಮಕ್ಕಳು. ಅವರ ಪುತ್ರ, ಸಚಿವ ಎಸ್‌ಎಸ್ ಮಲ್ಲಿಕಾರ್ಜುನ ಬೆಳಗ್ಗೆ ತಿರುಪತಿಗೆ ತೆರಳಿದ್ದು, ಇದೀಗ ತಂದೆ ನಿಧನದ ಸುದ್ದಿ ತಿಳಿದು ವಾಪಸ್ ಆಗುತ್ತಿದ್ದಾರೆ. ಇನ್ನು ಮತ್ತೊಬ್ಬ ಮಗ ಎಸ್‌ಎಸ್ ಗಣೇಶ್ ಅಸ್ಸಾಂ ದೇವಾಲಯಕ್ಕೆ ಹೋಗಿದ್ದು, ಕುಟುಂಬಸ್ಥರಿಂದ ಮಾಹಿತಿ ರವಾನೆಯಾಗಿದೆ. ಅತ್ತ ಇಬ್ಬರು ಹೆಣ್ಣುಮಕ್ಕಳು ವಿದೇಶದಲ್ಲಿದ್ದು, ಕುಟಂಬದಿಂದ ಮಾಹಿತಿ ನೀಡಲಾಗಿದೆ. ಇನ್ನು ನಾಳೆ ಅವರ ಅಂತ್ಯಸಂಸ್ಕಾರ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

ಶಾಮನೂರು ಕಲ್ಲಪ್ಪ ಹಾಗೂ ಸಾವಿತ್ರಮ್ಮ ದಂಪತಿಯ ಪುತ್ರರಾಗಿದ್ದ ಶಾಮನೂರು ಶಿವಶಂಕರಪ್ಪ, 1931ರ ಜೂನ್ 16ರಂದು ಜನಿಸಿದ್ದರು. 94 ವರ್ಷ ಕಳೆದರೂ ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ, ಹಾಲಿ ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದರು.

ಓರ್ವ ಪುತ್ರ ಎಸ್.ಎಸ್‌. ಮಲ್ಲಿಕಾರ್ಜುನ್ ಸಚಿವರಾಗಿದ್ದರೆ, ಸೊಸೆ ಪ್ರಭಾ ಮಲ್ಲಿಕಾರ್ಜುನ್ ಹಾಲಿ ದಾವಣಗೆರೆ ಸಂಸದೆಯಾಗಿದ್ದಾರೆ. ಮತ್ತೋರ್ವ ಪುತ್ರ ಎಸ್‌ಎಸ್ ಬಕ್ಕೇಶ್ ಹಾಗೂ ಎಸ್ ಎಸ್ ಗಣೇಶ್ ಕೈಗಾರಿಕೋದ್ಯಮಿಯಾಗಿದ್ದಾರೆ. ಪುತ್ರಿಯರಾದ ಡಾ. ಮಂಜುಳಾ ಶಿವಶಂಕರ್, ಸುಧಾ ರಾಜೇಂದ್ರ ಪಾಟೀಲ್, ಡಾ. ಶೈಲಜಾ ಭಟ್ಟಾಚಾರ್ಯ, ಮೀನಾ ಡಾ. ಶರಣ ಪಾಟೀಲ್‌ ಇವರನ್ನೆಲ್ಲಾ ಶಾಮನೂರು ಅಗಲಿದ್ದಾರೆ. ‌