ShriRama Shobhayatre: ಜಗದ್ಗುರು ಸೂರ್ಯಾಚಾರ್ಯ ಕೃಷ್ಣದೇವೂನಂದ ಗಿರಿಜೀ ಸಾನಿಧ್ಯದಲ್ಲಿ ಶ್ರೀ ರಾಮರ ಬೃಹತ್ ಶೋಭಾಯಾತ್ರೆ
ಸ್ಥಳೀಯ ಸುದ್ದಿ


ಮಹದೇವಪುರ: ಶ್ರೀ ರಾಮನವಮಿ ಪ್ರಯುಕ್ತ ಮಹದೇವಪುರ ಕ್ಷೇತ್ರದ ಬಿಜೆಪಿ ವತಿಯಿಂದ ದ್ವಾರಕಾ ಪೀಠದ ಗುರುಗಳಾದ ಶ್ರೀ ಜಗದ್ಗುರು ಸೂರ್ಯಾಚಾರ್ಯ ಕೃಷ್ಣದೇವೂನಂದ ಗಿರಿಜೀ ದಿವ್ಯ ಸಾನಿಧ್ಯದಲ್ಲಿ ಹಮ್ಮಿಕೊಂಡಿದ ಶ್ರೀ ರಾಮರ ಯಾತ್ರೆಯು ಅದ್ದೂರಿಯಾಗಿ ಜರುಗಿತು.
ಕ್ಷೇತ್ರದ ಸಾವಿರಾರು ಬಿಜೆಪಿ ಕಾರ್ಯಕರ್ತರ ಸಮ್ಮುಖದಲ್ಲಿ ಮಂಗಳ ವಾದ್ಯಗಳೊಂದಿಗೆ ಕೆಂಪೇಗೌಡ ವೃತ್ತಕ್ಕೆ ಆಗಮಿಸಿದ ಗುರುಗಳು ನಾಡಪ್ರಭು ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಬೆಮಲ್ ಸರ್ಕಲ್ ನಿಂದ ಪ್ರಾರಂಭವಾದ ಶ್ರೀ ರಾಮರ ಯಾತ್ರೆಯು ಸಾವಿರಾರು ಶ್ರೀ ರಾಮ ಭಕ್ತರು ಹಾಗೂ ಬಿಜೆಪಿ ಕಾರ್ಯಕರ್ತರು ಸುಮಾರು 11 ಕಿ.ಮೀ ಬೈಕ್ ರ್ಯಾಲಿ ಮೂಲಕ HAL ಮುಖ್ಯ ರಸ್ತೆ ಹಾಗೂ ಹೊರ ವರ್ತುಲ ರಸ್ತೆಯ ಮೂಲಕ ದೊಡ್ಡ ನಕ್ಕುಂದಿಯ ಕೋದಂಡರಾಮ ದೇವಸ್ಥಾನಕ್ಕೆ ಬಂದರು. ಶ್ರೀ ರಾಮರ ರಥ ಯಾತ್ರೆಯಲ್ಲಿ ಡೊಳ್ಳು ಕುಣಿತ, ಗೊಂಬೆ ಕುಣಿತ, ಕಂಸಾಳೆ ನೃತ್ಯ, ಜನಪದ ಕಲಾ ತಂಡ ಹಾಗೂ ತಮಟೆ ವಾದ್ಯ ಮೇಳದೊಂದಿಗೆ ಮೆರವಣಿಗೆ ನಡೆಯಿತು.
ಬಳಿಕ ಕೋದಂಡರಾಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ,ಶ್ರೀ ಜಗದ್ಗುರು ಸೂರ್ಯಾಚಾರ್ಯ ಸ್ವಾಮಿಗಳು ಭಕ್ತರಿಗೆ ಪ್ರವಚನ ನೀಡಿದರು. ಸುಮಂಗಳಿಯರು ಕಳಸ ಹೊತ್ತು ಯಾತ್ರೆಗೆ ಮೆರುಗು ನೀಡಿದರು. ರಸ್ತೆ ಉದ್ದಕ್ಕೂ ಹೂಗಳ ಸುರಿ ಮಳೆಯನ್ನೆ ಸುರಿದರು.ಶ್ರೀ ರಾಮರ ಯಾತ್ರೆ ಮೂಲಕ ಲಕ್ಷಾಂತರ ಜನರು ಸ್ವಾಮಿಜೀಯ ದರ್ಶನ ಮಾಡಿದರು.
ಹಿಂದೂ ಸನಾತನ ಧರ್ಮ ಶ್ರೇಷ್ಠ ಧರ್ಮ ಅರವಿಂದ ಲಿಂಬಾವಳಿ ಅವರ ದಂಪತಿಗಳ ಅಧ್ಯಕ್ಷತೆಯಲ್ಲಿ ಶ್ರೀರಾಮರ ಕಾರ್ಯ ನಡೆಯುತ್ತಿರುವುದು ಸಂತಸ ತಂದಿದೆ ಎಂದು ಸೂರ್ಯಾಚಾರ್ಯ ಕೃಷ್ಣದೇವೋನಂದ ಗಿರಿಜೀ ಮಹಾರಾಜ್ ಆಶೀರ್ವದಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸಿ.ವಿ ರಾಮನ್ ನಗರ ಕ್ಷೇತ್ರದ ಶಾಸಕ ರಘು, ಮಹದೇವಪುರ ಕ್ಷೇತ್ರದ ಅಧ್ಯಕ್ಷರಾದ ಹೂಡಿ ಪಿಳ್ಳಪ್ಪ, ಶ್ರೀಧರ್ ರೆಡ್ಡಿ, ಮುಖಂಡರಾದ ಎಲ್.ರಾಜೇಶ್, ಸುರೇಶ್, ಲೋಕೇಶ್, ನವೀನ್ ಸೇರಿದಂತೆ ಸಾವಿರಾರು ಮಂದಿ ಭಕ್ತರು ಭಾಗವಹಿಸಿದ್ದರು.

