ಸಿದ್ಧರಾಮೇಶ್ವರರ ಜೀವನ-ಸಾಧನೆಗಳು ಸಮಾಜಕ್ಕೆ ಪ್ರೇರಣೆ

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

1/14/20261 min read

ಕೆ.ಆರ್.ಪುರ: ಶಿವಯೋಗಿ ಶ್ರೀ ಸಿದ್ಧರಾಮೇಶ್ವರರ ಜೀವನ ಮತ್ತು ಸಾಧನೆಗಳು ಸಮಾಜದ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿವೆ. ಧರ್ಮ, ಸೇವೆ ಮತ್ತು ಶ್ರದ್ಧೆಯ ಮೌಲ್ಯಗಳನ್ನು ಅವರು ತಮ್ಮ ಬದುಕಿನ ಮೂಲಕ ಸಮಾಜಕ್ಕೆ ತಿಳಿಸಿಕೊಟ್ಟ ಮಹಾನ್ ಶರಣರು ಎಂದು ಮಾಜಿ ನಗರಸಭಾ ಸದಸ್ಯ ಬಾಲಕೃಷ್ಣ ಅವರು ತಿಳಿಸಿದರು.

ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಬೆಂಗಳೂರು ಪೂರ್ವ ತಾಲ್ಲೂಕಿನ ಕಚೇರಿಯಲ್ಲಿ ಏರ್ಪಡಿಸಿದ್ದ 853ನೇ ಸಿದ್ದರಾಮೇಶ್ವರ ಜಯಂತಿ ಹಿನ್ನೆಲೆಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

12ನೇ ಶತಮಾನದಲ್ಲೇ ನೂರಾರು ಕೆರೆ ಕಟ್ಟೆಗಳನ್ನು ನಿರ್ಮಿಸುವ ಮೂಲಕ ನೀರಾವರಿ ಕ್ರಾಂತಿಗೆ ನಾಂದಿ ಹಾಡಿದವರು. ಕುಡಿಯುವ ನೀರಿನ ಯೋಜನೆಗಳಿಗೆ ಸಿದ್ದರಾಮೇಶ್ವರರು ಪ್ರೇರಕ ಶಕ್ತಿ. ನೇರ ಮತ್ತು ನಿಷ್ಠುರ ನುಡಿಯ ದಾರ್ಶನಿಕರಾಗಿದ್ದರು ಎಂದು ತಿಳಿಸಿದರು

ಈ ಸಂದರ್ಭದಲ್ಲಿ ಮಾತನಾಡಿದ ವಿಶೇಷ ತಹಶಿಲ್ದಾರ್ ನರಸಿಂಹಮೂರ್ತಿ ಅವರು ಮಹಾನ್ ಪುರುಷರ, ದಾರ್ಶನಿಕರ ಜಯಂತಿ ಆತ್ಮಾವಲೋಕನಕ್ಕೆ ವೇದಿಕೆಯಾಗಿದೆ. ಅವರ ಜೀವನ ಚರಿತ್ರೆ, ಮೌಲ್ಯಗಳು, ತತ್ವಗಳನ್ನು ಅರಿತು ಅವುಗಳನ್ನು ಅಳವಡಿಸಿಕೊಂಡು ಅವರ ದಾರಿಯಲ್ಲಿ ನಡೆಯುವ ಪ್ರಯತ್ನಗಳಾಗಬೇಕೇ ವಿನಃ ಕೇವಲ ಸಭೆ ಸಭಾರಂಭಗಳಿಗೆ ಸೀಮಿತವಾಗಬಾರದು. ದೊಡ್ಡ ಕಟ್ಟಡಗಳು, ಅರಮನೆ, ಅಣೆಕಟ್ಟು ಕಟ್ಟುವ ಸಂಸ್ಕೃತಿಯ ಪ್ರತೀಕವಾದ ನಮ್ಮ ಸಮಾಜ ಕೀಳರಿಮೆ ಬಿಟ್ಟು ಉನ್ನತ ಸ್ಥಾನದಲ್ಲಿದ್ದೇವೆ ಎಂಬುದನ್ನು ಹೆಮ್ಮೆ ಪಡಬೇಕು. ಸಮಾಜಕ್ಕಾಗಿ ಕೊಡುಗೆಗಳನ್ನು ನೀಡಬೇಕು ಎಂದು ತಿಳಿಸಿದರು.

ಶಿವಯೋಗಿ ಸಿದ್ಧರಾಮ ಅವರನ್ನು ಭೋವಿ ಜನಾಂಗ ತಮ್ಮ ಕುಲಗುರುಗಳಾಗಿ ಸ್ವೀಕರಿಸಿದ್ದಾರೆ. ಅವರು ನಡೆದು ಬಂದ ಹಾದಿಯಲ್ಲಿ ಸಮಾಜದ ಪ್ರತಿಯೊಬ್ಬರೂ ನಡೆಯಬೇಕು. ಶ್ರಮ ಜೀವಿಗಳಿಗೆ ಬೆಲೆಯಿದೆ ಎಂದು ಭೋವಿ ಸಮುದಾಯದವರು ತೋರಿಸಿ ಕೊಟ್ಟಿದ್ದಾರೆ. ಕಾಯಕವೇ ಕೈಲಾಸ ಎಂಬ ನುಡಿಯ ಅಡಿಯಲ್ಲಿ ಭೋವಿ ಸಮುದಾಯದವರು ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.

ಭಕ್ತಿ ಹಾಗೂ ಕಾಯಕ ನಿಷ್ಠೆ ಮೂಲಕ ಸಮಾಜಮುಖಿ ಕಾರ್ಯಗಳನ್ನು ಸಿದ್ಧರಾಮೇಶ್ವರರು ಕೈಗೊಂಡರು. ಸಿದ್ಧರಾಮೇಶ್ವರರು ವಚನಗಳ ಜತೆಗೆ ಕಾಯಕ ಜೀವಿಗಳಾಗಿ ಕಾಯಕವೇ ಕೈಲಾಸ ಎಂಬ ಮಾತಿಗೆ ಕಟಿಬದ್ಧರಾಗಿ ಕಾಯಕಯೋಗಿ ಆಗಿದ್ದರು ಎಂದು ಬಣ್ಣಿಸಿದರು.

ಆಧುನಿಕ ಜಲ ತಜ್ಞರಂತೆ ಕೆರೆಕಟ್ಟೆಗಳನ್ನು ಕಟ್ಟಿದ ಮಹನೀಯ, ಇವರ ಕಾರ್ಯ ಪ್ರಸ್ತುತ ಸಮಾಜಕ್ಕೆ ಪ್ರೇರಣೆಯಾಗಿದೆ ಅವರ ಸಿದ್ದಾಂತಗಳನ್ನು ಅಳವಡಿಸಿಕೊಳ್ಳುವಂತೆ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಭೂವಿ ಬಳಗದ ಅಧ್ಯಕ್ಷ ಲೋಕೇಶ್,ಸುಂದರ್, ಚಂದ್ರು,ಮುನಿರಾಜು,ಜನಾರ್ಧನ್, ಹಾಗೂ ಭೋವಿ ಸಮುದಾಯದವರು ಇದ್ದರು.