ಮಹದೇವಪುರದಲ್ಲಿ ಮತಗಳ್ಳತನದ ವಿರುದ್ಧ ಸಹಿ ಸಂಗ್ರಹ
ಸ್ಥಳೀಯ ಸುದ್ದಿರಾಜಕೀಯ


ಮಹದೇವಪುರ: ಮತಗಳ್ಳತನದ ಮೂಲ ಮಹದೇವಪುರ ಕ್ಷೇತ್ರವಾಗಿದ್ದು,2013 ರಲ್ಲೆ ಮತಗಳ್ಳತನದ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದೆವು ಎಂದು ಶಾಸಕ ಎ.ಸಿ.ಶ್ರೀನಿವಾಸ್ ಅವರು ತಿಳಿಸಿದರು.
ಮಹದೇವಪುರ ಕ್ಷೇತ್ರದ ಕಾಡುಗೋಡಿಯ ಮೆಟ್ರೋ ನಿಲ್ದಾಣದಲ್ಲಿ ಏರ್ಪಡಿಸಿದ್ದ ಮತಕಳ್ಳತನದ ವಿರುದ್ಧ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಕರ್ನಾಟಕದ ಮಹದೇವಪುರ ಕ್ಷೇತ್ರದಲ್ಲಿ ಅಪಾರ ಪ್ರಮಾಣದಲ್ಲಿ ಮತಗಳನ್ನು ಕಾನೂನು ಬಾಹಿರ ಸೇರಿಸಲಾಗಿದೆ. ಇದನ್ನೇ ರಾಹುಲ್ ಗಾಂಧಿ ಅವರು ವಿರೋಧಿಸಿ, ದೇಶದೆಲ್ಲೆಡೆ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ' ಎಂದರು.
'ಈಗಲೂ ಸಹ ನಾವು ನಮ್ಮ ಪಕ್ಷ ಸಹಿ ಸಂಗ್ರಹ ಮೂಲಕ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಮತ್ತು ಚುನಾವಣಾ ಆಯೋಗಕ್ಕೆ ಮನವರಿಕೆ ಮಾಡಲು ಅಭಿಯಾನ ಹಮ್ಮಿಕೊಂಡಿದೆ ಎಂದರು.
ಕಳ್ಳತನದ ಮತಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಬಿಜೆಪಿ ಪಕ್ಷದವರು ಕುತಂತ್ರದಿಂದ ಗೆಲುವಿನ ಹಳಿಗೆ ಸಾಗುತ್ತಾರೆ, ಪ್ರತಿ ಚುನಾವಣೆಯಲ್ಲಿ ಮತಗಳ್ಳತನ ಮೂಲಕ ಮೋಸದಿಂದ ಚುನಾವಣೆಯಲ್ಲಿ ಗೆದ್ದು ಅಕ್ರಮವಾಗಿ ಅಧಿಕಾರಕ್ಕೆ ಬಂದು ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿದರು.
ರಾಜ್ಯದ ಕಾಂಗ್ರೆಸ್ ಸರಕಾರ ಮತ್ತು ಪಕ್ಷವು ನಮ್ಮ ಸಹಿಸಂಗ್ರಹದ ಮೂಲಕ ಕೇಂದ್ರದ ಬಿಜೆಪಿ ಸರಕಾರಕ್ಕೆ ಮತ್ತು ಚುನಾವಣಾ ಆಯೋಗಕ್ಕೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸುತ್ತಿದ್ದೇವೆ.ಇದನ್ನು ಅರ್ಥ ಮಾಡಿಕೊಂಡು ಪಾರದರ್ಶಕವಾಗಿ ಮತದಾರರ ಪಟ್ಟಿ ಸಿದ್ಧಪಡಿಸಬೇಕು.ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದರು.
ನ್ಯಾಯಯುತ ಚುನಾವಣೆ ನಡೆದರೆ ಬಿಜೆಪಿ ಪಕ್ಷ ಒಂದೂ ಚುನಾವಣೆ ಗೆಲ್ಲಲು ಸಾಧ್ಯವಾಗುವುದಿಲ್ಲ, ಲೋಕಸಭಾ, ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮತದಾರರನ್ನು ಹುಡುಕಿ ಹುಡುಕಿ ತೆಗೆದುಹಾಕುವುದು ಮತ್ತು ತಮಗೆ ಬೇಕಾದ ಮತದಾರರನ್ನು ಅಕ್ರಮ ವಾಗಿ ಸೇರಿಸುವ ಮೂಲಕ ಚುನಾವಣೆ ಗೆಲ್ಲುವ ತಂತ್ರಗಾರಿಕೆ ಮಾಡುತ್ತಿರುವುದು ದೇಶದ ಸಂವಿಧಾನಕ್ಕೆ ಮಾಡುವ ಅವಮಾನವಾಗಿದೆ' ಎಂದು ಹೇಳಿದರು.
ದೇಶದಲ್ಲಿ ಅಧಿಕಾರಕ್ಕೆ ಬಂದಿರುವ ಎನ್.ಡಿ.ಎ ನೇತೃತ್ವದ ಸರ್ಕಾರ ಅಧಿಕಾರ ಬಿಟ್ಟು ತೊಲಗಲಿ ಎಂದು ದೇಶಾದ್ಯಂತ ಸಹಿ ಸಂಗ್ರಹ ಅಭಿಯಾನ ನಡೆಸುತ್ತಿದ್ದೇವೆ ಎಂದು ಹೇಳಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಮನ್ಸೂರ್ ಅಲಿಖಾನ್ ಅವರು ಮಾತನಾಡಿ ದೇಶಾದ್ಯಂತ ಬೂತ್ ಮಟ್ಟದಿಂದ ಹಿಡಿದು ರಾಷ್ಟ್ರ ಮಟ್ಟದಲ್ಲಿ ಮತಗಳ್ಳತನ ವಿರೋಧಿಸಿ ಹೋರಾಟ ಮಾಡುತ್ತಿದ್ದೇವೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಇಡೀ ದೇಶದಲ್ಲಿ ಭಾರತ್ ಜೋಡೋ ಮಾದರಿಯಲ್ಲಿ ಮತಗಳ್ಳತನ ಮಾಡುತ್ತಿರುವ ಎನ್.ಡಿ.ಎ. ಸರ್ಕಾರ ಅಧಿಕಾರ ಬಿಟ್ಟು ತೊಲಗಬೇಕು ಎಂದು ಸಂಧರ್ಭದಲ್ಲಿ ಹಮ್ಮಿಕೊಳ್ಳಲಾಗಿದೆ.
ಬಿಜೆಪಿಯವರು ದೇಶದಾದ್ಯಂತ ನಡೆಸಿರುವ ಮತಗಳ್ಳತನ ಬಯಲಾಗಿದೆ. ಆರ್‌ಎಸ್‌ಎಸ್ ಮತ್ತು ಬಜರಂಗದಳದ ಮೂಲಕ ಹಿಂದೂ- ಮುಸ್ಲಿಂ ವಿಭಜನೆ ಮಾಡಿ ಆಳುವ ನೀತಿ ಅನುಸರಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಸೋಲಿಗೆ ಮತಗಳ್ಳತನ ನಡೆದದ್ದೇ ಕಾರಣ' ಎಂದರು.
ಮತಗಳ್ಳತನದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಮುಂಬರುವ ಚುನಾವಣೆಗಳನ್ನು ಮತಪತ್ರದ ಮೂಲಕ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಂದಾಗಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಲಿದೆ ಎಂದರು.
ಮುಂಬರುವ ಚುನಾವಣೆಯಲ್ಲಿ ಎಲ್ಲಾರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಅತಿ ಹೆಚ್ಚು ಅಭ್ಯರ್ಥಿಗಳನ್ನ ಗೆಲ್ಲಿಸುವ ಕೆಲಸ ಮಾಡಬೇಕು ಎಂದರು.
ಈ ಸಂಧರ್ಭದಲ್ಲಿ ಮಾಜಿ ಸಚಿವ ಎಚ್.ನಾಗೇಶ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಲ್ಲೂರಹಳ್ಳಿ ನಾಗೇಶ್ ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಾಂಕ್ ಬಾಬು,ಬೆಂಗಳೂರು ಪೂರ್ವ ಜಿಲ್ಲಾ ಓಬಿಸಿ ಅಧ್ಯಕ್ಷ ಕುಪ್ಪಿಮಂಜುನಾಥ, ಭೂನ್ಯಾಯಮಂಡಳಿ ಸದಸ್ಯ ಬಿ.ವಿ. ವರುಣ್ ,ಗ್ಯಾರಂಟಿ ಅಧ್ಯಕ್ಷರಾದ ಪ್ರಶಾಂತ್,ಕ್ಷೇತ್ರದ ಅಧ್ಯಕ್ಷ ಸುರೇಶ್,ಮುಖಂಡರಾದ ರಮೇಶ್,ಮುರಳಿ,ಕಿಟ್ಟಿಗೋಪಾಲ್,ಪ್ರದೀಪ್,ಮಧು,ಪ್ರಸಾದ್,ದಿನೇಶ್ ಇದ್ದರು.