ಜೀವನದ ಮೌಲ್ಯಗಳನ್ನು ಜಗತ್ತಿಗೆ ಸಾರಿದ ಶ್ರೀಮಹರ್ಷಿ ವಾಲ್ಮೀಕಿ: ಬೈರತಿ ಬಸವರಾಜ

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

10/8/20251 min read

ಕೆ.ಆರ್.ಪುರ: ಮಹಾಕಾವ್ಯ ರಾಮಾಯಣದ ಮೂಲಕ ಜೀವನದ ಮೌಲ್ಯಗಳನ್ನು ಜಗತ್ತಿಗೆ ಸಾರಿದವರು ಮಹಾಕವಿ ಶ್ರೀಮಹರ್ಷಿ ವಾಲ್ಮೀಕಿ ಎಂದು ಶಾಸಕ ಬೈರತಿ ಬಸವರಾಜ ತಿಳಿಸಿದರು.

ಬೆಂಗಳೂರು ಪೂರ್ವ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಾಲ್ಮೀಕಿ ಜಯಂತ್ಯೋತ್ಸ ಕಾರ್ಯಕ್ರಮದಲ್ಲಿ ಶ್ರೀಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚಾನೆ ಸಲ್ಲಿಸಿ ಮಾತನಾಡಿದ ಶಾಸಕರು

ಮಹರ್ಷಿ ವಾಲ್ಮೀಕಿಗಳು ಮಹಾಕಾವ್ಯ ರಾಮಾಯಣವನ್ನು ರಚಿಸುವ ಮೂಲಕ ಮಾನವ ಧರ್ಮಕ್ಕೆ ಕೊಡುಗೆ ನೀಡುವ ಮ‌ೂಲಕ ಪೂಜ್ಯನೀಯರಾಗಿದ್ದಾರೆ. ಸಂಸ್ಕೃತದಲ್ಲಿ ಮೊಟ್ಟ ಮೊದಲಿಗೆ ರಾಮಾಯಣವನ್ನು ರಚಿಸಲಾಯಿತು. ಭಾರತೀಯ ಸಾಹಿತ್ಯ ಕ್ಷೇತ್ರಕ್ಕೆ ಅನನ್ಯವಾದ ಕೊಡುಗೆಯನ್ನು ನೀಡಿರುವ ಆದಿಕವಿ ಮಹರ್ಷಿ ವಾಲ್ಮೀಕಿಯವರನ್ನು ನಾವೆಲ್ಲರೂ ಸದಾಕಾಲವೂ ಸ್ಮರಿಸಿಕೊಳ್ಳಬೇಕು‌ ಎಂದರು.

ರಾಮಾಯಣದಂತ ಮಹಾಕಾವ್ಯದ ಪಾತ್ರಗಳ ಮೂಲಕ ಜವಾಬ್ದಾರಿ ಮತ್ತು ಕರ್ತವ್ಯದ ಮಹತ್ವ ಸಾರಿ ಮುಂದಿನ ಯುವ ಪೀಳಿಗೆಗೆ ಮೌಲ್ಯಯುತ, ನ್ಯಾಯ, ನಿಷ್ಟೆ, ಪ್ರಾಮಾಣಿಕ ಬದುಕಿನ ಮಾರ್ಗವನ್ನು ತೋರಿದ್ದಾರೆ. ಅವರು ತೋರಿದ ಬೆಳಕಿನ ದಾರಿಯಲ್ಲಿ ನಾವೆಲ್ಲ ಸಾಗಬೇಕಾಗಿದೆ ಎಂದರು.

ರಾಮಾಯಣದಲ್ಲಿನ ಶ್ಲೋಕಗಳು, ಖಂಡಗಳು ವಾಲ್ಮೀಕಿಯವರ ಪಾಂಡಿತ್ಯವನ್ನು ತೋರಿಸಿದ್ದು, ಭಾರತದ ಘನತೆ, ಗೌರವವನ್ನು ಹೆಚ್ಚಿಸಿದೆ ಎಂದು ಅವರು ಹೇಳಿದರು.

ಪುತ್ಥಳಿ ನಿರ್ಮಾಣ, ಸಮುದಾಯ ಭವನ ಹಾಗೂ ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕೆ ಜಾಗಕ್ಕೆ ಬೇಡಿಕೆ ಇಡುತ್ತಿದ್ದು ಈ ಬಾರಿಯು ಸಹ ಸಮುದಾಯದ ವತಿಯಿಂದ ಶಾಸಕರ ಹಾಗೂ ತಹಶಿಲ್ದಾರರ ಬಳಿ ಮನವಿ ಸಲ್ಲಿಸಿದರು.

ಮನವಿಗೆ ಪ್ರತಿಕ್ರಿಯೆ ನೀಡಿದ ಶಾಸಕರು ಸರ್ಕಾರದಿಂದ ಯವುದೇ ಸಮುದಾಯಕ್ಕೆ ಸ್ಥಳ ನೀಡುತ್ತಿಲ್ಲ, ಕ್ಷೇತ್ರದಲ್ಲಿ ಯಾವುದೇ ಸರ್ಕಾರಿ ಜಾಗ ಇಲ್ಲ,ನೀವು ಸರ್ಕಾರಕ್ಕೆ ಬಳಿ ಮನವಿ ಮಾಡುವಂತೆ ಸಲಹೆ ನೀಡಿದರು. ಎಲ್ಲೋ ಜಾಗ ಇದೆ ಅಂತ ಪುತ್ಥಳಿ ಸ್ಥಾಪನೆ ಮಾಡಿ ಮುಂದೊಂದು ದಿನ ಅದನ್ನ ತೆರವು ಮಾಡಿದರೆ ನಮಗೂ ಮತ್ತು ಸಮುದಾಯಕ್ಕೂ ಗೌರವ ಇರಲ್ಲ.ಆದರಿಂದ ಸ್ವಂತ ಸ್ಥಳದಲ್ಲಿ ಸಮುದಾಯದ ವತಿಯಿಂದ ಮಹರ್ಷಿ ವಾಲ್ಮೀಕಿ ಅವರ ಪುತ್ಥಳಿ ನಿರ್ಮಾಣಕ್ಕೆ ನಿಗಧಿತ ಸ್ಥಳವನ್ನು ಗುರುತಿಸಿ ನಂತರ ಮುಂದಿನ ದಿನಗಳಲ್ಲಿ ಪುತ್ಥಳಿ ನಿರ್ಮಾಣಕ್ಕೆ ಸಹಕಾರ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ರಾಜೀವ್, ಈಶ್ವರ ಸ್ವಾಮೀಜಿ, ಮಹರ್ಷಿ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿಸಂಘದ ಉಪಾಧ್ಯಕ್ಷ ಕಟ್ಟು ಗೊಲ್ಲಹಳ್ಳಿ ಟಿ.ಶಿವಕುಮಾರ್, ಕೆಪಿಸಿಸಿ ಸದಸ್ಯ ಎಂ.ಮಂಜುನಾಥ್, ಎಂಎಸ್ ಐಎಲ್ ನಾಗರಾಜ್, ಡಿಸೇಲ್ ಮಂಜುನಾಥ, ವಿಜಿನಾಪುರ ಕೃಷ್ಣಮೂರ್ತಿ, ಅಜಯ್ ಇದ್ದರು.