Supreme Court : ರಾಜ್ಯಪಾಲರ ವಿಳಂಬ ನೀತಿಗೆ ಸುಪ್ರಿಂ ಕೋರ್ಟ್​ ಅಂಕುಶ

ದೇಶ/ವಿದೇಶ

ರಾಘವೇಂದ್ರ ಹೆಚ್​​.ಎ

4/9/20251 min read

ನವದೆಹಲಿ: ರಾಜ್ಯ ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳನ್ನು ರಾಜ್ಯಪಾಲರು ತಡೆ ಹಿಡಿಯುವುದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದ್ದು, ರಾಜ್ಯಪಾಲರ ಜತೆ ತಿಕ್ಕಾಟದಲ್ಲಿ ತೊಡಗಿದ್ದ ತಮಿಳುನಾಡು ಸರಕಾರಕ್ಕೆ ಗೆಲುವು ದೊರೆತಿದೆ.

ತಮಿಳುನಾಡು ಸರಕಾರ ಸಲ್ಲಿಸಿದ್ದ 10ಕ್ಕೂ ಹೆಚ್ಚು ಮಸೂದೆಗಳನ್ನು ರಾಜ್ಯಪಾಲ ಆರ್‌.ಎನ್‌. ರವಿ ತಡೆಹಿಡಿದಿದ್ದರು. ಈ ಕ್ರಮವನ್ನು ಪ್ರಶ್ನಿಸಿ ತಮಿಳುನಾಡು ಸರಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ರಾಜ್ಯಪಾಲರು ಅಂಗೀಕೃತ ಮಸೂದೆಗಳಿಗೆ ಅಂಕಿತ ಹಾಕಲು ವಿಳಂಬ ಮಾಡುವಂತಿಲ್ಲ. ಅಲ್ಲದೆ ರಾಜ್ಯಪಾಲ ಆರ್‌.ಎನ್‌. ರವಿ ಅವರು 10 ಮಸೂದೆಗಳನ್ನು ತಡೆಹಿಡಿದಿರುವುದು ಕಾನೂನು ಬಾಹಿರ ಮತ್ತು ನಿರಂಕುಶ ಕ್ರಮ ಎಂದು ಘೋಷಿಸಿದೆ.

ಜತೆಗೆ 10 ಮಸೂದೆಗಳಿಗೆ ಸಂಬಂಧಿಸಿ ರಾಜ್ಯಪಾಲರು ತೆಗೆದುಕೊಂಡಿರುವ ಎಲ್ಲ ಕ್ರಮಗಳನ್ನು ರದ್ದುಗೊಳಿಸಲಾಗಿದ್ದು, ಎಲ್ಲ ಮಸೂದೆಗಳು ಪುನರ್‌ಪರಿಶೀಲನೆಗೆ ಸಲ್ಲಿಕೆಯಾದ ದಿನಾಂಕದಂದೇ ಅವುಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಪರಿಗಣಿಸಲಾಗುವುದು ಎಂದು ಸಂವಿಧಾನದ 142ನೇ ವಿಧಿಯು ಸುಪ್ರೀಂ ಕೋರ್ಟ್‌ಗೆ ನೀಡಿರುವ ಪರಮಾಧಿಕಾರವನ್ನು ಬಳಸಿಕೊಂಡು ನ್ಯಾ| ಜೆ.ಬಿ.ಪದೀìವಾಲಾ ಮತ್ತು ನ್ಯಾ| ಆರ್‌. ಮಹಾದೇವನ್‌ ಅವರಿದ್ದ ಪೀಠ ತೀರ್ಪು ನೀಡಿದೆ.

ಸಂವಿಧಾನದ 200ನೇ ವಿಧಿಯಲ್ಲಿ ನಿಗದಿಪಡಿಸಿದ ಚೌಕಟ್ಟಿನೊಳಗೆ ರಾಜ್ಯಪಾಲರು ಕಾರ್ಯ ನಿರ್ವಹಿಸಬೇಕು. ರಾಜ್ಯಪಾಲರು 3 ತಿಂಗಳುಗಳೊಳಗೆ ಮಸೂದೆಗೆ ಒಪ್ಪಿಗೆ ನೀಡುವ, ಅದನ್ನು ಸದನಕ್ಕೆ ಹಿಂದಿರುಗಿಸುವ ಅಥವಾ ರಾಷ್ಟ್ರಪತಿಗೆ ಕಳುಹಿಸುವ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿ ಹೇಳಿದೆ.

ಸದನವು ಅಂಗೀಕರಿಸಿದ ಮಸೂದೆಗಳಿಗೆ ಅಂಕಿತ ನೀಡಲು ರಾಜ್ಯಪಾಲರು ವಿಳಂಬ ಮಾಡುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿರುವ ಸುಪ್ರೀಂ ಕೋರ್ಟ್‌, ಒಮ್ಮೆ ರಾಜ್ಯಪಾಲರು ಮಸೂದೆಯನ್ನು ಶಾಸಕಾಂಗಕ್ಕೆ ಹಿಂದಿರುಗಿಸಿದ ಬಳಿಕ, ಅದೇ ಮಸೂದೆಯನ್ನು ಸದನವು ಹೆಚ್ಚೇನೂ ಬದಲಾವಣೆ ಇಲ್ಲದೆ ಮತ್ತೆ ಅಂಗೀಕರಿಸಿದರೆ, ರಾಜ್ಯಪಾಲರು ಅದಕ್ಕೆ ಒಪ್ಪಿಗೆ ನೀಡಬೇಕು. ಮತ್ತೆ ಮಸೂದೆಯನ್ನು ತಡೆ ಹಿಡಿಯುವ ವಿಟೋ ಅಧಿಕಾರ ರಾಜ್ಯಪಾಲರಿಗೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಏನಿದು ವಿವಾದ?

ರಾಜ್ಯದ ವಿ.ವಿ.ಗಳಿಗೆ ಕುಲಪತಿಗಳ ನೇಮಕ ಸಹಿತ ತಮಿಳುನಾಡು ಸರಕಾರ ಅನುಮೋದಿಸಿದ್ದ 10 ಮಸೂದೆಗಳನ್ನು ರಾಜ್ಯಪಾಲರು ತಡೆಹಿಡಿದಿದ್ದರು. ವಿಧಾನಸಭೆಯು ಮತ್ತೆ ಅಂಗೀಕರಿಸಿದ ಬಳಿಕವೂ ಮಸೂದೆಗಳನ್ನು ರಾಜ್ಯಪಾಲರು ತಡೆಹಿಡಿದದ್ದರಿಂದ ತಮಿಳುನಾಡು ಸರಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.

ಏನಿದು 142ನೇ ವಿಧಿ?

ಸಂವಿಧಾನದ ಈ ವಿಧಿ ಬಾಕಿ ಇರುವ ಎಲ್ಲ ಪ್ರಕರಣಗಳಿಗೆ ಸಂಬಂಧಿಸಿ ತೀರ್ಪು ನೀಡಲು ಸುಪ್ರೀಂ ಕೋರ್ಟ್‌ಗೆ ಪರಮಾಧಿಕಾರವನ್ನು ನೀಡುತ್ತದೆ. ಬಾಕಿ ಇರುವ ಪ್ರಕರಣದಲ್ಲಿ ಸಂಪೂರ್ಣ ನ್ಯಾಯವನ್ನು ಒದಗಿಸಬೇಕಾದಾಗ ಸುಪ್ರೀಂ ಕೋರ್ಟ್‌ ಈ ವಿಧಿಯಡಿ ತೀರ್ಪು ನೀಡುತ್ತದೆ.

ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಕೇವಲ ನಮಗೆ ಲಭಿಸಿದ ಗೆಲುವಲ್ಲ; ಎಲ್ಲ ರಾಜ್ಯ ಸರಕಾರಗಳ ಗೆಲುವು. ಇದೊಂದು ಐತಿಹಾಸಿಕ ತೀರ್ಪು.– ಎಂ.ಕೆ. ಸ್ಟಾಲಿನ್‌, ತಮಿಳುನಾಡು  ಮುಖ್ಯಮಂತ್ರಿ

ಇತ್ತೀಚಿನ ಸುದ್ದಿ