ಸ್ವಚ್ಛ ಮಂತ್ರಾಲಯ ಅಭಿಯಾನಕ್ಕೆ ಶ್ರೀಗಳ ಚಾಲನೆ, ಮಹದೇವಪುರ ಕ್ಷೇತ್ರದ 1800 ಕರಸೇವಕರು, ಬಿಜೆಪಿ ಕಾರಕರ್ತರಿಂದ 3 ದಿನಗಳ ಅಭಿಯಾನ.
ಸ್ಥಳೀಯ ಸುದ್ದಿಜಿಲ್ಲಾ ಸುದ್ದಿ


ರಾಯಚೂರು: ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಮಠದ ಆವರಣದಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛ ಮಂತ್ರಾಲಯ ಅಭಿಯಾನಕ್ಕೆ ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರತೀರ್ಥ ಸ್ವಾಮೀಜಿ ಮಠದ ಕಾರಿಡಾರನ್ನು ಸ್ವತಃ ಪೊರಕೆಯಿಂದ ಸ್ವಚ್ಛಗೊಳಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
ಮಾಜಿ ಸಚಿವ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಮಹಾದೇವಪುರ ಕ್ಷೇತ್ರದಿಂದ 1800ಕ್ಕೂ ಅಧಿಕ ಸ್ವಯಂಸೇವಕರು ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಹದೇವಪುರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಹಾಗೂ ಕರಸೇವಕರ ತಂಡ ಸ್ವಚ್ಚತಾ ಅಭಿಯಾನವು ಮಠದ ಗೋಶಾಲೆ, ತುಂಗಭದ್ರಾ ನದಿ ತೀರ, ಕಲ್ಯಾಣಿ, ಸಾರ್ವಜನಿಕ ಗಾರ್ಡನ್, ಪಾಕ ಶಾಲೆ, ಪ್ರಮುಖ ಬೀದಿಗಳು, ಪ್ರಸಾದ ವಿತರಣೆ ಕೇಂದ್ರ ವಿವಿಧ ಮೂವತ್ತೆಂಟು ಸ್ಥಳಗಳಲ್ಲಿ ಕಸ ಸ್ವಚ್ಛಗೊಳಿಸುವ ಕಾರ್ಯ ಮಾಡಿದರು.
ಕರಸೇವಕರಿಗೆ ಸ್ವಚ್ಛತಾ ಸಾಮಾಗ್ರಿಗಳನ್ನು ವಿತರಿಸಿ, ಸ್ವತಃ ತಾವೇ ಸ್ವಚ್ಛತೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸ್ವಾಮಿಜಿಗಳು ಪವಿತ್ರ ಸ್ಥಳಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಮತ್ತು ಸೇವೆ ಸಲ್ಲಿಸುವ ಮಹತ್ವವನ್ನು ಒತ್ತಿ ಹೇಳುವ ಮೂಲಕ ಅನುಗ್ರಹ ಸಂದೇಶ ನೀಡಿದರು.
ಮಹಾತ್ಮ ಗಾಂಧಿಯವರ ಕನಸಿನ ಭಾರತ ವನ್ನು ಸುಂದರವಾಗಿಸುವ ದೃಷ್ಟಿಯಿಂದ ಸ್ವಚ್ಛಭಾರತದ ಕನಸು ಕಂಡಿದ್ದರು. ಇದೇ ಹಾದಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಅಭಿಯಾನ ವನ್ನು ಮುನ್ನೆಡೆಸುವ ನಿಟ್ಟಿನಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ ನೇತೃತ್ವ ತಂಡ ಸ್ವಚ್ಛ ಮಂತ್ರಾಲಯ ಅಭಿಯಾನ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಮಾಜಿ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ, ಪ್ರತಿ 2 ವರ್ಷಕೊಮ್ಮೆ ಸ್ವಚ್ಛ ಮಂತ್ರಾಲಯ ಅಭಿಯಾನ ಹಮ್ಮಿಕೊಳ್ಳಲಾಗುತ್ತದೆ. ರಾಯರ ಆರಾಧನಾ ಮಹೋತ್ಸವದ ನಂತರ ಅಭಿಯಾನ ನಡೆಸಲಾಗುತ್ತದೆ. ಆರಾಧನಾ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತರು ಆಗಮಿಸಿದ ವೇಳೆ ಕಸ ನಿರ್ವಹಣೆ ಕಷ್ಟಸಾಧ್ಯ ಈ ಹಿನ್ನೆಲೆಯಲ್ಲಿ ಮಹದೇವಪುರ ಕ್ಷೇತ್ರದ ಸಾವಿರಾರು ಬಿಜೆಪಿ ಕಾಯಕರ್ತರ ಕರಸೇವಕರ ತಂಡ ಮಂತ್ರಾಲಯ ಸ್ವಚ್ಛಗೊಳಿಸಲಿದೆ ಎಂದರು.
ಶ್ರೀ ಕ್ಷೇತ ಮಂತ್ರಾಲಯದ ಸ್ವಚ್ಛತೆ ಕಾಯ್ದುಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಹಾಗಾಗಿ ಶ್ರೀ ಗುರು ರಾಯರ ಆರಾಧನೆಯ ನಂತರ ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ ಅವರಣ, ನದಿ ತೀರ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛಗೊಳಿಸುವ ಉದ್ದೇಶದಿಂದ ಸ್ವಚ್ಛ ಮಂತ್ರಾಲಯ ಅಭಿಯಾನವನ್ನು ಕೈಗೊಳ್ಳಲಾಗಿದೆ. ಮಹದೇವಪುರ ಕ್ಷೇತ್ರದ 1800ಕ್ಕೂ ಹೆಚ್ಚು ಮುಖಂಡರು ಹಾಗೂ ಕಾರ್ಯಕರ್ತರ ಸಹಕಾರದೊಂದಿಗೆ ಈ ಕಾರ್ಯ ನಡೆಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಖಜಾಂಚಿ ಸುಬ್ಬಣ್ಣ, ನಗರ ಮಂಡಲ ಅಧ್ಯಕ್ಷ ಎನ್.ಆರ್. ಶ್ರೀಧರ್ ರೆಡ್ಡಿ, ಗ್ರಾಮಾಂತರ ಮಂಡಲ ಅಧ್ಯಕ್ಷ ಎಚ್.ಎಸ್. ಪಿಳ್ಳಪ್ಪ, ರಾಜ್ಯ ಪರಿಷತ್ ಸದಸ್ಯ ಎಲ್. ರಾಜೇಶ್, ಮಾಜಿ ಅಧ್ಯಕ್ಷ ಮನೋಹರ್ ರೆಡ್ಡಿ, ನಟರಾಜ್, ರಾಜಾರೆಡ್ಡಿ, ವೆಂಕಟಸ್ವಾಮಿರೆಡ್ಡಿ, ಜ್ಯೋತಿಪುರ ವೇಣು, ಕಣ್ಣೂರು ಅಶೋಕ್, ಬಿದರಹಳ್ಳಿ ರಾಜೇಶ್, ಬಿ.ಎಸ್. ಶಶಿಧರ್, ಚನ್ನಸಂದ್ರ ಚಂದ್ರಶೇಖರ್ ಹಾಗೂ ಮಹದೇವಪುರ ವಿಧಾನಸಭಾ ಕ್ಷೇತ್ರದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.