ತಹಶಿಲ್ದಾರ್ಗೆ ಜೀವ ಬೆದರಿಕೆ, ಗ್ರಾಮ ಪಂಚಾಯ್ತಿ ಸದಸ್ಯನ ಬಂಧನ
ಕ್ರೈಮ್


ಸರ್ಕಾರಿ ಗೋಮಾಳ ವೀಕ್ಷಣೆಗೆ ತೆರೆಳಿದ್ದ ತಹಶೀಲ್ದಾರ್ ಸೋಮಶೇಖರ್ ಅವರಿದ್ದ ಸರ್ಕಾರಿ ವಾಹನ ಅಡ್ಡಗಟ್ಟಿ ಹಲ್ಲೆ ಯತ್ನ ಹಾಗೂ ಕೊಲೆ ಬೆದರಿಕೆ ಹಾಕಿದ ಆರೋಪದಲ್ಲಿ ಗ್ರಾ.ಪಂ ಸದಸ್ಯ ಸೇರಿ ಮೂವರನ್ನು ಶನಿವಾರ ಸೂಲಿಬೆಲೆ ಪೊಲೀಸರು ಬಂಧಿಸಿದ್ದಾರೆ.
ದೊಡ್ಡಹರಳಗೆರೆ ಗ್ರಾಮ ಪಂಚಾಯಿತಿ ಸದಸ್ಯ ಶಶಿಕಿರಣ್, ಮುನಿರಾಜ್ ಹಾಗೂ ಮಂಜುನಾಥ್ ಬಂಧಿತರು. ಮೂವರೂ ತೆನೆಯೂರು ಗ್ರಾಮದ ನಿವಾಸಿಗಳು.
ಬಗರ್ ಹುಕುಂ ಸಮಿತಿಯಲ್ಲಿ ನಮೂನೆ-53 ಅರ್ಜಿ ಸಲ್ಲಿಕೆಯಾಗಿದ್ದು, ಸರ್ಕಾರಿ ಭೂಮಿಯಲ್ಲಿ ಸ್ವಾಧೀನದಲ್ಲಿರುವ ರೈತರ ಜಮೀನು ಪರಿಶೀಲಿಸಲು ಏಪ್ರಿಲ್ 17 ರಂದು ಸಂಜೆ 5.20 ರಲ್ಲಿ ತೆನೆಯೂರು ಗ್ರಾಮದ ಸರ್ವೇ 20 ರಲ್ಲಿರುವ ಟಿ.ಎಂ.ಮುನಿರಾಜ್ ಅವರ ಜಮೀನಿಗೆ ತಹಶೀಲ್ದಾರ್ ಸೋಮಶೇಖರ್ ಅವರು ಸೂಲಿಬೆಲೆ, ಬೆಂಡಿಗಾನಹಳ್ಳಿ ನಾಡಕಚೇರಿ ಅಧಿಕಾರಿಗಳೊಂದಿಗೆ ತೆರಳಿದ್ದರು.
ಸ್ಥಳದಲ್ಲಿ ಮಣ್ಣು ತೆಗೆದು ತಡೆಗೋಡೆ ನಿರ್ಮಿಸಿಕೊಂಡಿರುವ ಶಶಿಕಿರಣ್ ಹಾಗೂ ಇಬ್ಬರು ಟ್ರ್ಯಾಕ್ಟರ್ ಚಲಾಯಿಸಿಕೊಂಡು ನಾವಿದ್ದ ಸರ್ಕಾರಿ ಜೀಪ್ಗೆ ಡಿಕ್ಕಿ ಹೊಡೆಯಲು ಬಂದ್ದರು. ಅದರಿಂದ ಪಾರಾದೆವು. ನಂತರ ವಾಹನ ಅಡ್ಡಗಟ್ಟಿದ ಆರೋಪಿಗಳು ಈ ಜಮೀನಿನಲ್ಲಿ ಮಣ್ಣು ತೆಗೆದು ತಡೆಗೋಡೆ ನಿರ್ಮಿಸುತ್ತಿರುವುದು ನಾವೇ. ಗಣಿಗಾರಿಕೆ ಮಾಡಿ ಸರ್ಕಾರಿ ಜಮೀನಿಗೆ ಕಾಂಪೌಂಡ್ ನಿರ್ಮಿಸಿಕೊಳ್ಳುತ್ತಿರುವುದು ನಾವೇ ಎಂದು ತಹಶೀಲ್ದಾರ್ ಅವರನ್ನು ನಿಂದಿಸಿದರು ಎಂದು ಜೀಪ್ನಲ್ಲಿದ್ದ ಸೂಲಿಬೆಲೆ ನಾಡಕಚೇರಿ ರಾಜಸ್ವ ನಿರೀಕ್ಷಕ ನ್ಯಾನಮೂರ್ತಿ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಸೂಲಿಬೆಲೆ ಪೊಲೀಸರು ಮೂವರನ್ನು ಬಂಧಿಸಿ, ಟ್ರ್ಯಾಕ್ಟರ್ ಮತ್ತು ಕಾರು ಜಪ್ತಿ ಮಾಡಿದ್ದಾರೆ.
