ದೇವಸ್ಥಾನಕ್ಕೆ ಕನ್ನ,ಮೂವರ ಬಂಧನ, 22ವಿಗ್ರಹ ವಶ.

ಸ್ಥಳೀಯ ಸುದ್ದಿಕ್ರೈಮ್

ಧರ್ಮ ಬಸವನಪುರ.

9/4/20251 min read

ಬೆಂಗಳೂರು:(ವೈಟ್ ಫೀಲ್ಡ್) :ದೇವಸ್ಥಾನಗಳಿಗೆ ನುಗ್ಗಿ ವಿಗ್ರಹಗಳನ್ನು ಕಳ್ಳತನ ಮಾಡುತ್ತಿದ್ದ ಮೂವರು ಅಂತರ ರಾಜ್ಯ ಕಳ್ಳರನ್ನು ಕಾಡುಗೋಡಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಕೋಲ್ಕತ್ತದ ಮೊಹಮ್ಮದ್‌ ಯೂಸಫ್‌ (20), ಮೊಹಮ್ಮದ್ ರಬ್ಬಿ (22), ಮೊಹಮ್ಮದ್‌ ಬಾಬು (21) ಬಂಧಿತರು.

ಬಂಧಿತರಿಂದ ₹6.50 ಲಕ್ಷ ಮೌಲ್ಯದ ದೇವರ 22 ವಿಗ್ರಹಗಳು, ಕೃತ್ಯಕ್ಕೆ ಬಳಸಿದ್ದ ಆಟೊ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ಕನ್ನಮಂಗಲದ ಖಾಜಿಸೊನ್ನೇನಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದ ಮೂವರು ಆರೋಪಿಗಳು ನಗರದಲ್ಲಿ ವಾಸವಾಗಿದ್ದುಕೊಂಡು ಇಬ್ಬರು ಕಾರು ವಾಷಿಂಗ್‌ ಕೆಲಸ ಹಾಗೂ ಮತ್ತೊಬ್ಬ ಚಿಂದಿ ಆಯುವ ಕೆಲಸ ಮಾಡುತ್ತಿದ್ದನು.

ಖಾಜಿಸೊನ್ನೇನಹಳ್ಳಿ ಗ್ರಾಮದಲ್ಲಿರುವ ಮುನೇಶ್ವರಸ್ವಾಮಿ ದೇವಸ್ಥಾನದ ಬಾಗಿಲು ಮುರಿದು ಒಳನುಗ್ಗಿ ದೇವರ ವಿಗ್ರಹಗಳು, ಹುಂಡಿಯ ಹಣ, ಗಂಟೆಗಳನ್ನು ಕಳ್ಳರು ಕಳ್ಳತನ ಮಾಡಿ ಪರಾರಿಯಾಗಿದ್ದರು.

ಈ ಬಗ್ಗೆ ದೇವಾಲಯದ ಅರ್ಚಕರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿಗಳನ್ನು ಕಲೆಹಾಕಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಆತನ ಬಳಿ ಕಟಿಂಗ್‌ ಪ್ಲೇಯರ್‌, ಆಕ್ಸೆಲ್‌ ಬ್ಲೇಡ್‌, ಕಬ್ಬಿಣದ ರಾಡ್‌ ಕಂಡು ಬಂದಿದೆ. ನಂತರ ಆತನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ, ಮತ್ತಿಬ್ಬರು ಸಹಚರರೊಂದಿಗೆ ಸೇರಿಕೊಂಡು ದೇವಸ್ಥಾನದಲ್ಲಿ ಕಳ್ಳತನ ಮಾಡಿರುವುದಾಗಿ ಹಾಗೂ ಹೊಸಕೋಟೆಯ ದೇವಸ್ಥಾನದಲ್ಲಿ ಮತ್ತು ಆವಲಹಳ್ಳಿಯಲ್ಲಿ ಆಟೋರಿಕ್ಷಾ ಕಳವು ಮಾಡಿರುವುದಾಗಿ ಹೇಳಿದ್ದಾನೆ.

ಆರೋಪಿಯ ಮಾಹಿತಿ ಮೇರೆಗೆ ಇನ್ನಿಬ್ಬರನ್ನು ಬಂಧಿಸಿದ್ದಾರೆ. ಮೂವರನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದಾಗ, ಕಳವು ಮಾಡಿದ್ದ ದೇವರ ವಿಗ್ರಹಗಳನ್ನು ಈರಂಡಹಳ್ಳಿಯಲ್ಲಿರುವ ಗುಜರಿ ವ್ಯಾಪಾರಿಗೆ ನೀಡಿರುವುದಾಗಿ ಹಾಗೂ ಕೃತ್ಯಕ್ಕೆ ಬಳಸಿದ್ದ ಆಟೋರಿಕ್ಷಾವನ್ನು ದಿಣ್ಣೂರು ಪ್ಲಾಂಟೇಷನ್‌ ಪಕ್ಕದ ಖಾಲಿ ಜಾಗದಲ್ಲಿ ನಿಲ್ಲಿಸಿರುವುದಾಗಿ ತಿಳಿಸಿದ್ದಾರೆ.

ಆರೋಪಿಗಳ ಮಾಹಿತಿಯಂತೆ ತನಿಖೆ ಮುಂದುವರೆಸಿದ ಪೊಲೀಸರು 22 ದೇವರ ವಿಗ್ರಹಗಳು ಹಾಗೂ ಆಟೋರಿಕ್ಷಾವನ್ನು ವಶಪಡಿಸಿಕೊಂಡಿದ್ದು, ಅವುಗಳ ಒಟ್ಟು ಮೌಲ್ಯ 6.50 ಲಕ್ಷ ರೂ. ಗಳೆಂದು ಅಂದಾಜಿಸಲಾಗಿದೆ.ಆರೋಪಿಗಳ ಬಂಧನದಿಂದ ಹೊಸಕೋಟೆ, ಆವಲಹಳ್ಳಿ, ಸೂಲಿಬೆಲೆ ಹಾಗೂ ಕಾಡುಗೋಡಿಯ 4 ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಇನ್ಸ್ಪೆಕ್ಟರ್ ರಂಗಸ್ವಾಮಿ ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿದೆ