ಮಾಗಡಿ ಕೆರೆಯಲ್ಲಿ ವಿದೇಶಿ ಹಕ್ಕಿಗಳ ಕಲರವ..! ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ ಬಾನಾಡಿಗಳು.
ಪ್ರಜಾ ವಿಷೇಶ


ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದ ಕೆರೆಗೆ ಹಲವು ದೇಶಗಳಿಂದ ಆಗಮಿಸಿದ ಬಾನಾಡಿಗಳು ನೋಡುಗರ ಕಣ್ಮನ ಸೆಳೆಯುತ್ತಿದ್ದು ಪಕ್ಷಿಗಳನ್ನು ವೀಕ್ಷಿಸಲು ನಿತ್ಯವೂ ಇಲ್ಲಿಗೆ ಪ್ರವಾಸಿಗರ ದಂಡು ಹರಿದು ಬರುತ್ತಿದೆ.
ಮಾಗಡಿ ಕೆರೆಯು ಒಟ್ಟು 134.15 ಎಕರೆ ವಿಸ್ತೀರ್ಣ ಹೊಂದಿದ ವಿಶಾಲವಾದ ಪ್ರದೇಶದಲ್ಲಿ ವ್ಯಾಪಿಸಿದ್ದು ಪ್ರತಿ ವರ್ಷ ಇಲ್ಲಿಗೆ ತಮ್ಮ ಸಂತಾನೋತ್ಪತ್ತಿಗಾಗಿ ದೇಶ- ವಿದೇಶಗಳಿಂದ ಅಪರೂಪದ ಅತಿಥಿಗಳಾಗಿ ವಿವಿಧ ಜಾತಿಯ ಸಾವಿರಾರು ಪಕ್ಷಿಗಳು ಇಲ್ಲಿಗೆ ಆಗಮಿಸುತ್ತವೆ.
ಪ್ರತಿ ವರ್ಷ ಚಳಿಗಾಲದ ಸಮಯಕ್ಕೆ ಮಾಗಡಿ ಕೆರೆಗೆ ಈ ವಿದೇಶಿ ಪಕ್ಷಿಗಳು ಆಗಮಿಸುತ್ತವೆ. ಈ ಚಳಿಗಾಲದ ಅತಿಥಿಗಳೆಲ್ಲ ಹಂಸಗಳ ಜಾತಿಗೆ ಸೇರಿದ್ದು ಇವುಗಳಲ್ಲಿ ಲಾಂಗ್ ಹೆಡೆಡ್ ಗೂಸ್, ಬ್ರಾಹ್ಮಣಿ ಡಕ್, ಪೇಂಟೆಡ್ ಸ್ಪಾರ್ಕ, ಬಾರ್ ಹೆಡೆಡ್ ಗೂಸ್, ಬ್ಲ್ಯಾಕ ಬಿಸ್, ವೈಟ್ ಬಿಸ್, ಬ್ಲ್ಯಾಕ್ ನೆಕಡ್ ಸ್ಪಾರ್ಕ, ವೈಟ್ ನೆಕಡ್ ಸ್ಪಾರ್ಕ, ಸ್ಕಾಂಪ್ ಡಕ್, ಗ್ರೇ ಡಕ್, ಕೂಟ್, ಲಿಟಿಲ್ ಕಾರ್ಪೋರೆಂಟ್, ಸ್ಪಾಟ್ ಬಿಲ್ ಸೇರಿದಂತೆ ಒಟ್ಟು16 ಕ್ಕೂ ಅಧಿಕ ವಿವಿಧ ಜಾತಿಯ ಪಕ್ಷಿಗಳು ಇಲ್ಲಿಗೆ ಆಗಮಿಸುತ್ತವೆ.
ಈ ವಿದೇಶಿ ಪಕ್ಷಿಗಳಲ್ಲಿ ವಿವಿಧ ಜಾತಿಯ ಪಕ್ಷಿಗಳಿದ್ದು ಇವುಗಳಲ್ಲಿ ಬಾರ್ ಹೆಡೆಡ್ ಗೂಸ್, ಬ್ರಾಹ್ಮಣಿ ಡಕ್ ಹೆಚ್ಚಿನ ಸಂಖ್ಯೆಗಳಲ್ಲಿ ಆಗಮಿಸಿವೆ.
ಪ್ರತಿ ವರ್ಷ ಜಮ್ಮು ಕಾಶ್ಮೀರದ ಲಡಾಕ್, ಲೇಹ್ ಹಾಗೂ ವಿದೇಶಗಳಾದ ಮಲೇಷಿಯಾ, ರಷ್ಯಾ, ಆಸ್ಟ್ರೇಲಿಯಾ, ಟಿಬೇಟ್, ಮಂಗೋಲಿಯ, ಸೈಬಿರಿಯಾಗಳಿಂದ ಈ ಹಕ್ಕಿಗಳು ಮಾಗಡಿ ಕೆರೆಗೆ ವಲಸೆ ಬರುತ್ತವೆ.
ಲಡಾಕ್, ಲೇಹ್ ಹಾಗೂ ಟಿಬೇಟ್‌ಗಳಲ್ಲಿ ಮೈಕೊರೆಯುವ ವಿಪರೀತ ಚಳಿಗಾಲ ಇರುವುದರಿಂದ ನವೆಂಬರದಿಂದ ಮಾರ್ಚವರೆಗೆ ಇಲ್ಲಿನ ಸರೋವರಗಳು ಹೆಪ್ಪುಗಟ್ಟುವುದರಿಂದ ಇಲ್ಲಿನ ಪಕ್ಷಿಗಳು ತಮಗೆ ವಾಸಕ್ಕೆ ಹವಾಮಾನ ಸರಿ ಹೊಂದದೆ ಇರುವುದರಿಂದ ನವೆಂಬರ್ ನಿಂದ ಫೆಬ್ರವರಿಯವರೆಗೆ ಇಲ್ಲಿನ ಮಾಗಡಿ ಕೆರೆಗೆ ಬಂದು ತಮ್ಮ ವಂಶೋದ್ದಾರ ಮಾಡಿಕೊಂಡು ವಾಪಸ್ಸು ಮರಳುತ್ತವೆ.
ಈ ಅಪರೂಪದ ವಿದೇಶಿ ಅತಿಥಿಗಳು ಮಾಗಡಿ ಕೆರೆಗೆ ನವೆಂಬರ್ ತಿಂಗಳಿನಲ್ಲಿ ಬಂದಿಳಿದು ಫೆಬ್ರವರಿ ತಿಂಗಳಲ್ಲಿ ತಮ್ಮ ದೇಶಗಳಿಗೆ ಮರಳುತ್ತಿದ್ದು ಒಟ್ಟು ನಾಲ್ಕು ತಿಂಗಳುಗಳ ಕಾಲ ಮಾಗಡಿ ಕೆರೆಯಲ್ಲಿ ಬೀಡು ಬಿಡುವ ಈ ಪಕ್ಷಿಗಳು ಬೆಳಗಾಗುತ್ತಲೆ ನೆರೆಯ ಹಾವೇರಿ, ಧಾರವಾಡ, ವಿಜಯನಗರ, ಕೊಪ್ಪಳ, ಬಳ್ಳಾರಿ ಹಾಗೂ ಗದಗ ಜಿಲ್ಲೆಗಳ ಅನೇಕ ದೂರದ ಜಮೀನುಗಳಿಗೆ ಆಹಾರ ಅರಸಿ ಹೋಗುತ್ತವೆ.
ಈ ಬಾನಾಡಿಗಳಿಗೆ ಭತ್ತ, ಕಡಲೆ ಮತ್ತು ಶೇಂಗಾ ಮುಖ್ಯ ಆಹಾರವಾಗಿದ್ದು ಬೆಳಿಗ್ಗೆ ಆಹಾರ ಅರಸುತ್ತ ಹೋಗುವ ಈ ಹಕ್ಕಿಗಳು ಮರಳಿ 3 ಘಂಟೆಗಳಲ್ಲೆ ಕೆರೆಗೆ ವಾಪಸ್ಸಾಗುತ್ತವೆ.
ತದನಂತರ ಪಕ್ಷಿಗಳು ಸಂಜೆಯವೆರೆಗೆ ಮಾಗಡಿ ಕೆರೆಯಲ್ಲಿ ವಿಶ್ರಮಿಸಿ ಸೂರ್ಯಾಸ್ತದ ಸಮಯದಲ್ಲಿ ಮತ್ತೆ ಹಾರಿ ಹೋಗಿ ಹೊಟ್ಟೆ ತುಂಬಿಸಿಕೊಂಡು ಬರುತ್ತಿದ್ದು ಇದು ದಿನನಿತ್ಯದ ಪಕ್ಷಿಗಳ ಆಹಾರ ಹಾಗೂ ವಲಸೆಯ ದಿನಚರಿಯಾಗಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಸಹ ವಿದೇಶಿ ಪಕ್ಷಿಗಳು ಮಾಗಡಿ ಕೆರೆಗೆ ವಲಸೆ ಬರುತ್ತಿದ್ದು ಡಿಸೆಂಬರ್ ವರೆಗೂ ಹಕ್ಕಿಗಳು ಬರುತ್ತವೆ.ಈ ಬಗ್ಗೆ ಈಗಾಗಲೆ ಇಲಾಖೆಯಿಂದ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ.ಸಾರ್ವಜನಿಕರು ಮಾಗಡಿ ಕೆರೆಯ ಬಳಿ ಹಾಗೂ ಸುತ್ತ ಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಮನವಿ ಮಾಡಲಾಗುವುದು ಎಂದು ಶಿರಹಟ್ಟಿವಲಯ ಅರಣ್ಯಾಧಿಕಾರಿ ರಾಮಪ್ಪ ಪೂಜಾರ ತಿಳಿಸಿದರು.
ಮಾಗಡಿ ಗ್ರಾಮದ ಕೆರೆಯು ತುಂಬಾ ವಿಶಾಲವಾಗಿದ್ದು ಅತ್ಯುತ್ತಮ ಪರಿಸರ ಹಾಗೂ ಸುರಕ್ಷಿತ ಪ್ರದೇಶ ಆಗಿರುವುದರಿಂದ ಇಲ್ಲಿಗೆ ಪ್ರತಿ ವರ್ಷವು ಹಲವು ಜಾತಿಯ ಸಾವಿರಾರು ವಿದೇಶಿ ಪಕ್ಷಿಗಳು ವಲಸೆ ಬರುತ್ತವೆ.ಮಾಗಡಿ ಕೆರೆಯು ಈಗ ಪ್ರವಾಸಿ ತಾಣವಾಗಿದ್ದು ಪಕ್ಷಿಗಳನ್ನು ವೀಕ್ಷಿಸಲು ಬರುವ ಪ್ರವಾಸಿಗರ ಹಿತ ದೃಷ್ಟಿಯಿಂದ ಸರ್ಕಾರ ಇಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಮಾಗಡಿ ಗ್ರಾಮದ ಸ್ಥಳೀಯ ನಿವಾಸಿಯಾದ ಜಗದೀಶ್.ಎಸ್.ಗಾಣಿಗೇರ ಮನವಿ ಮಾಡಿದರು.
ವಿಶೇಷ ವರದಿ✍️ಚಂದ್ರಶೇಖರ ಸೋಮಣ್ಣವರ