ಧರ್ಮಸ್ಥಳ ಕೇಸುಗಳ ತನಖೆಗೆ SIT ರಚಿಸಿ ಸರ್ಕಾರ ಅಧಿಕೃತ ಆದೇಶ.
ಕ್ರೈಮ್ಜಿಲ್ಲಾ ಸುದ್ದಿ


ದಕ್ಷಿಣ ಕನ್ನಡ : ಧರ್ಮಸ್ಥಳದ ಆರೋಪ ಪ್ರಕರಣದಲ್ಲಿ ಕೊನೆಗೂ ರಾಜ್ಯ ಸರ್ಕಾರ ಮಣಿದಿದೆ. ಪ್ರಣವ್ ಮೊಹಂತಿ ನೇತೃತ್ವದ SIT ತಂಡಕ್ಕೆ ತನಿಖೆಯ ಹೊಣೆ ನೀಡಲಾಗಿದೆ. ಕರ್ನಾಟಕ ಟಿವಿಗೆ ರಾಜ್ಯ ಸರ್ಕಾರ SIT ತನಿಖೆಗೆ ಆದೇಶಿಸಿರುವ ಪತ್ರ ಲಭ್ಯವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ, ಕಲಂ 211(ಎ), ಬಿ.ಎನ್.ಎಸ್ ಅಡಿಯಲ್ಲಿ ದಾಖಲಾಗಿರುವ ಪ್ರಕರಣ ಹಾಗೂ ಈ ಸಂಬಂಧ ಇತರೆ ಠಾಣೆಗಳಲ್ಲಿ ದಾಖಲಾಗಬಹುದಾದ, ಪ್ರಕರಣಗಳ ಸಮಗ್ರ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ.
ನಾಲ್ವರು ಐಪಿಎಸ್ ಅಧಿಕಾರಿಗಳನ್ನೊಳಗಿಂಡ ತಂಡ ಇದಾಗಿದ್ದು, ರಾಜ್ಯದ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾ ನಿರ್ದೇಶಕ ಪ್ರಣವ ಮೊಹಾಂತಿ ಅವರ ನೇತೃತ್ವದಲ್ಲಿ ನೇಮಕಾತಿ ವಿಭಾಗದ ಉಪ ಪೊಲೀಸ್ ಮಹಾ ನಿರ್ದೇಶಕ ಎಂ.ಎನ್ ಅನುಚೇತನ್, ಸಿಎಆರ್ ಕೇಂದ್ರದ ಉಪ ಪೊಲೀಸ್ ಆಯುಕ್ತೆ ಸೌಮ್ಯಲತಾ ಮತ್ತು ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಅಧೀಕ್ಷಕ ಜಿತೇಂದ್ರ ಕುಮಾರ್ ದಯಾಮ ಇದ್ದಾರೆ.
ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ತಾನು ಹೂತು ಹಾಕಿರುವುದಾಗಿ ವ್ಯಕ್ತಿಯೊಬ್ಬರು ಈಚೆಗೆ ನ್ಯಾಯಾಲಯದಲ್ಲಿ ಹೇಳಿಕೆ ಕೊಟ್ಟಿದ್ದರು. ಎರಡು ದಶಕಗಳಲ್ಲಿ ಅತ್ಯಾಚಾರ, ಹತ್ಯೆ ಮತ್ತು ದೌರ್ಜನ್ಯಗಳೂ ಈ ಭಾಗದಲ್ಲಿ ನಡೆದಿವೆ ಎಂದು ಅವರು ಹೇಳಿದ್ದರು. ಇದರ ನಂತರ ಭಾರತೀಯ ನ್ಯಾಯ ಸಂಹಿತದ ಕಲಂ 211(ಎ) ಅಡಿಯಲ್ಲಿ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಧರ್ಮಸ್ಥಳ ಗ್ರಾಮದ ಅರಣ್ಯ ಪ್ರದೇಶಗಳಲ್ಲಿ ಅಕ್ರಮವಾಗಿ ಹಲವು ಶವಗಳನ್ನು ಹೂತಿಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ವ್ಯಕ್ತಿಯೋರ್ವ ತಾನೇ ಶವ ಹೂತಿಟ್ಟಿದ್ದೆ ಎಂದು ಪೊಲೀಸರ ಬಳಿ ಒಪ್ಪಿಕೊಂಡಿದ್ದಾರೆ. ಈ ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣವನ್ನು ಶೀಘ್ರದಲ್ಲೇ ತನಿಖಾ ತಂಡಕ್ಕೆ ವರ್ಗಾಯಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.