ತಾಳಿ ಕಟ್ಟಿದ ಕೆಲವೇ ನಿಮಿಷಗಳಲ್ಲಿ ವರನಿಗೆ ಹೃದಯಾಘಾತ ! ಕೇವಲ 15 ನಿಮಿಷದಲ್ಲೇ ವಿಧವೆಯಾದ ನವವಧು
ರಾಜ್ಯ


ಬಾಗಲಕೋಟೆ: ಮದುವೆ ಸಂಭ್ರಮದಲ್ಲಿದ್ದ ಮನೆ ಕೆಲವೇ ಕ್ಷಣಗಳಲ್ಲಿ ಸೂತಕದ ಮನೆಯಾದ ಘಟನೆ ಜಮಖಂಡಿ ಪಟ್ಟಣದಲ್ಲಿ ನಡೆದಿದೆ. ತಾಳಿ ಕಟ್ಟಿ ಮದುವೆಯ ಸಂಭ್ರಮದಲ್ಲಿದ್ದ ವರ ಮದುವೆ ಮನೆಯಲ್ಲಿಯೇ ಹೃದಯಾಘಾತದಿಂದ ಸಾವನಪ್ಪಿದ್ದಾನೆ.
ಮೃತನನ್ನು ಕುಂಬಾರಹಳ್ಳ ಗ್ರಾಮದ ನಿವಾಸಿ, ರಾಜ್ಯ ಸೈಕ್ಲಿಂಗ್ ಸಂಘದ ಕಾರ್ಯದರ್ಶಿ ಶ್ರೀಶೈಲ ಕುರ್ನೆ ಅವರ ಪುತ್ರ ಪ್ರವೀಣ ಕುರ್ನೆ (26) ಮೃತ ದುರ್ದೈವಿ. ಕೆಲವೇ ಕ್ಷಣದಲ್ಲಿ ಮಧು ವಿಧವೆಯಾಗಿದ್ದಾರೆ. ಮದುವೆ ಸಂಭ್ರಮದ ಬದಲು ಸೂತಕದ ಛಾಯೆ ಆವರಿಸಿದೆ.
ತಾಳಿ ಕಟ್ಟಿದ ನಂತರ ವೇದಿಕೆ ಮೇಲೆ ನವವಧುವರರ ಆರತಕ್ಷತೆಗೆ ನಿಂತಿದ್ದರು. ಕೇವಲ ಎರಡರಿಂದ ಮೂರು ಪೊಟೊ ಮಾತ್ರ ಕ್ಲಿಕ್ ಆಗಿದ್ದವು. ಅಷ್ಟರಲ್ಲೇ ವರ ಪ್ರವೀಣ ಅವರಿಗೆ ಕಾಲು ನಡುಗುವುದು, ಎದೆನೋವು ಶುರುವಾಗಿದೆ. ಕೂಡಲೇ ಕುಟುಂಬಸ್ಥರು ಪ್ರವೀಣ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಅಷ್ಟೊತ್ತಿಗಾಗಲೇ ಪ್ರವೀಣ ಮೃತಪಟ್ಟಿದ್ದರು. ತಾಳಿ ಕಟ್ಟಿದ ಕೇವಲ 15 ನಿಮಿಷದಲ್ಲೇ ವಧು ವಿಧವೆಯಾಗಿದ್ದಾರೆ. ವರನ ಮನೆಯಲ್ಲಿ ಸಂಭ್ರಮದ ಬದಲು ಕಣ್ಣೀರ ಕಡಲು ಹರಿಯುತ್ತಿದೆ.
ಇತ್ತೀಚಿನ ದಿನಗಳಲ್ಲಿ ಯುವ ಜನಾಂಗದಲ್ಲಿ ಹಾರ್ಟ್ ಅಟ್ಯಾಕ್‌ನ ಪ್ರಕರಣಗಳು ವಿಪರೀತವಾಗಿ ಏರಿಕೆಯಾಗುತ್ತಿದೆ. ಕೆಲ ದಿನಗಳ ಹಿಂದೆ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನ ಕಲಾವಿದ ರಾಕೇಶ್ ಪೂಜಾರಿ ಕೂಡ ಹಠಾತ್ ಆಗಿ ಹೃದಯಾಘಾತದಿಂದ ಸಾವು ಕಂಡಿದ್ದರು. ಸ್ನೇಹಿತನ ಮದುವೆಯ ಮೆಹಂದಿ ಕಾರ್ಯಕ್ರಮದಲ್ಲಿ ಡಾನ್ಸ್ ಮಾಡುವಾಗಲೇ ಅವರಿಗೆ ಹೃದಯಾಘಾತವಾಗಿ ಕುಸಿದು ಬಿದ್ದಿದ್ದರು. ಬಳಿಕ ಅಸ್ಪತ್ರೆಗೆ ದಾಖಲು ಮಾಡಿದರೂ ಅವರು ಬದುಕುಳಿದಿರಲಿಲ್ಲ. ಇದು ಇಡೀ ರಾಜ್ಯಕ್ಕೆ ಆಘಾತ ತಂದಿತ್ತು. ಈಗ ಅದೇ ರೀತಿಯ ಇನ್ನೊಂದು ಪ್ರಕರಣವಾಗಿದ್ದು, ರಾಜ್ಯ ಆರೋಗ್ಯ ಇಲಾಖೆ ಈ ನಿಟ್ಟಿನಲ್ಲಿ ಗಮನವಹಿಸಬೇಕಾಗಿದೆ.