ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆದ ಹೊಸಕೋಟೆ ಇತಿಹಾಸ ಪ್ರಸಿದ್ದ ಶ್ರೀ ಅವಿಮುತ್ತೇಶ್ವರ ಬ್ರಹ್ಮರಥೋತ್ಸವ
ಸ್ಥಳೀಯ ಸುದ್ದಿ


ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆದ ಹೊಸಕೋಟೆ ಇತಿಹಾಸ ಪ್ರಸಿದ್ದ ಶ್ರೀ ಅವಿಮುತ್ತೇಶ್ವರ ಬ್ರಹ್ಮರಥೋತ್ಸವ.
ಹೊಸಕೋಟೆ ನಗರದಲ್ಲಿ ಇತಿಹಾಸ ಪ್ರಸಿದ್ಧಶ್ರೀ ಅವಿಮುಕ್ತ ಶ್ವರಸ್ವಾಮಿ ಮತ್ತು ತ್ರಿಪುರ ಸುಂದರಿ ಅಮ್ಮನವರ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿಸಲಾಯಿತು.
ಸುಮಾರು 800 ವರ್ಷಗಳ ಇತಿಹಾಸವಿರುವ ಈ ದೇವಾಲಯಕ್ಕೆ 136 ವರ್ಷಗಳ ಹಿಂದೆ ಮೈಸೂರು ಮಹಾರಾಜರ ಕಾಲದಲ್ಲಿ ಬ್ರಹ್ಮ ರಥೋತ್ಸವ ಆರಂಭಿಸಲಾಗಿದ್ದು ಮುಜರಾಯಿ ಇಲಾಖೆಗೆ ಸೇರಿರುವ ಈ ದೇವಾಲಯದಲ್ಲಿ ಅವಿಮುಕೇಶ್ವರ ಮತ್ತು ತ್ರಿಪುರ ಸುಂದರಿ ಅಮ್ಮನವರು ನೆಲೆಸಿದ್ದು, ಸೋಮವಾರ ಬೆಳಿಗ್ಗೆ 12 ಗಂಟೆಗೆ ಶ್ರೀ ಅವಿಮುಕ್ತಶ್ವರ ದೇವಾಲಯದಲ್ಲಿ ಉತ್ಸವ ಮೂರ್ತಿಗಳಿಗೆ ಶ್ರದ್ಧಾಭಕ್ತಿಯಿಂದ ಶಾಸಕ ಶರತ್ ಬಚ್ಚೇಗೌಡ, ಸಂಚಾಲಕ ಕೇಶವ ಮೂರ್ತಿ, ತಹಸೀಲ್ದಾರ್ ಸೋಮಶೇಖರ್ ಪೂಜೆ ಸಲ್ಲಿಸುವ ಮೂಲಕ ತಾಲೂಕು ಕಚೇರಿ ಮುಂಭಾಗದಲ್ಲಿ ಮಧ್ಯಾಹ್ನ 1.05ಕ್ಕೆ ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.
ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಶರತ್ ಬಚ್ಚೇಗೌಡ, ಅವಿಮುಕೇಶ್ವರ ಬ್ರಹ್ಮರಥೋತ್ಸವ ಹಾಗೂ ದೌಪದಮ್ಮ ಕರಗೋತ್ಸವ ಸೇರಿ ಆಚರಿಸುವ ಹಬ್ಬವಾಗಿದ್ದು 1904ರಿಂದ ಹೊಸಕೋಟೆಯಲ್ಲಿ ನಿರಂತರವಾಗಿ ಆಚರಿಸಲಾಗುತ್ತಿದೆ. ರಥೋತ್ಸವ ತನ್ನದೇ ಆದ ಇತಿಹಾಸ ಹೊಂದಿದ್ದು ಮುಂದಿನ ವರ್ಷ ಹೊಸ ರಥ ನಿರ್ಮಿಸಿ ಮತ್ತಷ್ಟು ಅದ್ದೂರಿಯಾಗಿ ಹಬ್ಬ ಆಚರಿಸಲಿದ್ದೇವೆ. ಈಗಾಗಲೆ 60 ಲಕ್ಷ ವೆಚ್ಚದಲ್ಲಿ ರಥಕ್ಕೆ ಮರದ ತುಂಡುಗಳನ್ನು ಹುಣಸೂರಿನಿಂದ ತರಲಾಗಿದೆ.ಮುಂದಿನ ವರ್ಷ ಸಂಪೂರ್ಣವಾಗಿ ಹೊಸತೇರು ನಿರ್ಮಿಸಲಾಗುತ್ತದೆ. ಮುಂದಿನ ವರ್ಷ ರಥೋತ್ಸವ ಮತ್ತಷ್ಟು ಮೆರಗನ್ನು ನೀಡಲಿದೆ ಎಂದು ತಿಳಿಸಿದರು. ತಾಲೂಕು ಶಾಂತಿ ಸಮೃದ್ಧಿಯಿಂದ ಮಳೆ ಬೆಳೆಗಳಿಂದ ಅಭಿವೃದ್ಧಿಯಾಗಲಿ ಎಂದು ಅವಿಮುಕ್ತಶ್ವರ ಸ್ವಾಮಿ ಮತ್ತು ತ್ರಿಪುರ ಸುಂದರಿ ಅಮ್ಮನವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು.
ನಂತರ ರಥೋತ್ಸವದ ಮುಖ್ಯ ಸಂಚಾಲಕ ಕೇಶವ ಮೂರ್ತಿ ಮಾತನಾಡಿ, ಈ ಬಾರಿ ವಿಶೇಷವಾಗಿ ರಥವನ್ನು ಅಲಂಕರಿಸಿದ್ದು ತೇರು ಬೀದಿಯಲ್ಲಿ ಮೈಸೂರು ದಸರಾ ಮಾದರಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ರಥೋತ್ಸವ ಯಶಸ್ವಿಯಾಗಿ ಜರುಗಿದ್ದು ಸಹಕರಿಸಿದ ಎಲ್ಲರಿಗೂ ಅಭಿನಂದನೆ ತಿಳಿಸಿದರು.
ಸಾವಿರಾರು ಮಹಿಳೆಯರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಯುವಕರು. ಹಿರಿಯರು, ಮಹಿಳೆಯರು ತೇರಿಗೆ ಬಾಳೆ ಹಣ್ಣು, ದವನ ಎಸೆದು ತಮ್ಮ ಹರಕೆಗಳನ್ನು ಅರ್ಪಿಸಿದರು.
ಅದರಲ್ಲೂ ವಿಶೇಷವಾಗಿ ಶಾಸಕರು ಐಪಿಎಲ್ ನಲ್ಲಿ ಈ ಸಲ ಆರ್ಸಿಬಿ ಕಪ್ ಗೆಲ್ಲುವು ಸಾಧಿಸಲಿ ಎಂದು ಬಾಳೆಹಣ್ಣು ಅನ್ನು ರಥದ ಕಳಸಕ್ಕೆ ಎಸೆದು ಹರಕೆಯನ್ನು ಮಾಡಿದರು.
ರಥದ ಬೀದಿಯಲ್ಲಿ ಗಾಂಭೀರ್ಯದಿಂದ ಹೊರಟ ತೇರಿನ ಮುಂಭಾಗ ಮಂಗಳ ವಾದ್ಯಗಳು ಕರಡಿ ಮಜಲು, ನಂದಿಕೋಲು, ಕೋಲಾಟ ಮತ್ತಿತರೆ ಜಾನಪದ ಕಲಾತಂಡಗಳು ಸಾಥ್ ನೀಡಿದವು. ಭಕ್ತ ಸಮೂಹ ಸ್ವಾಮಿಗೆ ಜಯಕಾರ ಹಾಕುತ್ತಾ ಸೂರುಬೆಲ್ಲ ಮೆಣಸು, ಬಾಳೆಹಣ್ಣುಗಳನ್ನು ತೇರಿಗೆ ಎಸೆಯುವ ಮೂಲಕ ತಮ್ಮ ಹರಕೆ ಅರ್ಪಿಸಿ ಪುನೀತ ಭಾವದೊಂದಿಗೆ ತಮ್ಮ ಭಕ್ತಿ ಸಮರ್ಪಿಸುತ್ತಿದ್ದ ದೃಶ್ಯ ಕಂಡು ಬಂದಿತು.
ತೇರು ಬೀದಿಗಳಲ್ಲಿ ಅಲ್ಲಲ್ಲಿ ಮನೆಗಳ ಮುಂದೆ ಜಾತ್ರೆಯಲ್ಲಿ ಮಜ್ಜಿಗೆ, ಪಾನಕ, ಕೋಸಂಬರಿ ವಿತರಣೆ ಹಾಗು ಅನ್ನ ಸಂತರ್ಪಣೆ ನೆರವೇರಿತು.
ಅವಿಮುಕ್ತಶ್ವರಗೆ ಎಂಟಿಬಿ ನಾಗರಾಜ್ ವಿಶೇಷ ಪೂಜೆ:
ಹೊಸಕೋಟೆಯ ಇತಿಹಾಸ ಪ್ರಸಿದ್ದ ಶ್ರೀ ಅವಿಮುಕೇಶ್ವರಸ್ವಾಮಿ ಬ್ರಹ್ಮ ರಥೋತ್ಸವದ ಪ್ರಯುಕ್ತ ಮಾಜಿ ಸಚಿವ ಎಂಟಿಬಿ ನಾಗರಾಜ್ ಅವಿಮುಕ್ತೆಶ್ವರ ದೇವಾಲಯಕ್ಕೆ ಮಾಜಿ ಸಚಿವ ಎಂಟಿಬಿ ನಾಗರಾಜ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು ಹೊಸಕೋಟೆ ಅವಿಮುಕೇಶ್ವರ ಬ್ರಹ್ಮ ರಥೋತ್ಸವ ಇತಿಹಾಸ ಪ್ರಸಿದ್ಧವಾದುದು. ಚೋಳರ ಕಾಲದಲ್ಲಿ ಸ್ಥಾಪನೆಗೊಂಡಿರುವ ದೇವಸ್ಥಾನದಲ್ಲಿ ಇಂದಿನವರೆಗು ಶ್ರದ್ಧಾಭಕ್ತಿ ಯಿಂದ ಆಚರಿಸಿಕೊಂಡು ಬರುತ್ತಿದ್ದೇವೆ. ಪ್ರಮುಖವಾಗಿ ನನ್ನ ಅಧಿಕಾರದ ಅವಧಿಯಲ್ಲಿ ದೇವಾಲಯದ ಅಭಿವೃದ್ಧಿಗೆ ಒತ್ತು ನೀಡಿ ಕಾಯಕಲ್ಪಕೊಟ್ಟಿದ್ದೆ. ಅವಿಮುಕೇಶ್ವರ ಹೊಸಕೋಟೆ ನಗರದ ಜನತೆಯ ಆರಾಧ್ಯ ದೇವರು ಎಲ್ಲಾರಿಗೂ ಭಗವಂತ ಒಳಿತು ಮಾಡಲಿ ಎಂದರು.

