22 ವರ್ಷಗಳ ಹಿಂದೆ 3ನೇ ಹೆಂಡತಿಯನ್ನ ಕೊಂದು ಲಗೇಜ್ ಎಂದು ಬಸ್ ನಲ್ಲಿ ಕಳುಹಿಸಿ ತಲೆ ಮರೆಸಿಕೊಂಡಿದ್ದ ವ್ಯಕ್ತಿ ಕೊನೆಗೂ ಅರೆಸ್ಟ್.
ಕ್ರೈಮ್ಜಿಲ್ಲಾ ಸುದ್ದಿ


ಕೊಪ್ಪಳ: 22 ವರ್ಷಗಳ ಹಿಂದೆ 3ನೇ ಹೆಂಡತಿಯನ್ನ ಕೊಂದು ಲಗೇಜ್ ಎಂದು ಬಸ್ ನಲ್ಲಿ ಕಳುಹಿಸಿ ತಲೆ ಮರೆಸಿಕೊಂಡಿದ್ದ ವ್ಯಕ್ತಿ ಕೊನೆಗೂ ಅರೆಸ್ಟ್..
ಸೂಮಾರು 22 ವರ್ಷಗಳ ಹಿಂದೆ ಮೂರನೇ ಪತ್ನಿಯನ್ನು ಕೊಂದು ತಲೆಮರೆಸಿಕೊಂಡಿದ್ದ 75 ವರ್ಷದ ವೃದ್ಧನನ್ನು ಬಂಧಿಸುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಹಾಲದಾಳ ಗ್ರಾಮದ 75 ವರ್ಷದ ವೃದ್ಧ ಹನುಮಂತ ಹುಸೇನಪ್ಪ ಬಂಧಿತ ವ್ಯಕ್ತಿ.
ಮೊದಲ ಹೆಂಡತಿ ಸಾವು ಕಂಡ ಬಳಿಕ 2ನೇ ಮದುವೆಯಾಗಿದ್ದ. ಆದರೆ, ಗಂಡನ ಜೊತೆ ಜಗಳ ಮಾಡಿಕೊಂಡು ಈಕೆ ಬಿಟ್ಟು ಹೋಗಿದ್ದಳು. ಆದರೆ, ಹನುಮಂತ ಹುಸೇನಪ್ಪ ಸರ್ಕಾರಿ ನೌಕರಿ ಇದ್ದ ಕಾರಣಕ್ಕೆ ಕೊಪ್ಪಳ ತಾಲ್ಲೂಕಿನ ಇಂದರಗಿ ಗ್ರಾಮದ ರೇಣುಕಮ್ಮ ಹೆಸರಿನ ಮಹಿಳೆಯೊಬ್ಬರನ್ನ 3ನೇ ಮದುವೆ ಆಗಿದ್ದ. ಬಳಿಕ ಗಂಗಾವತಿ ನಗರದ ಲಕ್ಷ್ಮಿ ಕ್ಯಾಂಪಿನಲ್ಲಿ ಹೆಂಡತಿ ಜೊತೆ ವಾಸ ಮಾಡುತ್ತಿದ್ದ. ವೈಯಕ್ತಿಕ ಜಗಳದ ಕಾರಣಕ್ಕೆ 2002 ರಲ್ಲಿ ಪತ್ನಿ ರೇಣುಕಮ್ಮನನ್ನ ಕೊಚ್ಚಿ ಕೊಲೆ ಮಾಡಿದ್ದ ಹನುಮಂತಪ್ಪ ಬಸ್‌ನಲ್ಲಿ ಸಾಗಿಸಿದ್ದ. ಗೋಣಿಚೀಲದಲ್ಲಿ ಮಹಿಳೆಯ ಶವ ತುಂಬಿ ಇದರಲ್ಲಿ ಲಗೇಜ್ ಇದೆಯೆಂದೂ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕಿನ ಸರ್ಕಾರಿ ಬಸ್ಸಿನಲ್ಲಿ ಕಳುಹಿಸಿದ್ದ. ಆದರೆ, ಕಂಪ್ಲಿಗೆ ಹೋದ ಬಳಿಕ ಗೋಣಿ ಚೀಲದಲ್ಲಿ ಶವ ಕಂಡಿದ್ದ ಕಂಡಕ್ಟರ್, ಪೊಲೀಸ್ ಠಾಣೆಗೆ ಬಸ್ ತೆಗೆದುಕೊಂಡು ಹೋಗಿ ಗಂಗಾವತಿ ನಗರ ಠಾಣೆಯಲ್ಲಿ ದೂರು ನೀಡಿದ್ದ.
ಆ ಕ್ರೂರ ಅಪರಾಧ ಆ ಸಮಯದಲ್ಲಿ ಇಡೀ ಕೊಪ್ಪಳ ಜಿಲ್ಲೆಯನ್ನೆ ಬೆಚ್ಚಿಬೀಳಿಸಿತ್ತು ಮತ್ತು ಗಂಗಾವತಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವ್ಯಾಪಕ ಶೋಧ ಮತ್ತು ತನಿಖೆಗಳ ಹೊರತಾಗಿಯೂ, ಆರೋಪಿ ಹನುಮಂತಪ್ಪ ಬಂಧನದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಸುಮಾರು 22 ವರ್ಷಗಳ ಕಾಲ, ಯಾವುದೇ ಸ್ಪಷ್ಟ ಕುರುಹುಗಳನ್ನು ಬಿಡದೆ ಹನುಮಂತಪ್ಪ ನಾಪತ್ತೆಯಾಗಿದ್ದ. ಕೆಲವು ದಿನಗಳ ಹಿಂದೆ ಆರೋಪಿಯು ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನಲ್ಲಿರುವ ತನ್ನ ಹುಟ್ಟೂರು ಹಲಧಾಳಕ್ಕೆ ಮರಳಿದ್ದ. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಹಲಧಾಳಕ್ಕೆ ತೆರಳಿದ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ