ಮಾಂಗಲ್ಯಧಾರಣೆ ಬಳಿಕ ಪರೀಕ್ಷಾ ಕೇಂದ್ರಕ್ಕೆ ಬಂದು ಬಿಕಾಂ ಫೈನಲ್ ಪರೀಕ್ಷೆ ಬರೆದ ನವವಧುಗಳು
ರಾಜ್ಯ


ಹಾಸನ/ಚಾಮರಾಜನಗರ: ರಾಜ್ಯಾದ್ಯಂತ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿದ್ದು,ಪರೀಕ್ಷೆ ದಿನವೇ ವಿದ್ಯಾರ್ಥಿನಿಯರಿಗೆ ಮದುವೆ ದಿನಾಂಕ ನಿಗದಿಯಾದರಿಂದ ಹಾಸನ ಮತ್ತು ಚಾಮರಾಜನಗರ ಜಿಲ್ಲೆಯ ಯುವತಿಯರಿಬ್ಬರು ಮದುವೆ ಮುಗಿಸಿಕೊಂಡು ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿದ್ದು.ಇಬ್ಬರು ಯುವತಿಯರು ತಾಳಿ ಕಟ್ಟಿಸಿಕೊಂಡು ತಮ್ಮ ಅಂತಿಮ ವರ್ಷದ ಬಿ.ಕಾಂ ಪರೀಕ್ಷೆಗೆ ಹಾಜರಾಗಿದ್ದಾರೆ.
ಹಾಸನದ ಗುಡ್ಡೆನಹಳ್ಳಿಯ ದಿನೇಶ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಯುವತಿ ಕವನ, ಮಾಂಗಲ್ಯ ಧಾರಣೆ ಆಗುತ್ತಲೇ ಪರೀಕ್ಷಾ ಕೇಂದ್ರಕ್ಕೆ ದೌಡಾಯಿಸಿ ಬಂದು ಪರೀಕ್ಷೆ ಬರೆದಿದ್ದಾರೆ. ಅಂತಿಮ ವರ್ಷದ ಬಿಕಾಂ ಆದಾಯ ತೆರಿಗೆ 2 ವಿಷಯದ ಪರೀಕ್ಷೆಗೆ ಕವನ ಹಾಜರಾಗಿದ್ದಾರೆ.
ಹಾಸನದ ಪ್ರೈಡ್ ಪದವಿ ಕಾಲೇಜಿನಲ್ಲಿ ಅಂತಿಮ ಬಿಕಾಂ ಓದುತ್ತಿರೊ ಕವನ. ಪರೀಕ್ಷೆ ಬರೆಯಬೇಕು ಎಂಬ ಆಸೆ ಹೊಂದಿದ್ದಳು. ಈಕೆಯ ಆಸೆಗೆ ಸಾಥ್ ನೀಡಿರುವ ಪೋಷಕರು ಮದುವೆ ನಡುವೆಯು ಮಗಳು ಪರೀಕ್ಷೆ ಬರೆಯಲು ಅವಕಾಶ ನೀಡಿದ್ದಾರೆ. ಮುಹೂರ್ತ ಮುಗಿಯುತ್ತಿದ್ದಂತೆ ನವವಧು ಕವನಳನ್ನು ಆಕೆಯ ಅಣ್ಣ ಕಾರ್ತಿಕ್ ಪರೀಕ್ಷೆ ಬರೆಯಲು ಕರೆತಂದಿದ್ದಾರೆ.
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲೂ ಇಂತಹದೆ ಘಟನೆ ನಡೆದಿದ್ದು. ಕೊಳ್ಳೇಗಾಲದ ಯುವತಿ ಆರ್. ಸಂಗೀತ ನಂಜನಗೂಡು ನಿವಾಸಿ ಯೋಗೇಶ್ ಜೊತೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಮದುವೆಯ ನಡುವೆ ಶಿಕ್ಷಣದ ಮಹತ್ವ ಅರಿತಿರುವ ಯುವತಿ ಮೂಹರ್ತ ಮುಗಿದ ಕೂಡಲೇ ಹಸಮಣೆಯಿಂದ ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ ಪರೀಕ್ಷೆ ಬರೆದಿದ್ದಾರೆ.
ಪರೀಕ್ಷೆ ಅನ್ನೋದು ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟ. ಈ ವಿದ್ಯಾರ್ಥಿಗಳು ಹಸೆಮಣೆ ಏರಿದ ನವವಧುಗಳು ಮಾಂಗಲ್ಯ ಧಾರಣೆ ಆಗುತ್ತಲೇ ಪರೀಕ್ಷಾ ಕೇಂದ್ರಕ್ಕೆ ದೌಡಾಯಿಸಿ ಬರೆಯುವ ಮೂಲಕ ಮಾದರಿಯಾಗಿದ್ದಾರೆ.