ಯಾವುದೇ ಗೊಂದಲ ಬೇಡ ಸಮೀಕ್ಷೆ ವೇಳೆ ಜಾತಿ ಮತ್ತು ಉಪಜಾತಿ ಕಲಂ ನಲ್ಲಿ ಮಡಿವಾಳ ಎಂದೇ ಬರೆಯಿಸಿ: ಮುನಿಶಾಮಯ್ಯ

ಸ್ಥಳೀಯ ಸುದ್ದಿ

ರಾಘವೇಂದ್ರ ಹೆಚ್.ಎ

9/19/20251 min read

ದೊಡ್ಡಬಳ್ಳಾಪುರ: ತಾಲ್ಲೂಕಿನ ಮಡಿವಾಳ ಜನಾಂಗದ ಜನತೆಯೂ ಯಾವುದೇ ಗೊಂದಲಕ್ಕೆ ಕಿವಿಗೊಡದೇ ರಾಜ್ಯ ಸರ್ಕಾರದ ವತಿಯಿಂದ ನಡೆಸಲಾಗುತ್ತಿರುವ ಮನೆ ಮನೆ ಸಮೀಕ್ಷೆ ವೇಳೆ ಜಾತಿ ಮತ್ತು ಉಪಜಾತಿ ಕಲಂಗಳಲ್ಲಿ ಮಡಿವಾಳ ಎಂದೇ ನಮೂದಿಸಬೇಕು ಎಂದು ದೊಡ್ಡಬಳ್ಳಾಪುರ ತಾಲ್ಲೂಕು ಮಡಿವಾಳರ ಸಂಘದ ಅಧ್ಯಕ್ಷ ಮುನಿಶಾಮಯ್ಯ ಕರೆ ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಾತಿ ಗಣತಿ ಸಂಬಂಧ ಈಗಾಗಲೇ ರಾಜ್ಯದಲ್ಲಿ ನಮ್ಮ ಜನಾಂಗದವರಲ್ಲಿ ಗೊಂದಲದ ವಾತಾವರಣವನ್ನು ಸೃಷ್ಟಿಸಿದ್ದಾರೆ. ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ಮೈಸೂರು ಕರ್ನಾಟಕ ಭಾಗದಲ್ಲಿ ಮಡಿವಾಳ ಜಾತಿ ಸಂಬಂಧ ಬಳಸಲಾಗುವ ಉಪಜಾತಿಗಳನ್ನು ಅಥವಾ ಪದನಾಮಗಳನ್ನು ಅವಶ್ಯವಕವಿರುವುದಿಲ್ಲ. ಬದಲಿಗೆ ಜಾತಿ ಮತ್ತು ಉಪಜಾತಿ ಕಲಂಗಳಲ್ಲಿ ಮಡಿವಾಳ ಎಂಬ ಹೆಸರನ್ನಷ್ಟೆ ಬಳಸಬೇಕು, ಇದರಿಂದ ನಮ್ಮ ಸಮುದಾಯದವರ ಜನಬಲ ತೋರಿಸಿದಂತಾಗುತ್ತದೆ ಮತ್ತು ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಪಡೆಯಲು ನಮಗೂ ಹಕ್ಕಿರುತ್ತದೆ ಎಂದರು.

ರಾಜ್ಯ ಸರ್ಕಾರವು ಈಗ ಜಾತಿ ಗಣತಿ ನಡೆಸುತ್ತಿರುವುದು ನಮಗೆ ವರವಿದ್ದಂತೆ, ಭವಿಷ್ಯದಲ್ಲಿ ರಾಜಕೀಯ, ಸಾಮಾಜಿಕ, ಆರ್ಥಿಕ ಅಭಿವೃದ್ದಿ ಹಿತದೃಷ್ಟಿಯಿಂದ ನಾವು ಸಮೀಕ್ಷೆಯಲ್ಲಿ ಭಾಗವಹಿಸಿ ಸರಿಯಾದ ಮಾಹಿತಿ ನೀಡಬೇಕು, ಸರ್ಕಾರವು ಪದೇ ಪದೇ ಸಮೀಕ್ಷೆ ಮಾಡುವಂತೆ ಆದೇಶಿಸುವುದಿಲ್ಲ ಆದ್ದರಿಂದ ಅವಕಾಶವನ್ನು ನಾವು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಮಡಿವಾಳ ಸಮುದಾಯವರು ಕೇವಲ 6 ಲಕ್ಷ ಜನರಿದ್ದಾರೆ ಎಂದು ಮಾಹಿತಿ ನೀಡಲಾಗಿದೆ. ಆದರೇ, ರಾಜ್ಯದಲ್ಲಿ ನಮ್ಮ ಜನಾಂಗದವರು ಸುಮಾರು ಸುಮಾರು 15ರಿಂದ 20. ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅದೇ ರೀತಿ ತಾಲ್ಲೂಕಿನಲ್ಲಿಯೂ ನಮ್ಮ ಜನಾಂಗದವರು ಸುಮಾರು 6 ರಿಂದ 7 ಸಾವಿರ ಜನರಿದ್ದಾರೆ ಎಂದರು.

ಈ ವೇಳೆ, ಉಪಾಧ್ಯಕ್ಷರಾದ ನರಸಿಂಹಮೂರ್ತಿ, ವೆಂಕಟಾಚಲ, ಖಜಾಂಚಿ ಶ್ರೀನಿವಾಸ್ ನಿರ್ದೇಶಕರು ನಾರಾಯಣಪ್ಪ ಮುನಿಯಪ್ಪ, ದೇವರಾಜು ರಾಜಘಟ್ಟ ಸೇರಿದಂತೆ ಇತರರು ಇದ್ದರು.

ಪ್ರಜಾ ಭಾರತ್ ನ್ಯೂಸ್ ವೆಬ್ ಪೋರ್ಟಲ್ ವಾಟ್ಸಪ್ ಗ್ರೂಪ್ ಸೇರಲು 👇👇Follow this link to join my WhatsApp group : https://chat.whatsapp.com/Fj6L4Eak7N994zl2QHSpHK