ಟಾಲಿವುಡ್ ಸೂಪರ್ ಸ್ಟಾರ್ Mahesh Babuಗೆ ಸಂಕಷ್ಟ, ED ನೋಟಿಸ್!

ದೇಶ/ವಿದೇಶ

ರಾಘವೇಂದ್ರ ಹೆಚ್.ಎ

4/22/20251 min read

ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬುಗೆ ಜಾರಿ ನಿರ್ದೇಶನಾಲಯ ಶಾಕ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆಮನಿಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಲಿವುಡ್ ಸ್ಟಾರ್ ನಟ ಮಹೇಶ್ ಬಾಬುಗೆ ಜಾರಿ ನಿರ್ದೇಶನಾಲಯ (ED) ನೋಟಿಸ್ ಕೊಟ್ಟಿದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಸುರಾನ ಗ್ರೂಪ್ ಮತ್ತು ಸಾಯಿಸೂರ್ಯ ಡೆವಲಪರ್ಸ್ ಪ್ರಕರಣದಲ್ಲಿ ಇದೇ 28ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ನಲ್ಲಿ ತಿಳಿಸಲಾಗಿದೆ.

ಸಂಸ್ಥೆಯ ಪ್ರಚಾರಕ್ಕಾಗಿ ಮಹೇಶ್ ಬಾಬು ಅವರು 3.4 ಕೋಟಿ ರೂ.ಗಳನ್ನು ತೆಗೆದುಕೊಂಡಿದ್ದರು ಎನ್ನಲಾಗಿದೆಆಂಗ್ಲ ಪತ್ರಿಕೆಯೊಂದು ವರದಿ ಮಾಡಿರುವಂತೆ, 'ಸಾಯಿ ಸೂರ್ಯ ಡೆವಲಪರ್ಸ್ ಮತ್ತು ಸುರಾನಾ ಗ್ರೂಪ್ ಪ್ರಾರಂಭಿಸಿದ ರಿಯಲ್ ಎಸ್ಟೇಟ್ ಯೋಜನೆಗಳನ್ನು ಪ್ರಚಾರ ಮಾಡಲು ಮಹೇಶ್ ಅನುಮೋದನೆ ನೀಡಿದ್ದರು.

ಮಹೇಶ್ ಬಾಬು ಜಾಹಿರಾತು ಒಪ್ಪಂದಕ್ಕಾಗಿ 5.9 ಕೋಟಿ ರೂ.ಗಳನ್ನು ಪಡೆದಿದ್ದು, ಪೈಕಿ ಚೆಕ್ ಮೂಲಕ 3.4 ಕೋಟಿ ರೂ.ಗಳು ಮತ್ತು ನಗದು ಮೂಲಕ 2.5 ಕೋಟಿ ರೂ.ಗಳನ್ನು ಪಡೆದಿದ್ದಾರೆ. ಈಗ, ನಗದು ಪಾವತಿ ಇಡಿ ಪರಿಶೀಲನೆಗೆ ಒಳಪಟ್ಟಿದೆ.

ವಂಚನೆ ಆರೋಪ

ಸುರಾನ ಗ್ರೂಪ್ ಮತ್ತು ಸಾಯಿಸೂರ್ಯ ಡೆವಲಪರ್ಸ್ ಸಂಸ್ಥೆಗಳ ವಿರುದ್ಧ ಇದೀಗ ವಂಚನೆ ಆರೋಪ ಕೇಳಿಬಂದಿದ್ದು, ತೆಲಂಗಾಣ ಪೊಲೀಸರು ಭಾಗ್ಯನಗರ ಪ್ರಾಪರ್ಟೀಸ್ ಲಿಮಿಟೆಡ್ ನರೇಂದ್ರ ಸುರಾನ ಮತ್ತು ಸಾಯಿ ಸೂರ್ಯ ಡೆವಲಪರ್ಸ್ ಸತೀಶ್ ಚಂದ್ರ ಗುಪ್ತಾ ವಿರುದ್ಧ ಹಲವು ಎಫ್ಐಆರ್ಗಳನ್ನು ದಾಖಲಿಸಿದ್ದಾರೆ.

ಇಬ್ಬರು ಅನಧಿಕೃತ ಲೇಔಟ್ಗಳಲ್ಲಿ ಪ್ಲಾಟ್ಗಳನ್ನು ಮಾರಾಟ ಮಾಡುವ ಮೂಲಕ, ಒಂದೇ ಪ್ಲಾಟ್ಗಳನ್ನು ಹಲವು ಬಾರಿ ಮರುಮಾರಾಟ ಮಾಡುವ ಮೂಲಕ ಮತ್ತು ನೋಂದಣಿಗಳ ಬಗ್ಗೆ ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಖರೀದಿದಾರರನ್ನು ವಂಚಿಸಿದ್ದಾರೆ ಎಂಬ ಆರೋಪವಿದೆ.

ಇಡಿ ಶೋಧ

ಏಪ್ರಿಲ್ 16ರಂದು ಇಡಿ ಅಧಿಕಾರಿಗಳು ಹೈದರಾಬಾದ್ನಲ್ಲಿ ಶೋಧ ನಡೆಸಿದ್ದರು. ಸುರಾನ ಗ್ರೂಪ್ ಮತ್ತು ಸಾಯಿಸೂರ್ಯ ಡೆವಲಪರ್ಸ್ ಕಚೇರಿಗಳು ಹಾಗೂ ಕಂಪನಿಗಳ ಮುಖ್ಯಸ್ಥರ ಮನೆಗಳ ಮೇಲೆ ದಾಳಿ ನಡೆಸಿತ್ತು. ಇದಾದ ಬೆನ್ನಲ್ಲೇ ಇಡಿ ಆಧಿಕಾರಿಗಳು ಮಹೇಶ್ ಬಾಬುಗೆ ನೋಟಿಸ್ ಜಾರಿ ಮಾಡಿದ್ದು, ಏಪ್ರಿಲ್ 28 ಬೆಳಿಗ್ಗೆ 10:30ಕ್ಕೆ ಮಹೇಶ್ ಬಾಬು ಹೈದರಾಬಾದ್ನಲ್ಲಿ ವಿಚಾರಣೆಗೆ ಹಾಜರಾಗಬೇಕಿದೆ.

ಸಂಕಷ್ಟ ತಂದ ಜಾಹಿರಾತು

ಮಹೇಶ್ ಬಾಬು ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಸಾಯಿಸೂರ್ಯ ಡೆವಲಪರ್ಸ್ ಜಾಹೀರಾತಿನಲ್ಲಿ ನಟಿಸಿದ್ದರು. ಇದೇ ಜಾಹಿರಾತು ವಿಚಾರವಾಗಿ ಇದೀಗ ಮಹೇಶ್ ಬಾಬು ಅವರಿಗೆ ಸಂಕಷ್ಟ ಎದುರಾಗಿದೆ.