ನಾಳೆ ವಿಶ್ವ ಯೋಗ ದಿನಾಚರಣೆ, ಟ್ರಸ್ಟ್ ವತಿಯಿಂದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಯೋಗಾಭ್ಯಾಸಕ್ಕೆ ಸಕಲ ಸಿದ್ದತೆ
ಸ್ಥಳೀಯ ಸುದ್ದಿ


ದೊಡ್ಡಬಳ್ಳಾಪುರ : ನಾಳೆ (ಜೂನ್ 21)ರ ಶನಿವಾರ ಬೆಳಿಗ್ಗೆ ನಗರದ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ವಿಶ್ವ ಯೋಗಾಭ್ಯಾಸ ಆಯೋಜನೆ ಮಾಡಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕಿನ ಜನತೆ ಭಾಗವಹಿಸಬೇಕೆಂದು ಪುಷ್ಪಾಂಡಜಮುನಿ ಆಶ್ರಮದ ದಿವ್ಯಜ್ಞಾನಾನಂದ ಸ್ವಾಮೀಜಿ ತಿಳಿಸಿದರು.
ನಗರದಲ್ಲಿ ವಿಶ್ವ ಯೋಗ ದಿನಾಚರಣೆ ಟ್ರಸ್ಟ್ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ಕಡಿಮೆ ಸಂಪನ್ಮೂಲವಿದ್ದರೂ ಜಿಲ್ಲಾ ಮಟ್ಟದ ಕಾರ್ಯಕ್ರಮದಂತೆ ಪ್ರತಿ ವರ್ಷವೂ ಆಚರಿಸಲಾಗುತ್ತದೆ. ತಾಲ್ಲೂಕಿನ ಎಲ್ಲಾ ಯೋಗಪಟುಗಳು, ಯೋಗದ ಬಗ್ಗೆ ಅಭಿರುಚಿ ಹೊಂದಿರುವ ಆತ್ಮೀಯರು ಒಳಗೊಂಡು ಈ ಕಾರ್ಯಕ್ರಮ ರೂಪಿಸಲಾಗಿದೆ. ದೊಡ್ಡಬಳ್ಳಾಪುರ ತಾಲ್ಲೂಕಿನ ಜನತೆಗೆ ಯೋಗಾಸನ, ಪ್ರಾಣಾಯಾಮ ನೀಡುವ ಮೂಲಕ ಅವರಿಗೆ ಉತ್ತಮ ಆರೋಗ್ಯ, ನೆಮ್ಮದಿ ಜೊತೆಗೆ ಉತ್ತಮ ಜೀವನಶೈಲಿ ಕಲ್ಪಿಸುವುದೇ ನಮ್ಮೆಲ್ಲರ ಮುಖ್ಯ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮವು ಶನಿವಾರ ಬೆಳಗ್ಗೆ 6:30 ಕ್ಕೆ ಪ್ರಾರಂಭವಾಗಲಿದ್ದು ಕಾರ್ಯಕ್ರಮದ ಮೊದಲು ಸ್ಥಳೀಯ ಯೋಗಪಟುಗಳು,ಯೋಗ ವಿದ್ಯಾರ್ಥಿಗಳು ಹಾಗೂ ಯೋಗ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಯೋಗ ಪ್ರದರ್ಶನ ಕಾರ್ಯಕ್ರಮ ಇರುತ್ತದೆ. ಕಾರ್ಯಕ್ರಮವನ್ನು ವಿಳಂಬ ಮಾಡದೆ ಸಮಯಕ್ಕೆ ಸರಿಯಾಗಿ ಪ್ರಾರಂಭಿಸಲಾಗುವುದು . ಭಾರತ ಸರ್ಕಾರ ಆಯುಷ್ ಇಲಾಖೆ ಈಗಾಗಲೇ ಸೂಚಿಸಿರುವ ಯೋಗಾಸನಗಳನ್ನು ತಾಲೂಕಿನ ಹಿರಿಯರಿಗೆ ನಮ್ಮ ಟ್ರಸ್ಟ್ ನ ಸಹಯೋಗ ಹಾಗೂ ತಾಲ್ಲೂಕಿನ ದಾನಿಗಳ ನೆರವಿನಿಂದ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಕಳೆದ ಏಳು ದಿನಗಳಿಂದ ನಿರಂತರವಾಗಿ ಕುಳಿತು ಮಾಡುವ ಯೋಗಾಸನ, ಪ್ರಾಣಾಯಾಮ, ವ್ಯಾಯಾಮ ಅಭ್ಯಾಸ ಮಾಡಿಸುತ್ತಿದ್ದು, ಹೊಸದಾಗಿ ಬರುವ ಸಾರ್ವಜನಿಕರಿಗೆ ಈಗಾಗಲೇ ಅಭ್ಯಾಸ ಮಾಡಿರುವ ನಮ್ಮ ಶಿಬಿರಾರ್ಥಿಗಳು ಸಹಾಯ ಮಾಡಲಿದ್ದಾರೆ ಎಂದರು.
ಈ ವೇಳೆ ಸಭೆಯಲ್ಲಿ ಟ್ರಸ್ಟ್ ನ ಪದಾಧಿಕಾರಿಗಳಾದ ಅಧ್ಯಕ್ಷರಾದ ಕೆ.ಎಂ. ಹನುಮಂತರಾಯಪ್ಪ, ಉಪಾಧ್ಯಕ್ಷರಾದ ತ.ನ.ಪ್ರಭುದೇವ್,ಡಾ. ವಿಜಯ ಕುಮಾರ್, ಕಾರ್ಯದರ್ಶಿಗಳಾದ ಬಿ.ಜಿ. ಅಮರನಾಥ್, ಸಹಕಾರ್ಯದರ್ಶಿಗಳಾದ ಎಂ.ಕೆ. ವತ್ಸಲ, ಖಜಾಂಚಿಗಳಾದ ಪಿ ಕೆ ಶ್ರೀನಿವಾಸ್, ಪ್ರಮುಖರಾದ ಬಿ ಎಲ್ ಸೀತಾರಾಮ್ , ಡಿ ವಿ ಗೀರಿಶ್, ಡಿ ಪಿ ಗೋಪಾಲ್ ಸೇರಿದಂತೆ ಹಲವರು ಹಾಜರಿದ್ದರು.