ಹಾಡೋನಹಳ್ಳಿ ಘಾಟಿ ಮುಖ್ಯ ರಸ್ತೆಯಲ್ಲಿ ಮತ್ತೊಂದು ಬಾರ್​ ಆರಂಭಕ್ಕೆ ಸಿದ್ದತೆ ಗ್ರಾಮಸ್ಥರಿಂದ ವಿರೋಧ

ಸ್ಥಳೀಯ ಸುದ್ದಿ

ರಾಘವೇಂದ್ರ ಹೆಚ್.ಎ

12/19/20251 min read

ದೊಡ್ಡಬಳ್ಳಾಪುರ : ತಾಲೂಕಿನ ಹಾಡೋನಹಳ್ಳಿ ಗ್ರಾಮದಲ್ಲಿನ ಗ್ರಾಮಸ್ಥರನ್ನು ಮತ್ತು ವಿದ್ಯಾರ್ಥಿ ಯುವ ಸಮೂಹವನ್ನು ಕುಡಿತದ ಚಟಕ್ಕೆ ದೂಡಲು ಉದ್ದೇಶಿಸಿ ಗ್ರಾಮದಲ್ಲಿ ಈಗಾಗಲೇ ಇರುವ ಬಾರ್​ ಜೊತೆಗೆ ಮತ್ತೊಂದು ಬಾರ್​ ಆರಂಭಕ್ಕೆ ಸಕಲ ಸಿದ್ದತೆ ಕೈಗೊಳ್ಳಲಾಗುತ್ತಿದೆ ಇದಕ್ಕೆ ಅವಕಾಶಕೊಡಬಾಡದು ಎಂದು ಗ್ರಾಮಸ್ಥರ ಪರವಾಗಿ ಹಾಡೋನಹಳ್ಳಿ ಗ್ರಾಮಸ್ಥರ ಪರವಾಗಿ ಪಂಚಾಯ್ತಿ ಸದಸ್ಯರಾದ ಆನಂದ್​ ಕುಮಾರ್​ ಹೆಚ್​.ಕೆ ಅವರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಕುರಿತು ಪ್ರಜಾಭಾರತ್​ ವೆಬ್​ ಪೋರ್ಟಲ್​ನೊಂದಿಗೆ ಪ್ರತಿಕ್ರಿಯಿಸಿದ ಅವರು, ಗ್ರಾಮದಲ್ಲಿ ಈಗಾಗಲೇ ಒಂದು ಬಾರ್ ಇರುವಾಗಲೇ ಮತ್ತೊಂದು ಸಿಎಲ್ 7 ಬಾರ್ ನಿರ್ಮಾಣ ಮಾಡಲಾಗುತ್ತಿದೆ, ಗ್ರಾಮದಲ್ಲಿ ಶಾಂತಿ ವಾತಾವರಣ ಮತ್ತು ಗ್ರಾಮಸ್ಥರ ಆರೋಗ್ಯದ ದೃಷ್ಠಿಯಿಂದ ಬಾರ್ ಗೆ ನೀಡಿರುವ ಪರವಾನಿಗೆ ರದ್ದು ಮಾಡಬೇಕೆಂದು ಅಬಕಾರಿ ಇನ್ಸ್ ಪೇಕ್ಟರ್ ರಾಘವೇಂದ್ರರವರಿಗೆ ಮನವಿ ಮಾಡಲಾಗಿದೆ ಎಂದರು.

ಹಾಡೋನಹಳ್ಳಿ ಗ್ರಾಮದ ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಮುಖ್ಯರಸ್ತೆಯಲ್ಲಿ ಸಿಎಲ್ 7 ಬಾರ್ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಹಾಡೋನಹಳ್ಳಿ ಗ್ರಾಮದ ಸರ್ಕಲ್ನಲ್ಲಿ ಬಾರ್ ಸ್ಥಾಪಿಸಲಾಗಿದೆ. ಬಾರ್ನಿಂದಾಗಿ ಗ್ರಾಮಸ್ಥರು ನಿತ್ಯ ಕುಡಿತದ ಚಟಕ್ಕೆ ಬಿದ್ದು ಕೆಲಸ ಕಾರ್ಯಗಳಿಗೆ ಹೋಗದೇ ಮನೆಗಳಲ್ಲಿ ಜಗಳಗಳನ್ನಾಡುತ್ತಿದ್ದಾರೆ. ಗ್ರಾಮದಲ್ಲಿ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ನಿತ್ಯ ಸರ್ಕಲ್ ಮಾರ್ಗವಾಗಿಯೇ ಓಡಾಡಬೇಕಾಗುತ್ತದೆ. ಇದರಿಂದ ಮಕ್ಕಳ ಓದುವ ಮನಸ್ಸಿನ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಅಷ್ಟೇ ಅಲ್ಲದೇ ಗ್ರಾಮದ ಯುವ ಜನತೆಯು ಕುಡಿತದ ಚಟಕ್ಕೆ ದಾಸರಾಗುತ್ತಿದ್ದಾರೆ.

ಜೊತೆಗೆ ನಿತ್ಯ ಘಾಟಿ ದೇವಾಲಯಕ್ಕೆ ಬರುವ ಸಾವಿರಾರು ಭಕ್ತಾಧಿಗಳಿಗೆ ಇದರಿಂದ ತೊಂದರೆಯಾಗುತ್ತಿದೆ. ಆದ್ದರಿಂದ ಗ್ರಾಮದ ಸರ್ಕಲ್ನಲ್ಲಿ ಈಗಾಗಲೇ ಇರುವ ಬಾರ್ ಜೊತೆಗೆ ಹೊಸದಾಗಿ ಬಾರ್ ನಿರ್ಮಾಣ ಮಾಡಲು ಮುಂದಾಗಿರುವ ಎರಡೂ ಬಾರ್ಗಳ ಪರವಾನಗಿಯನ್ನು ರದ್ದು ಮಾಡುವಂತೆ ಮನವಿ ಮಾಡಿದ್ದಾರೆ.