Workers Minimum Wages: ಕಾರ್ಮಿಕರ ಕನಿಷ್ಠ ವೇತನ: ರಾಜ್ಯ ಸರ್ಕಾರದಿಂದ ಪರಿಷ್ಕೃತ ಅಧಿಸೂಚನೆ ಪ್ರಕಟ

ರಾಜ್ಯ

ರಾಘವೇಂದ್ರ ಹೆಚ್​​.ಎ

4/12/20251 min read

ಬೆಂಗಳೂರು: ಕಾರ್ಮಿಕರ ಕನಿಷ್ಠ ವೇತನಕ್ಕೆ ಸಂಬಂಧಿಸಿದಂತೆ ಕಾರ್ಮಿಕರ ಇಲಾಖೆ ಪರಿಷ್ಕೃತ ಅಧಿಸೂಚನೆಗಳನ್ನು ಹೊರಡಿಸಿದೆ. ಪರಿಷ್ಕೃತ ಅಧಿಸೂಚನೆ ಪ್ರಕಾರ, ಶೌಚಾಲಯ, ಸ್ನಾನಗೃಹಗಳು, ಒಳ ಚರಂಡಿಗಳನ್ನು ಶುಚಿ ಮಾಡುವ ಕೆಲಸಗಾರರಿಗೆ ದಿನಕ್ಕೆ ರೂ. 989, ತಿಂಗಳಿಗೆ ರೂ. 21,251.30 ಆಗಿದೆ.

ಅತಿ ಕುಶಲ ಎಲೆಕ್ಟ್ರಿಷಿಯನ್‌ಗಳಿಗೆ ದಿನಗೂಲಿ ದಿನಕ್ಕೆ 1,316 ಆಗಿದ್ದು, ತಿಂಗಳಿಗೆ ರೂ. 34,225. 42 ಆಗಿದೆ. ನುರಿತ ಎಲೆಕ್ಟ್ರಿಷಿಯನ್‌ಗಳಿಗೆ ದಿನಗೂಲಿ 1,196.69 ಮತ್ತು ತಿಂಗಳಿಗೆ 31,114.02 ರೂ. ಆಗಿದೆ. ಅರೆ ಕುಶಲ ಕಾರ್ಮಿಕರಿಗೆ ದಿನಕ್ಕೆ ರೂ. 1,087.90 ಆಗಿದ್ದು, ತಿಂಗಳಿಗೆ 28,285 ರೂ. ಆಗಿದೆ.

ಇತರ ವಲಯಗಳಲ್ಲಿ, ಅತಿ ಕೌಶಲ ಕೆಲಸಗಾರರಿಗೆ ಕನಿಷ್ಠ ದೈನಂದಿನ ವೇತನ ರೂ 1,196.69 ರಿಂದ ರೂ. 989 ರಷ್ಟಿರುತ್ತದೆ ಆದರೆ ಕೌಶಲ ರಹಿತ ಕೆಲಸಗಾರರು ದಿನಕ್ಕೆ ರೂ 743 ರಿಂದ ರೂ 899.09 ರವರೆಗಿನ ವೇತನಕ್ಕೆ ಅರ್ಹರಾಗಿರುತ್ತಾರೆ. ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದೆ.

ಕರ್ನಾಟಕ ರಾಜ್ಯದಾದ್ಯಂತ ಕನಿಷ್ಠ ವೇತನ ಕಾಯ್ದೆ 1984ರ ಕಲಂ 5(1) (ಎ) ಹಾಗೂ 5(1) ಬಿ ರಡಿ ಇದುವರೆಗೂ 81 ಅಧಿಸೂಚಿತ ಉದ್ದಿಮೆಗಳಿಗೆ ಪ್ರತ್ಯೇಕವಾದ ವೇತನ ದರಗಳನ್ನು ನಿಗದಿಪಡಿಸಿ, ಪರಿಷ್ಕರಿಸಿ ಅಧಿಸೂಚನೆ ಹೊರಡಿಸಲಾಗುತಿತ್ತು. 2022-23ನೇ ಸಾಲಿನಲ್ಲಿ ವಿವಿಧ ಅನುಸೂಚಿತ ಉದ್ದಿಮೆಗಳಿಗೆ ಸಂಬಂಧಿಸಿದ ಒಟ್ಟು 34 ಅನುಸೂಚಿತ ಉದ್ದಿಮೆಗಳಿಗೆ ಸದರಿ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ಕನಿಷ್ಠ ವೇತನಕ್ಕೆ ಹೆಚ್ಚುವರಿಯಾಗಿ ಶೇ. 5 ರಿಂದ 10 ರಷ್ಟು ಏರಿಕೆ ಮಾಡಿದ ದರಗಳನ್ನು ಪರಿಷ್ಕರಿಸಿ ಅಧಿಸೂಚನೆ ಹೊರಡಿಸಲಾಗಿದೆ.

ಸದರಿ ಅಧಿಸೂಚನೆಗಳನ್ನು ಎಐಟಿಯುಸಿ ಕಾರ್ಮಿಕ ಸಂಘದವರು ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಪ್ರಶ್ನಿಸಿದ್ದರಿಂದ ಅದನ್ನು ಹೈಕೋರ್ಟ್ ರದ್ದುಗೊಳಿಸಿತ್ತು. ಸುಪ್ರೀಂಕೋರ್ಟ್ ನೀಡಿರುವ ಮಾರ್ಗಸೂಚಿಗಳ ಅನ್ವಯ ಕನಿಷ್ಠ ವೇತನ ಲೆಕ್ಕಾಚಾರ ಹಾಕಿ ಹೊಸದಾಗಿ ಅಧಿಸೂಚನೆ ಹೊರಡಿಸುವಂತೆ ನಿರ್ದೇಶಿಸಲಾಗಿತ್ತು.

ವಿವಿಧ ಅನುಸೂಚಿತ ಉದ್ದಿಮೆಗಳಲ್ಲಿ ವಲಯವಾರು ಹಾಗೂ ಕುಶಲವಾರು ವೇತನ ದರದಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಹಾಗೂ ಎಲ್ಲಾ ವರ್ಗದ ಕಾರ್ಮಿಕರಿಗೂ ಸಮಾನವಾದ ಕನಿಷ್ಠ ವೇತನ ದೊರೆಯಬೇಕೆಂಬ ಸದುದ್ದೇಶದಿಂದ ಈ ಹಿಂದೆ ಅನುಸೂಚಿತ ಉದ್ದಿಮೆವಾರು ಪ್ರತ್ಯೇಕವಾಗಿ ಅಧಿಸೂಚನೆಗಳನ್ನು ಹೊರಡಿಸುತ್ತಿದ್ದ ಕ್ರಮದ ಬದಲಾಗಿ ಏಕರೂಪ ಅಧಿಸೂಚನೆ ಹೊರಡಿಸಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.