
ಮಹದೇವಪುರ :- ಬೆಂಗಳೂರು ಈಸ್ಟ್ ತಾಲೂಕು ಮೀಡಿಯಾ ಅಸೋಸಿಯೇಷನ್ ವತಿಯಿಂದ ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್.ರಮೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.
ಬೆಂಗಳೂರು ಪೂರ್ವ ತಾಲೂಕಿನ ಪತ್ರಕರ್ತರು ಕಳೆದ 20 ವರ್ಷಗಳಿಂದ ದಿನಪತ್ರಿಕೆ, ಸಂಜೆ ಪತ್ರಿಕೆ ಹಾಗೂ ಸುದ್ದಿ ವಾಹಿನಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಅವರ ಕ್ಷೇಮಾಭಿವೃದ್ಧಿಗಾಗಿ ವಿಶೇಷ ನಿಧಿ ಮೀಸಲಿಡುವಂತೆ ಒತ್ತಾಯಿಸಿದರು.
ಆರೋಗ್ಯ ಚಿಕಿತ್ಸಾ ವೆಚ್ಚ, ಪತ್ರಕರ್ತರ ಮಕ್ಕಳ ಶಿಕ್ಷಣ ಸೇರಿದಂತೆ ವಿವಿಧ ಕಲ್ಯಾಣ ಕಾರ್ಯಕ್ರಮಗಳಿಗೆ ಸುಮಾರು 1 ಕೋಟಿ ರೂ. ನಿಧಿ ಮೀಸಲಿಡಬೇಕೆಂದು ಮನವಿ ಸಲ್ಲಿಸಿದರು.
ಇದಲ್ಲದೆ, ಈ ಭಾಗದಲ್ಲಿ ಪತ್ರಕರ್ತರಿಗಾಗಿ ಪತ್ರಕರ್ತರ ಭವನ ಇಲ್ಲದಿರುವುದರಿಂದ ಕೆ.ಆರ್ ಪುರಂ ವಲಯ ಕಚೇರಿ ಆವರಣದಲ್ಲಿ ಪತ್ರಕರ್ತರ ಭವನ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳುವಂತೆ ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.
ಮನವಿಗೆ ಸ್ಪಂದಿಸಿದ ಗ್ರೇಟರ್ ಬೆಂಗಳೂರು ಅಥಾರಿಟಿ ಪೂರ್ವ ಆಯುಕ್ತ ಡಿ.ಎಸ್. ರಮೇಶ್ ಅವರು, ಪತ್ರಕರ್ತರ ಭವನ ನಿರ್ಮಾಣಕ್ಕಾಗಿ ಸೂಕ್ತ ಸ್ಥಳ ಗುರುತಿಸಿ ಕಟ್ಟಡ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು. ಜೊತೆಗೆ, ಪತ್ರಕರ್ತರ ಆರೋಗ್ಯ ರಕ್ಷಣೆಗೆ ನಿಧಿ ಮೀಸಲಿಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬೆಂಗಳೂರು ಪೂರ್ವ ತಾಲೂಕು ಪತ್ರಕರ್ತರು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
