ಚೆನ್ನೈ: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ, ರಾಜಕಾರಣಿ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ ಅವರು ತಿರುಚ್ಚಿ (ಪೂರ್ವ) ಹಾಗೂ ಚೆನ್ನೈನ ಪೆರಂಬೂರು ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಒಟ್ಟು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದಾರೆ.
ರವಿವಾರ ಚೆನ್ನೈನಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿ ಮಾತನಾಡಿದ ವಿಜಯ್, ಜನಕೇಂದ್ರಿತ ರಾಜಕಾರಣ ಮಾಡುವುದಾಗಿ ಭರವಸೆ ನೀಡಿದರು. ಈ ವೇಳೆ ತಮ್ಮ ಪಕ್ಷದ ಸೀಟಿ ಚಿಹ್ನೆಗೆ ಮತ ಚಲಾಯಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.
“ನಾನು ಟಿವಿಕೆ ಹಾಗೂ ಅದರ ಸೀಟಿ ಚಿಹ್ನೆಗೆ ಮತ ಚಲಾಯಿಸುವಂತೆ ಜನರಲ್ಲಿ ಮನವಿ ಮಾಡುತ್ತೇನೆ. ನಾವಿಲ್ಲಿ ಜನರಿಗಾಗಿ ಇದ್ದೇವೆ ಹಾಗೂ ಜನರಿಗಾಗಿಯೇ ಇರಲಿದ್ದೇವೆ” ಎಂದು ಅವರು ಘೋಷಿಸಿದರು.
ಮುಂಬರುವ ವಿಧಾನಸಭಾ ಚುನಾವಣೆಯು ಆಡಳಿತಾರೂಢ ಡಿಎಂಕೆ ಹಾಗೂ ಟಿವಿಕೆ ನಡುವಿನ ನೇರ ಸ್ಪರ್ಧೆಯಾಗಿದೆ ಎಂದೂ ಅವರು ಬಣ್ಣಿಸಿದರು. ಈ ವೇಳೆ ಅವರು ಆಡಳಿತಾರೂಢ ಡಿಎಂಕೆ ಹಾಗೂ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದರು.
ಸ್ವಚ್ಛ ಆಡಳಿತ, ಕಲ್ಯಾಣ ಕಾರ್ಯಕ್ರಮಗಳು ಹಾಗೂ ಯುವಕರಿಗೆ ಬೆಂಬಲದ ಆಶ್ವಾಸನೆಗಳೊಂದಿಗೆ ಚುನಾವಣಾ ಕಣಕ್ಕಿಳಿದಿರುವ ವಿಜಯ್, 2026ರ ತಮಿಳುನಾಡು ವಿಧಾನಸಭಾ ಚುನಾವಣೆಯನ್ನು ರೋಚಕಗೊಳಿಸಿದ್ದಾರೆ.
ಪ್ರಮುಖ ನಾಯಕರಿಗೆ ಟಿವಿಕೆ ಸವಾಲು
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಪ್ರತಿನಿಧಿಸುವ ಕೊಳತ್ತೂರು ಕ್ಷೇತ್ರದಲ್ಲಿ ಟಿವಿಕೆ ಪರವಾಗಿ ವಿ.ಎಸ್. ಬಾಬು ಕಣಕ್ಕಿಳಿಯಲಿದ್ದಾರೆ. ಅದೇ ರೀತಿ, ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ವಿರುದ್ಧ ಚೆಪಾಕ್ ಕ್ಷೇತ್ರದಲ್ಲಿ ಕಾಂಗ್ರೆಸ್ ತೊರೆದು ಟಿವಿಕೆ ಸೇರಿರುವ ಸೆಲ್ವಂ ಅವರನ್ನು ಕಣಕ್ಕಿಳಿಸುವ ಮೂಲಕ ವಿಜಯ್ ಭರ್ಜರಿ ಪೈಪೋಟಿ ನೀಡಲು ಮುಂದಾಗಿದ್ದಾರೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಆಧವ್ ಅರ್ಜುನ್ ವಿಲ್ಲಿವಾಕ್ಕಂನಿಂದ ಹಾಗೂ ಸೆಂಗೊಟ್ಟೈಯನ್ ಗೋಬಿಚೆಟ್ಟಿಪಾಳ್ಯಂನಿಂದ ಸ್ಪರ್ಧಿಸಲಿದ್ದಾರೆ.
ಸಾಮಾನ್ಯರಿಗೆ ಆದ್ಯತೆ
ಅಭ್ಯರ್ಥಿಗಳ ಹೆಸರನ್ನು ಘೋಷಿಸಿ ಮಾತನಾಡಿದ ವಿಜಯ್, “ನಮ್ಮ ಅಭ್ಯರ್ಥಿಗಳು ಸಾಮಾನ್ಯ ಹಿನ್ನೆಲೆಯಿಂದ ಬಂದವರು. ಅವರು ಲೂಟಿ ಮಾಡಿದ ಅಥವಾ ಅಕ್ರಮ ಗಣಿಗಾರಿಕೆ ನಡೆಸಿದ ಅನುಭವ ಹೊಂದಿಲ್ಲ. ಪತ್ರಕರ್ತರ ಮೇಲೆ ಹಲ್ಲೆ ನಡೆಸುವವರೂ ನಮ್ಮಲ್ಲಿಲ್ಲ,” ಎಂದು ಡಿಎಂಕೆ ನಾಯಕರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಜೈಲಿಗೆ ಹೋಗಿ ಬಂದಿರುವ ಭ್ರಷ್ಟಾಚಾರದ ಆರೋಪ ಹೊತ್ತ ಡಿಎಂಕೆ ಅಭ್ಯರ್ಥಿಗಳ ಬಗ್ಗೆ ಜನರು ಯೋಚಿಸಬೇಕು ಎಂದು ಅವರು ಮನವಿ ಮಾಡಿದರು.
ಪ್ರಣಾಳಿಕೆಯ ಪ್ರಮುಖ ಆಶ್ವಾಸನೆಗಳು
ಮುಂಬರುವ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ‘ಮಾದಕ ದ್ರವ್ಯ ಮುಕ್ತ ತಮಿಳುನಾಡು’ ನಿರ್ಮಾಣ ಮಾಡುವುದಾಗಿ ವಿಜಯ್ ಭರವಸೆ ನೀಡಿದ್ದಾರೆ. ಇದರೊಂದಿಗೆ, 29 ವರ್ಷ ದಾಟಿದರೂ ಉದ್ಯೋಗ ಸಿಗದ ಯುವಕರಿಗೆ ಮಾಸಿಕ ಸಹಾಯಧನ ಹಾಗೂ ಸರ್ಕಾರಿ ಉದ್ಯೋಗ ನೇಮಕಾತಿಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ತರಲು ಹೊಸ ಕಾನೂನು ಜಾರಿಗೊಳಿಸುವುದಾಗಿ ಅವರು ಘೋಷಿಸಿದ್ದಾರೆ.
ತಮಿಳುನಾಡಿನ 234 ಕ್ಷೇತ್ರಗಳಿಗೆ ಏಪ್ರಿಲ್ 23 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಡಿಎಂಕೆ, ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟ, ಟಿವಿಕೆ ಹಾಗೂ ಪಿಎಂಕೆ-ಶಶಿಕಲಾ ಮೈತ್ರಿಕೂಟದ ನಡುವೆ ಚತುಷ್ಕೋನ ಸ್ಪರ್ಧೆ ಏರ್ಪಟ್ಟಿದೆ. ವಿಜಯ್ ಅವರ ಎಂಟ್ರಿಯಿಂದಾಗಿ ಈ ಬಾರಿಯ ಚುನಾವಣೆ ಇಡೀ ದೇಶದ ಗಮನ ಸೆಳೆದಿದೆ.
ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ’
ಮತದಾರರಿಗೆ ನೇರ ಮನವಿ ಮಾಡಿದ ವಿಜಯ್, ಆಯ್ಕೆಯಾದರೆ ಹೊಣೆಗಾರಿಕೆಯನ್ನು ಚೆನ್ನಾಗಿ ನಿಭಾಯಿಸುವುದಾಗಿ ಭರವಸೆ ನೀಡಿದರು. “ಗೆದ್ದ ನಂತರ, ನಾವು ಎಂದಿಗೂ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ ಅಥವಾ ಭ್ರಷ್ಟಾಚಾರದಲ್ಲಿ ತೊಡಗುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ. ನಾವು ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸುತ್ತೇವೆ, ಮಾದಕ ವಸ್ತು ಮುಕ್ತ ತಮಿಳುನಾಡನ್ನು ನಿರ್ಮಿಸುತ್ತೇವೆ. ಕಠಿಣ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುತ್ತೇವೆ” ಎಂದು ಅವರು ಹೇಳಿದರು.
“ಈ ರಾಜ್ಯದ ಜನರ ಹಿತಾಸಕ್ತಿಗಳಿಗೆ ವಿರುದ್ಧವಾಗಿ ನಾವು ಎಂದಿಗೂ ವರ್ತಿಸುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಇದು ನನ್ನ ಭರವಸೆ” ಎಂದು ಅವರು ತಮ್ಮ ಪಕ್ಷಕ್ಕೆ “ಒಂದು ಅವಕಾಶ” ಕೊಡಿ ಕೋರುತ್ತಾ ಹೇಳಿದರು.